ಬೆಂಗಳೂರು: ಶ್ರೀಕಿಯನ್ನು ಅಕ್ರಮವಾಗಿ ಬಂಧಿಸಿ ಕ್ರಿಪ್ಟೊ ವ್ಯಾಲೆಟ್ ನಿಂದ ಹಣ ಕಬಳಿಸಿದ ಆರೋಪದಲ್ಲಿ ಸಿಐಡಿ ಸೈಬರ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಇನ್ ಸ್ಪೆಕ್ಟರ್ ಬಂಧನವಾಗಿದೆ. ಚಂದ್ರಾಧರ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಇದೇ ಪ್ರಕರಣದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಪ್ರಶಾಂತ್ ಬಾಬು, ಲಕ್ಷ್ಮೀಕಾಂತಯ್ಯ ಹಾಗೂ ಸೈಬರ್ ಎಕ್ಸ್ ಪರ್ಟ್ ಸಂತೋಷ್ ಎಂಬುವವನ್ನು ಈ ಹಿಂದೆ ಬಂಧಿಸಲಾಗಿದೆ.
ಇನ್ನು ಆರೋಪಿಗಳನ್ನು ಅಕ್ರಮವಾಗಿ ವಶದಲ್ಲಿಟ್ಟುಕೊಂಡು ಹ್ಯಾಕಿಂಗ್, ಬಿಟ್ ಕಾಯಿನ್ ಗಳ ವರ್ಗಾವಣೆ ಮತ್ತು ಪಾಸ್ ವರ್ಡ್ ಬದಲಾವಣೆ ಮಾಡಿದ ಆರೋಪ ಎದುರಿಸುತ್ತಿದ್ದ ಡಿವೈಎಸ್ ಪಿ ಶ್ರೀಧರ್ ಕೆ. ಪೂಜಾರ್ ಅವರ ವಿರುದ್ಧ ಘೋಷಿತ ಆರೋಪಿ ಆದೇಶವನ್ನು ಮೇ 2ರಂದು ಹೈಕೋರ್ಟ್ ರದ್ದುಪಡಿಸಿತ್ತು. 2020ರಲ್ಲಿ ಕೆಂಪೇಗೌಡ ನಗರ ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಆರೋಪಿ ಸುಜಯ್ ಎಂಬಾತನನ್ನು ಬಂಧಿಸಿದ್ದರು. ಈತ ಡಾರ್ಕ್ ನೆಟ್ ನಲ್ಲಿ ಬಿಟ್ ಕಾಯಿನ್ ಮೂಲಕ ಡ್ರಗ್ಸ್ ಖರೀದಿ ಮಾಡಿದ್ದ ಮಾಹಿತಿ ಪಡೆದು ಜಾಲಾಡಿದಾಗ ಬಿಟ್ ಕಾಯಿನ್ ರೂವಾರಿ ಶ್ರೀಕೃಷ್ಣ ಆಲಿಯಾಸ್ ಶ್ರೀಕಿ ಸಿಕ್ಕಿಬಿದ್ದಿದ್ದ.
ಶ್ರೀಕಿ ಆ್ಯಂಡ್ ಗ್ಯಾಂಗ್ ಸರ್ಕಾರಿ ವೆಬ್ ಸೈಟ್ ಸೇರಿದಂತೆ ಆನ್ ಲೈನ್ ಗೇಮಿಂಗ್ ಆ್ಯಪ್ ಗಳನ್ನು ಹ್ಯಾಕ್ ಮಾಡಿ ಕೋಟ್ಯಾಂತರ ರೂಪಾಯಿ ದೋಚಿದ್ದ. ಅಕ್ರಮ ಸಂಪಾದನೆ ಮಾಡಿರುವ ಬಗ್ಗೆ ಹೊರಬಂದ ಬೆನ್ನಲೇ ಪ್ರಕರಣವನ್ನ ಸಿಸಿಬಿಗೆ ಹಸ್ತಾಂತರಿಸಲಾಗಿತ್ತು. ಸಿಸಿಬಿ ತನಿಖೆ ವೇಳೆ ದೊಡ್ಡ ಪ್ರಮಾಣದಲ್ಲಿ ವಂಚಿಸಿರುವುದಾಗಿ ತಿಳಿದು ಬಂದಿತ್ತು. ಪ್ರಕರಣದ ಹಿಂದೆ ಹಿಂದಿನ ಸರ್ಕಾರದ ಕೆಲ ರಾಜಕಾರಣಿಗಳು ಶಾಮೀಲಾಗಿದ್ದಾರೆ ಎಂದು ಪ್ರತಿಪಕ್ಷವಾಗಿದ್ದ ಕಾಂಗ್ರೆಸ್ ಆರೋಪಿಸಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಬಿಟ್ ಕಾಯಿನ್ ಪ್ರಕರಣವನ್ನ ಮರು ತನಿಖೆ ನಡೆಸಲು ಕಳೆದ ವರ್ಷ ಜುಲೈನಲ್ಲಿ ಎಸ್ಐಟಿ ರಚಿಸಿತ್ತು. ಹಿರಿಯ ಐಪಿಎಸ್ ಮನೀಶ್ ಕರ್ಬೀಕರ್ ನೇತೃತ್ವದ ತಂಡ ಶ್ರೀಕಿ ಸೇರಿದಂತೆ ಇನ್ನಿತರ ಆರೋಪಿಗಳ ವಿಚಾರಣೆ ನಡೆಸಿತ್ತು ಹಾಗೂ ಆಗ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರನ್ನ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


