ಔರಾದ್: ಬಿಜೆಪಿಯಿಂದ ದೇಶದ ಉದ್ಧಾರ ಸಾಧ್ಯವಿಲ್ಲ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಬಡವರ ಉದ್ಧಾರ ಆಗಿಲ್ಲ, ಬದಲಿಗೆ ಅಂಬಾನಿ ಮತ್ತು ಅದಾನಿ ಎಂಬ ಇಬ್ಬರು ಉದ್ಯಮಿಗಳು ದೊಡ್ಡ ಶ್ರೀಮಂತರಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಇಲ್ಲಿಯ ಘೂಳೆ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ವಿಧಾನ ಪರಿಷತ್ ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ದುಡಿಯುವ ಕೈಗಳಿಗೆ ಕೆಲಸ ನೀಡುವುದು ಕಾಂಗ್ರೆಸ್ ಸರಕಾರದ ಮೊದಲ ಆದ್ಯತೆಯಾಗಿದೆ. ಆದರೆ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಆದರೆ ಕಾಂಗ್ರೆಸ್ ರಾಜ್ಯದಲ್ಲಿ ನುಡಿದಂತೆ ಐದು ಗ್ಯಾರಂಟಿಗಳು ಜಾರಿಗೆ ತರುವ ಮೂಲಕ 30 ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಮಾಡಿಕೊಂಡಿದೆ. ಅಲ್ಲದೇ 30—40 ಸಾವಿರಕ್ಕೂ ಹೆಚ್ಚು ಹುದ್ದೆಗಳ ಅಧಿಸೂಚನೆ ಹೊರಡಿಸಿದೆ. ನಿರುದ್ಯೋಗಿಗಳಿಗೆ ಸ್ಪಂದಿಸುವದು ಕಾಂಗ್ರೆಸ್ ಸರಕಾರದಿಂದ ಮಾತ್ರ ಸಾಧ್ಯ ಎಂದರು.
ರಾಜ್ಯದಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ನೇಮಕಾತಿ ಮಾಡಿಕೊಂಡಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನರೇಂದ್ರ ಮೋದಿ ಸರಕಾರ ಕೇವಲ ಅದಾನಿ, ಅಂಬಾನಿ ಅವರ ಅಭೀವೃದ್ಧಿಗೆ ಶ್ರಮಿಸುತ್ತಿದೆ. ಕೇಂದ್ರ ಸರಕಾರ ಬಡವರ ಪರ ಯಾವುದೇ ಯೋಜನೆಗಳನ್ನು ಜಾರಿಗೆ ತರದೇ ಕೇವಲ ಅದಾನಿ, ಅಂಬಾನಿ ಪರ ಕೆಲಸ ಮಾಡಿದೆ. ಎಲ್ಲವೂ ಖಾಸಗೀಕರಣ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚಂದ್ರಶೇಖರ ಪಾಟೀಲ್ ಗೆಲುವು ಸಾಧಿಸಿದರೇ ನನಗೆ ಶಕ್ತಿ ತುಂಬಿದಂತಾಗುತ್ತದೆ ಎಂದರು.
ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿರುವದು ಕಾಂಗ್ರೆಸ್ ಸರಕಾರ. ಈ ಭಾಗಕ್ಕೆ ಉನ್ನತ ಶಿಕ್ಷಣದಲ್ಲಿ ಮೀಸಲಾತಿ ನೀಡಿದರಿಂದ 70 ವೈದ್ಯಕೀಯ ಸೀಟುಗಳಿಂದ 700ಕ್ಕೆ ಏರಿಕೆಯಾಗಿದೆ ಎಂದರು.
ಎಂಎಲ್ ಸಿ ಭೀಮರಾವ ಪಾಟೀಲ್ ಮಾತನಾಡಿ, ಕಳೆದ ಬಾರಿ ಚಂದ್ರಶೇಖರ ಪಾಟೀಲ್ ಅವರು ಗೆಲುವು ಸಾಧಿಸಿದ ಪರಿಷತ್ ನಲ್ಲಿಯೂ ಹಾಗೂ ಹೊರಗೆ ಪದವೀಧರರ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಏಳನೇ ವೇತನ ಆಯೋಗ ಜಾರಿಗೊಳಿಸುವದು. ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವದು. ಖಾಲಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುವುದು ಕಾಂಗ್ರೆಸ್ ಸರಕಾರ ಯೋಜನೆಯಾಗಿವೆ. ಆದ್ದರಿಂದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಮುಖ್ಯವಾಗಿದೆ ಎಂದರು.
ಕಾಂಗ್ರೆಸ್ ಮುಖಂಡ ಡಾ. ಭೀಮಸೇನರಾವ ಶಿಂಧೆ ಮಾತನಾಡಿ, ದೇಶದಲ್ಲಿ ಬಿಜೆಪಿ ವಿರುದ್ಧ ವಾತಾವರಣ ಗಟ್ಟಿಯಾಗತೊಡಗಿದ್ದು, ಕಾಂಗ್ರೆಸ್ ಪರ ಅಲೆ ಸೃಷ್ಟಿಯಾಗಿದೆ. ಯುವಕರಿಂದಲೇ ಅಧಿಕಾರಕ್ಕೆ ಬಂದು 10 ವರ್ಷಗಳಿಂದ ದೇಶದಲ್ಲಿ ಬಿಜೆಪಿ ಆಳ್ವಿಕೆ ನಡೆಸಿದರು ಯುವಜನರನ್ನು ನಿರ್ಲಕ್ಷಿಸಿದ ಬಿಜೆಪಿಗೆ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ಆನಂದ ಚವ್ಹಾಣ, ಮಾಜಿ ತಾಪಂ ಉಪಾಧ್ಯಕ್ಷ ನೇಹರು ಪಾಟೀಲ್, ಶಿವರಾಜ ದೇಶಮುಖ, ಡಾ. ಪೈಯಾಜ್ ಅಲೀ, ರಾಮಣ್ಣ ವಡಿಯಾರ್, ಜಾನ್ ವಿಸ್ಲಿ, ಹಣಮಂತರಾವ ಚವ್ಹಾಣ, ಸುಧಾಕಾರ ಕೊಳ್ಳುರ್, ಚನ್ನಪ್ಪ ಉಪ್ಪೆ, ಪ್ರಕಾಶ ಪಾಟೀಲ್, ಅಮರ ಜಾಧವ್, ನಾಗಪ್ಪ ಮಾಸ್ಟರ್, ಸಾಯಿಕುಮಾರ, ಸುನಿಲಕುಮಾರ ದೇಶಮುಖ, ಬಸವರಾಜ ದೇಶಮುಖ ಸೇರಿದಂತೆ ಅನೇಕರಿದ್ದರು.
ನನ್ನ ಕೈ ಬಲಪಡಿಸಿ ಖಂಡ್ರೆ:
ಡಾ. ಚಂದ್ರಶೇಖರ ಪಾಟೀಲ್ ಅವರಿಗೆ ಗೆಲ್ಲಿಸುವ ಮೂಲಕ ನನ್ನ ಕೈ ಬಲಪಡಿಸಬೇಕು ಎಂದು ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದ್ದಾರೆ. ಪಾಟೀಲ್ ಅವರು ಬೀದರನವರೇ ಆಗಿದ್ದು, ಅವರಿಗೆ ಗೆಲ್ಲಿಸಿದರೇ ಸಿಎಂ ಬಳಿಯಿಂದ ಹೆಚ್ಚಿನ ಅನುದಾನ ತರಲು ನನಗೆ ಮತ್ತಷ್ಟು ಸಹಕಾರಿಯಾಗುತ್ತದೆ ಎಂದರು.
ಎಂಪಿ ಚುನಾವಣೆ ಗೆಲ್ಲುವ ವಿಶ್ವಾಸ:
ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ಗೆಲುವಿಗಾಗಿ ಔರಾದ್ ತಾಲೂಕಿನ ಜನ ಶ್ರಮಿಸಿದ್ದಾರೆ. ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಸಚಿವ ಈಶ್ವರ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು. ಇಲ್ಲಿಯ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ. ಔರಾದನಿಂದ ಕನಿಷ್ಟ 15–20 ಸಾವಿರ ಲೀಡ್ ಕಾಂಗ್ರೆಸ್‌ಗೆ ಸಿಗಲಿದೆ ಎಂದು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.
ಎಂಎಲ್ಸಿ ಮಾಡಲು ಒತ್ತಾಯ:
ಕಳೆದ 10ವರ್ಷದಿಂದ ಡಾ. ಭೀಮಸೇನರಾವ ಶಿಂಧೆ ಅವರು ಕಾರ್ಯಕರ್ತರೊಂದಿಗೆ ಪಕ್ಷದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅವರಿಗೆ ಅಥವಾ ಅರ್ಹರಿಗೆ ಗುರುತಿಸಿ ಔರಾದ್ ತಾಲೂಕಿನ ವ್ಯಕ್ತಿಗೆ ಈ ಬಾರಿ ಎಂಎಲ್ಸಿ ಮಾಡಬೇಕು ಎಂದು ಸಚಿವ ಈಶ್ವರ ಖಂಡ್ರೆ ಅವರಿಗೆ ಇಲ್ಲಿಯ ಕಾರ್ಯಕರ್ತರು ಲಿಖಿತ ಮನವಿಪತ್ರ ಸಲ್ಲಿಸಿದರು. ಔರಾದ್ ಕಾರ್ಯಕರ್ತರಿಗೆ ಶಕ್ತಿ ತುಂಬಲು ಇಲ್ಲಿಯ ವ್ಯಕ್ತಿಗೆ ಎಂಎಲ್ಸಿ ಮಾಡಬೇಕು ಇದರಿಂದ ಪಕ್ಷಕ್ಕೆ ಇನ್ನಷ್ಟು ಶಕ್ತಿ ತುಂಬಿದಂತಾಗುತ್ತದೆ ಎಂದು ಮನವಿಪತ್ರದಲ್ಲಿ ತಿಳಿಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


