ಈಗಾಗಲೇ ಆನ್ ಲೈನ್ ನಲ್ಲಿ ಹಲವರು ಹಲವು ರೀತಿಯಲ್ಲಿ ವಂಚನೆಗೊಳಗಾಗಿದ್ದಾರೆ. ಆದರೆ ಅರಣ್ಯ ಇಲಾಖೆಗೆ ವಂಚಿಸಿ ಪ್ರವಾಸಿಗರ ಹಣ ದೋಚಿದ ಪ್ರಕರಣ ಬೆಳಕಿಗೆ ಬಂದಿದ್ದು, ನಾಗರಹೊಳೆ ನ್ಯಾಷನಲ್ ಪಾರ್ಕ್ ಹೆಸರಿನಲ್ಲಿ ನಕಲಿ ವೆಬ್ ಸೈಟ್ ತಯಾರಿಸಿ ಹಣ ದೋಚುತ್ತಿರುವುದು ಬೆಳಕಿಗೆ ಬಂದಿದೆ.
ನಾಗರಹೊಳೆ ನ್ಯಾಷನಲ್ ಪಾರ್ಕ್ ಹೆಸರಿನಲ್ಲಿ ನಕಲಿ ವೆಬ್ ಸೈಟ್ ನ್ನು ಕಳೆದ ಜನವರಿಯಲ್ಲಿಯೇ ವಂಚಕರು ತೆರೆದಿದ್ದರಾದರೂ ಅದು ಬೆಳಕಿಗೆ ಬರಲು ಆರು ತಿಂಗಳೇ ಬೇಕಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿಯೇ ಇರಲಿಲ್ಲ. ಇದೀಗ ಬೆಳಕಿಗೆ ಬರುತ್ತಿದ್ದಂತೆಯೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಪ್ರವಾಸಿಗರು ಆನ್ ಲೈನ್ ನಲ್ಲಿ ಬುಕಿಂಗ್ ಮಾಡುವ ಮುನ್ನ ಇಲಾಖೆಯ ಅಧಿಕೃತ ವೆಬ್ ಸೈಟಾ ಎಂಬುದನ್ನು ಖಾತರಿ ಮಾಡಿಕೊಳ್ಳುವಂತೆ ಎಚ್ಚರಿಕೆ ನೀಡಿದೆ.
ಈ ಹಿಂದೆ ಜನವರಿಯಲ್ಲಿ ನಕಲಿ ವೆಬ್ ಸೈಟ್ ಮೂಲಕ ಇಲ್ಲಿಗೆ ಬುಕಿಂಗ್ ಮಾಡಿಕೊಂಡು ಪ್ರವಾಸಿಗರಿಗೆ ಸಾವಿರಾರು ರೂಪಾಯಿ ವಂಚನೆ ಮಾಡಲಾಗಿತ್ತು. ಬುಕಿಂಗ್ ಮಾಡಿದ ಪ್ರವಾಸಿಗರು ಸಫಾರಿ ಕೇಂದ್ರಕ್ಕೆ ಬಂದಾಗ ನಕಲಿ ಬುಕಿಂಗ್ ವಂಚನೆ ಬೆಳಕಿಗೆ ಬಂದಿತ್ತು. ಅಲ್ಲದೆ ಈ ವಂಚಕರು ಸಕ್ರಿಯರಾಗಿರುವುದು ಗಮನಕ್ಕೆ ಬಂದಿತ್ತು.
ವಿಷಯ ಗೊತ್ತಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಕೊಡಗು ಜಿಲ್ಲಾ ಪೋಲೀಸ್ ಅಧಿಕಾರಿಯವರಿಗೆ ಜನವರಿ ತಿಂಗಳಿನಲ್ಲೇ ದೂರು ಸಲ್ಲಿಸಿ ಸೂಕ್ತ ಕ್ರಮಕ್ಕೆ ಕೋರಿತ್ತು. ಆಗ ನಕಲಿ ವೆಬ್ ಸೈಟ್ ಗಳು ಸ್ಥಗಿತಗೊಂಡಿದ್ದವು. ಇದೀಗ ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿದ್ದಂತೆಯೇ ಮತ್ತೆ ವಂಚಕರು ಬಾಲ ಬಿಚ್ಚಿದ್ದು, ನಕಲಿ ವೆಬ್ ಸೈಟ್ ಗಳು ಸಕ್ರಿಯವಾಗಿರುವುದು ಅರಣ್ಯ ಇಲಾಖೆ ಗಮನಕ್ಕೆ ಬಂದಿರುವುದಾಗಿ ನಾಗರಹೊಳೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷ ಕುಮಾರ್ ಚಿಕ್ಕನರಗುಂದ ಮಾಹಿತಿ ನೀಡಿದ್ದಾರೆ.
ನಾಗರಹೊಳೆಯ ಅಧಿಕೃತ ವೆಬ್ ಸೈಟ್ ನಾಗರಹೊಳೆ ಟೈಗರ್ ರಿಸರ್ವ್ ಮಾತ್ರ ಆಗಿದೆ. (https://www.nagaraholetigerreserve.com/)
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


