ತುಮಕೂರು: ಡೆಲ್ಲಿ ಪೊಲೀಸ್ ಎಸ್ಟಾಬ್ಲಿಷ್ ಮೆಂಟ್ ಆಕ್ಟ್ ಅಡಿಯಲ್ಲಿ ಸಿಬಿಐಗೆ ಬೇರೆ ಬೇರೆ ರಾಜ್ಯಗಳಿಗೆ ತೆರಳಿ ತನಿಖೆ ಮಾಡಲು ಅವಕಾಶವಿದೆ. ಆದರೆ ಈಗ ರಾಜ್ಯ ಸರಕಾರದ ಅನುಮತಿ ಪಡೆದು ರಾಜ್ಯದಲ್ಲಿ ಸಿಬಿಐ ತನಿಖೆ ಮಾಡುವಂತೆ ಆದೇಶ ಹೊರಡಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿಬಿಐ ವಿವಿಧ ರಾಜ್ಯಗಳಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೇಲೆ ತನಿಖೆ ಮಾಡಬಹುದು. ಕೆಲವು ರಾಜ್ಯದಲ್ಲಿ ಸಿಬಿಐ ನೇರವಾಗಿ ಬಂದು ತನಿಖೆ ಮಾಡಬಹುದು. ನಮ್ಮ ರಾಜ್ಯದಲ್ಲಿಯೂ ಕೂಡ ಇಲ್ಲಿವರೆಗೂ ಅದೇ ರೀತಿ ಇತ್ತು. ಈ ಹಿಂದೆ ಬೇಡ ಎಂದು ಮಾಡಿದ್ದೇವೆ ಎಂದು ತಿಳಿಸಿದರು.
ಈ ಹಿಂದೆ ರಾಜ್ಯ ಸರಕಾರ ಎರಡು ಮೂರು ಬಾರಿ ಆ ರೀತಿ ತೀರ್ಮಾನ ಮಾಡಿದೆ. ಇದು ಮೊದಲ ಬಾರಿ ಅಲ್ಲ. ಅನುಮತಿ ಕೊಡುವಂತಹ ಸಂದರ್ಭ ಬಂದ್ರೆ ರಾಜ್ಯ ಸರಕಾರ ಕೊಡಬೇಕಾಗುತ್ತದೆ. ಅನುಮತಿ ಕೊಡುವುದಿಲ್ಲ ಎಂದು ಹೇಳಿಲ್ಲ. ಸರಕಾರದ ಈ ಆದೇಶ ಸಿಬಿಐಗೆ ಮಾತ್ರ ಸೀಮಿತವಾಗಿರುತ್ತದೆ ಎಂದರು.
ಲೋಕಾಯುಕ್ತ ಸಂಸ್ಥೆಗೆ ಮೊನ್ನೆ ಜನಪ್ರತಿನಿಧಿಗಳ ಟ್ರಯಲ್ ಕೋರ್ಟ್ ನಲ್ಲಿ ತನಿಖೆ ಮಾಡುವಂತೆ ಆದೇಶ ಮಾಡಲಾಗಿದೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಎಫ್ ಐ ಆರ್ ದಾಖಲು ಮಾಡಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ಪ್ರಾರಂಭ ಮಾಡಲು ಎಫ್ ಐಆರ್ ದಾಖಲು ಮಾಡಲಾಗಿದೆ. ಈಗಾಗಲೇ ಯಾವ್ದೆ ತನಿಖೆಗೂ ಸಿದ್ದ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಹೀಗಾಗಿ ತನಿಖೆಗೆ ಯಾವ್ದೆ ವಿರೋಧವಿಲ್ಲ ತನಿಖೆ ಮಾಡಲಿ. ತನಿಖೆಯ ವರದಿ ಆಧಾರದ ಮೇಲೆ ನಾವು ಮತ್ತು ಮುಖ್ಯಮಂತ್ರಿಗಳು ತೆಗೆದುಕೊಳ್ಳುತ್ತೇವೆ ಎಂದರು.
ತನಿಖೆಯಲ್ಲಿ ಸರಕಾರದ ನೇರ ಹಸ್ತಕ್ಷೇಪ ಇರುವುದಿಲ್ಲ. ಲೋಕಾಯುಕ್ತ ಪೊಲೀಸ್ ಸರಕಾರದ ಅಧೀನದಲ್ಲಿ ಇಲ್ಲ. ಸರಕಾರ ಅವರಿಗೆ ಸವಲತ್ತು ಕೊಡಬಹುದು, ಆದರೆ ಸರಕಾರದ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಇರುವುದಿಲ್ಲ. ಅದು ಸ್ವತಂತ್ರ ತನಿಖಾ ಸಂಸ್ಥೆಯಾಗಿದೆ. ಅವರೇ ಪಾರದಶಕವಾಗಿ ತನಿಖೆ ಮಾಡಲು ಅವಕಾಶವಿದೆ ಎಂದರು.
ಮೈಸೂರು ಲೋಕಾಯುಕ್ತ ಎಸ್ಪಿ ತನಿಖೆ ಮಾಡುವಂತೆ ನ್ಯಾಯಾಲಯ ಹೇಳಿದ್ದು, ಆದ್ರಿಂದ ತನಿಖೆಯನ್ನು ಮಾಡಲಿದ್ದಾರೆ. ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ನಾವೆಲ್ಲರೂ ಹೇಳಿದ್ದೇವೆ, ಮುಖ್ಯಮಂತ್ರಿಗಳು ಕೂಡ ನಾನು ರಾಜೀನಾಮೆ ಕೊಡುವುದಿಲ್ಲ ಎಂದಿದ್ದಾರೆ. ಈ ಸಂದಭದಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ವ್ಯಾಖ್ಯಾನ ಮಾಡುತ್ತಿದ್ದಾರೆ ನಾವು ಅದಕ್ಕೆಲ್ಲಾ ಉತ್ತರ ಕೊಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q