ತುಮಕೂರು: ನಿವೃತ್ತ ಆರಕ್ಷಕ ಮಹಾನಿರೀಕ್ಷಕರಾದ ಸಿ.ಚಂದ್ರಶೇಖರ್ ಬರೆದಿರುವ ‘ಕಾವೇರಿ ವಿವಾದ –ಒಂದು ಐತಿಹಾಸಿಕ ಹಿನ್ನೋಟ’ ಪುಸ್ತಕ ನಗರದಲ್ಲಿಂದು ಲೋಕಾರ್ಪಣೆ ಗೊಂಡಿತು.
ನಗರದ ಎಸ್ ಎಸ್ ಐಟಿ ಕ್ಯಾಂಪಸ್ ನಲ್ಲಿ ಶನಿವಾರದಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮತ್ತು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ನಾರಾಯಣಗೌಡ ಅವರು ಪುಸ್ತಕ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಡಾ.ಕೆ.ನಾರಾಯಣಗೌಡ ಅವರು, ನ್ಯಾಯಮೂರ್ತಿ ಗ್ರಿಫ್ಫಿನ್ ಅವರು ನೀಡಿದ್ದ ಆದೇಶ ಕರ್ನಾಟಕಕ್ಕೆ ಅನುಕೂಲ ಆಗಿತ್ತು. ಆದರೆ, ಮದ್ರಾಸ್ ಸರ್ಕಾರದ ಒತ್ತಾಯದಿಂದಾಗಿ, ಬ್ರಿಟಿಷ್ ಸರ್ಕಾರ ಅದನ್ನು ಅಸಿಂಧುಗೊಳಿಸಿತು. ಆ ಸಂದರ್ಭದಲ್ಲಿ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಕಾವೇರಿ ನೀರಿನ ಮೇಲೆ ತಮಿಳುನಾಡಿಗೆ ಪರಂಪರಾನುಗತ ಹಕ್ಕು ಇರಲಿಲ್ಲ. ಪರಂಪರಾನುಗತ ಹಕ್ಕು ಇಲ್ಲದಿರುವಾಗ ತಮಿಳುನಾಡು ರಾಜ್ಯವು, ತನ್ನಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಲು ಬಿಡಬಾರದಿತ್ತು. ತಮಿಳುನಾಡು ಒಪ್ಪಂದ ಮೀರಿ, ಕೃಷಿ ಜಮೀನು ವಿಸ್ತರಿಸಿದೆ ಎಂದು ಕಾವೇರಿ ನದಿ ನ್ಯಾಯಮಂಡಳಿ ಕೂಡ ಹೇಳಿದೆ. ಅದರೇ ಆನಂತರ ಕಾನೂನು ಮಂಡನೆಯಲ್ಲಿ ರಾಜ್ಯದ ಹಿನ್ನೆಡೆಯಿಂದ ಸಾಕಷ್ಟು ನಷ್ಟವನ್ನು ಅನುಭವಿಸುವಂತಾಯಿತು ಎಂದರು.
ಅಂತರರಾಷ್ಟ್ರೀಯ ನಿಯಮಗಳಂತೆ ನದಿ ನೀರು ಹಂಚಿಕೆ ಸಮಾನ ಭಾಗಗಳಾಗಿ ಹಂಚಬೇಕಾಗಿತ್ತು. ಆದರೆ ಬ್ರಿಟೀಷರ ಕಾಲದಿಂದ ಸುಪ್ರೀಂ ಕೋರ್ಟ್ ತೀರ್ಪಿನ ತನಕ ರಾಜ್ಯಕ್ಕೆ ವಿರುದ್ಧವಾದ ತಿರ್ಮಾನಗಳೇ ಬಂದವು. ಈ ತಪ್ಪುಗಳನ್ನು ಸರಿಪಡಿಸಿಕೊಳ್ಳು ಬದ್ದತೆಯ ಕೆಲಸ ಸಮರ್ಥವಾಗಿ ಆಗಲಿಲ್ಲ ಎಂದು ಡಾ.ಕೆ.ನಾರಾಯಣಗೌಡ ವಿಷಾದ ವ್ಯಕ್ತಪಡಿಸಿದರು.
ನಿವೃತ್ತ ಹಿರಿಯ ಪೋಲೀಸ್ ಅಧಿಕಾರಿ ಹಾಗೂ ಲೇಖಕರಾದ ಸಿ.ಚಂದ್ರಶೇಖರ್ ಅವರು ಮಾತನಾಡಿ, 1990 ರಲ್ಲಿ ಕಾವೇರಿ ವಿವಾದ ಭುಗಿಲೆದ್ದಾಗ 21 ಮಂದಿ ಬಲಿಯಾದರು. ಈ ಘಟನೆಯನ್ನು ಕಣ್ಣಾರ ಕಂಡ ನಾನು ಕಾವೇರಿ ವಿವಾದ ಐತಿಹಾಸಿಕ ಹಿನ್ನೆಲೆಯ ಸಮಗ್ರ ಮಾಹಿತಿಯನ್ನು ಜನಸಾಮಾನ್ಯರಿಗೆ ನೀಡಬೆಕಂದು ನಿರ್ಧರಿಸಿದ್ದೆ. ಈಗ ಸಾಧ್ಯವಾಗಿದೆ. ಕಾವೇರಿ ವಿಷಯದಲ್ಲಿ ಆರಂಭದಿಂದಲೂ ರಾಜ್ಯಕ್ಕೆ ಅನ್ಯಾಯವಾಗಿದೆ. ನಿಖರವಾದ ದಾಖಲೆಗಳನ್ನು ಹೊಂದಿದ್ದರೂ, ನ್ಯಾಯಾಲಯದಲ್ಲಿ ಕಾನೂನಾತ್ಮಕವಾಗಿ ಹೋರಾಟ ನಡೆಸುವಲ್ಲಿ ನಾವು ವಿಫಲವಾಗಿದ್ದೇವೆ ಎಂದರು.
ವಿವಾದದ ಇತಿಹಾಸ ಬ್ರಿಟಿಷ್ ರಾಜ್ ಅಡಿಯಲ್ಲಿದ್ದ ಮದ್ರಾಸ್ ಪ್ರಾಂತ್ಯ ಮತ್ತು ಮೈಸೂರು ರಾಜ್ಯದ ನಡುವೆ ನೀರಿನ ಹಂಚಿಕೆ ಮಾಡುವ ವಿವಾದ 1892 ರಲ್ಲಿ ಆರಂಭವಾಯಿತು. ಸುಪ್ರೀಂ ಕೋರ್ಟ್ 2018ರ ಫೆಬ್ರುವರಿ 16ರಂದು ನೀಡಿದ ತೀರ್ಪಿನ ತನಕ ನಾವೇ ಮಾಡಿಕೊಂಡಿರುವ ಕಾನೂನು ತೊಡಕುಗಳಿಂದ ಅನ್ಯಾಯವಾಗಿದೆ. ನಮ್ಮ ಸಂವಿಧಾನದಲ್ಲಿ ಅವಕಾಶವಿದೆ. ದೇಶದಲ್ಲಿ ಯಾವುದೇ ಒಪ್ಪಂದಗಳಿಗೆ ಶಾಶ್ವತ ಮನ್ನಣೆ ಇಲ್ಲ. ಕಾಲ ಮತ್ತು ಪರಿಸ್ಥಿತಿಗೆ ತಕ್ಕಂತೆ ಪರಸ್ಪರ ಮಾತುಕತೆ ಒಪ್ಪಂದಗಳು ಆಗುತ್ತವೆ. ಕಾವೇರಿ ವಿಷಯದಲ್ಲೂ ಅನ್ವಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸಾಹೇ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ ಮಾತನಾಡಿ, ಕಾವೇರಿ ನಾಡಿನ ಅಮೂಲ್ಯ ಜಲಸಂಪತ್ತು. ಅದರ ಅರಿವುವನ್ನು ತಿಳಿದುಕೊಳ್ಳುವುದು ಮುಖ್ಯ. ಯವಜನತೆ ಅದರಲ್ಲೂ ವಿದ್ಯಾರ್ಥಿಗಳು ಜಲಸಂಪತ್ತಿನ ಮೌಲ್ಯಗಳನ್ನು ಕುರಿತು, ಜಲಮೂಲಗಳ ರಕ್ಷಣೆಗೆ ಮುಂದಾಗಬೇಕಿದೆ. ಮೊಬೈಲ್ ಗಳ ಅಡಿಯಾಳಾಗದೇ ವಿಚಾರ ಮಂಥನೆಗಳಿಗೆ ಕಿವಿಕೊಡಬೇಕಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ರೈತಸಂಘದ ಮುಖಂಡರಾದ ಸುನಂದಾ ಜಯರಾಮು, ರಾಜ್ಯದ ಕಾವೇರಿ ಕಣಿವೆ ಜಲಾಶಯಗಳಲ್ಲಿನ ನಮ್ಮ ಪಾಲಿನ ಹಕ್ಕನ್ನು ಪಡೆದುಕೊಳ್ಳುವಲ್ಲಿ ಆಡಳಿತರೂಢ ಸರ್ಕಾರಗಳು ಎಡುವುತ್ತಲೆ ಇವೆ. ಅಂಕಿ—ಅಂಶಗಳ ದಾಖಲೀಕರಣ, ನ್ಯಾಯಾಲಯದಲ್ಲಿ ಸಮರ್ಥ ವಾದ ಮಂಡನೆಯಿಲ್ಲದೆ ವೈಫಲ್ಯ ಅನುಭವಿಸುವಂತಾಗಿದೆ. ಕಾವೇರಿ ಜಲವಿವಾದ ಸಂಪೂರ್ಣ ಅಂಕಿ ಅಂಶಗಳನ್ನು ಒಳಗೊಂಡಿರುವ ಪುಸ್ತಕ ಪ್ರಕಟಣೆಗಳನ್ನು ಕಾವೇರಿ ಕಣಿವೆಯ 8 ಜಿಲ್ಲೆಗಳಲ್ಲಿ ಜನಜಾಗೃತಿ ಸಮಾವೇಶಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ವಿವರಿಸಿದರು.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿದೇರ್ಶಕ ಡಾ.ಜಿ.ಎಸ್. ಶ್ರೀನಿವಾಸರೆಡ್ಡಿ, ಎಸ್ ಎಸ್ ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್, ರಾಜ್ಯ ರೈತಸಂಘದ ಮುಖಂಡರಾದ ಬೋರೇಗೌಡ, ಶ್ರೀ ಸಿದ್ಧಾರ್ಥ ಇನ್ಸಿಟ್ಯೂಟ್ ಆಫ್ ಬ್ಯೂಸಿನೆಸ್ ಮ್ಯಾನೇಜ್‌ಮೆಂಟ್ ಪ್ರಾಂಶುಪಾಲರಾದ ಡಾ.ಮಮತ ಜಿ, ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್ ಸೇರಿದಂತೆ ಬೋಧಕ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕನ್ನಡ ಪ್ರಾಧ್ಯಾಪಕರಾದ ಡಾ.ರೇಣುಕಾಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕರಾದ ರಾಜೇಶ್ ಸ್ವಾಗತಿಸಿದರೆ, ಶಾಲಿಕ ವಂದನೆ ಸಲ್ಲಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q