ತಿಪಟೂರು: ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಕರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಯಂತಿ ಗ್ರಾಮದ ಬಳಿ ಸರ್ವೀಸ್ ರಸ್ತೆ ಹಾಗೂ ತಂಗುದಾಣ ನಿರ್ಮಿಸಬೇಕೆಂದು ಕರ್ನಾಟಕ ರಾಜ್ಯ ಕಾಡುಗೊಲ್ಲ ಸಂಘದ ತಾಲೂಕು ಅಧ್ಯಕ್ಷ ಬಾಲರಾಜು ಒತ್ತಾಯಿಸಿದರು.
ಅವರು ನಗರದ ತಾಲೂಕು ಕಚೇರಿ ಆವರಣದಲ್ಲಿ ಗ್ರಾಮಸ್ಥರು ಮತ್ತು ಸಂಘಟನೆಯ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡು, ಉಪ ವಿಭಾಗಾಧಿಕಾರಿ ಬಿ.ಕೆ.ಸಪ್ತಶ್ರೀ ರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ–206ರ ಚತುಷ್ಪಥ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದರಿಂದ ಗ್ರಾಮಸ್ಥರಿಗೆ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಹಾಗೂ ಜನ ಜಾನುವಾರುಗಳಿಗೆ ಓಡಾಡಲು ತುಂಬಾ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಪ್ರತಿದಿನ ಜಾನುವಾರು, ಮೇಕೆ, ಕುರಿಗಳೊಂದಿಗೆ ತಮ್ಮ ಹೊಲ, ತೋಟ, ಗದ್ದೆಗಳಿಗೆ ಹೋಗಲು 2-3 ಕಿಮೀ ದೂರ ಬಳಸಿಕೊಂಡು ಅಂಡರ್‌ಪಾಸ್ ಮೂಲಕ ಸಾಗಬೇಕು. ಇದರಿಂದ ರೈತಾಪಿ ವರ್ಗಕ್ಕೆ ತೀವ್ರ ಸಾಕಷ್ಟು ತೊಂದರೆಯಾಗುತ್ತಿದೆ. ಈ ವಿಚಾರವಾಗಿ ಹೆದ್ದಾರಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಉಡಾಫೆ ಉತ್ತರ ನೀಡುತ್ತಿದ್ದು, ನಿರ್ಲಕ್ಷಿಸುತ್ತಿದ್ದಾರೆ. ಈಗಾಗಲೇ ರಸ್ತೆ ದಾಟುವಾಗ ಅನೇಕ ಸಾವು-ನೋವು ಸಂಭವಿಸಿವೆ. ಹೆದ್ದಾರಿ ಅಧಿಕಾರಿಗಳು ಕೂಡಲೇ ನಮ್ಮ ಜಯಂತಿ ಗ್ರಾಮಕ್ಕೆ ಸರ್ವೀಸ್ ರಸ್ತೆ ಹಾಗೂ ಸುಸಜ್ಜಿತ ತಂಗುದಾಣ ನಿರ್ಮಿಸಬೇಕು. ಇಲ್ಲವಾದರೆ ರಸ್ತೆ ತಡೆ ಹಾಗೂ ಸಂಬಂಧಪಟ್ಟ ಇಲಾಖೆ ಮುಂಭಾಗ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದರು.
ಕರಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಗಂಗಮ್ಮ ಮಾತನಾಡಿ, ರಸ್ತೆ ವಿಸ್ತರಣೆಯಿಂದ ಗ್ರಾಮ ಹಾಗೂ ತೋಟಗಳು ಬೇರೆ ಬೇರೆಯಾಗಿದ್ದು, ರಸ್ತೆ ದಾಟಿ ಹೋಗಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಗ್ರಾಮಗಳನ್ನು ಬಿಟ್ಟು ಎಲ್ಲೋ ಬೇರೆ ಕಡೆ ವಿಭಜಕಗಳನ್ನು ನೀಡಿದ್ದು, ರೈತರು ದಿನನಿತ್ಯ ಕೃಷಿ ಚಟುವಟಿಕೆ ನಿಮಿತ್ತ ಪಕ್ಕದಲ್ಲಿರುವ ತೋಟ, ಹೊಲಗಳಿಗೆ ಮತ್ತು ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ತಾವುಗಳು ಹೆದ್ದಾರಿಯ ಅಧಿಕಾರಿಗಳಿಗೆ ಸೂಚಿಸಿ ಶೀಘ್ರ ಈ ಸಮಸ್ಯೆಯನ್ನು ಪರಿಹರಿಸುವಂತೆ ತಿಳಿಸಬೇಕು ಎಂದು ಕೋರಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಉಪಾಧ್ಯಕ್ಷ ಶಂಕರಪ್ಪ, ಸಂಘಟನಾ ಕಾರ್ಯದರ್ಶಿ ದಿನೇಶ್, ಮುಖಂಡ ಶಕುನಗಿರಿ ಜಯಣ್ಣ, ಗ್ರಾಮಸ್ಥರಾದ ಕಳಸಯ್ಯ, ಈರಣ್ಣ, ಬಸವರಾಜು, ದಿನೇಶ್ ಮತ್ತು ಚೇತನ್ ಸೇರಿದಂತೆ ಗ್ರಾಮಸ್ಥರು ಮತ್ತು ಸಂಘಟನೆಯ ಪದಾಧಿಕಾರಿಗಳಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


