ಮೈಸೂರು: ತಿಂಡಿಯ ಪ್ಯಾಕೆಟ್ ನೊಂದಿಗೆ ಬಂದಿದ್ದ ಸಣ್ಣ ಪ್ಲಾಸ್ಟಿಕ್ ಆಟಿಕೆ ಚೆಂಡನ್ನು (Plastic Toy Ball) ಅಚಾನಕ್ಕಾಗಿ ನುಂಗಿದ ಪರಿಣಾಮ ಗಂಟಲಲ್ಲಿ ಸಿಲುಕಿ ಐದು ವರ್ಷದ ಬಾಲಕನೊಬ್ಬ ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟಿರುವ ಆಘಾತಕಾರಿ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಡೆದಿದೆ.
ಮೃತರನ್ನು ಹುಣಸೂರು ತಾಲೂಕಿನ ಗೌರಿಪುರ ಗ್ರಾಮದ ಸಂತೋಷ್ ಹಾಗೂ ಐಶ್ವರ್ಯ ದಂಪತಿಯ ಏಕೈಕ ಪುತ್ರ ಮುಕುಂದ್ ಮಯೂರ್ (5) ಎಂದು ಗುರುತಿಸಲಾಗಿದೆ. ಈ ಬಾಲಕ ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷೆ ಗೌರಮ್ಮ ಹಾಗೂ ಶಂಕರ್ ನಾಯಕ ಅವರ ಮೊಮ್ಮಗನಾಗಿದ್ದಾರೆ.
ಸಂತೋಷ್ ಅವರ ಮನೆಯವರು ತಂದಿದ್ದ ಚಿಪ್ಸ್/ಕುರ್ ಕುರೆ ಪ್ಯಾಕೆಟ್ ನೊಳಗೆ ಉಚಿತ ಕೊಡುಗೆಯಾಗಿ (Complimentary item) ಸಣ್ಣದಾದ ಪ್ಲಾಸ್ಟಿಕ್ ಆಟಿಕೆ ಬಾಲ್ ಬಂದಿತ್ತು. ತಿಂಡಿ ತಿನ್ನುವ ವೇಳೆ ಆ ಪ್ಲಾಸ್ಟಿಕ್ ಬಾಲ್ ನೊಂದಿಗೆ ಬಾಲಕ ಆಟವಾಡುತ್ತಿದ್ದನು. ಈ ವೇಳೆ ಆಟಿಕೆ ಬಾಲ್ ಅನ್ನು ಅಚಾನಕ್ಕಾಗಿ ನುಂಗಿದ್ದು, ಅದು ನೇರವಾಗಿ ಗಂಟಲಲ್ಲಿ ಬಂದು ಸಿಲುಕಿಕೊಂಡಿದೆ.
ಬಾಲಕನಿಗೆ ಉಸಿರಾಟದ ತೊಂದರೆಯಾಗಿ ಅಸ್ವಸ್ಥಗೊಳ್ಳುವುದನ್ನು ಕಂಡು ಕಂಗಾಲಾದ ಕುಟುಂಬದವರು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಮಾರ್ಗಮಧ್ಯದಲ್ಲೇ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮಗುವನ್ನು ಕಳೆದುಕೊಂಡ ಪೋಷಕರ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ತಿಂಡಿಗಳ ಪ್ಯಾಕೆಟ್ ನೊಳಗೆ ಮಕ್ಕಳ ಪ್ರಾಣಕ್ಕೆ ಕಂಟಕವಾಗುವಂತಹ ಇಂತಹ ಅಪಾಯಕಾರಿ ಪ್ಲಾಸ್ಟಿಕ್ ವಸ್ತುಗಳನ್ನು ನೀಡುವುದರ ವಿರುದ್ಧ ಸಾರ್ವಜನಿಕವಾಗಿ ಹಾಗೂ ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
