ಉತ್ತರಾಖಂಡದಲ್ಲಿ ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶ ಕಾಡ್ಗಿಚ್ಚಿಗೆ ಬಲಿಯಾದ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ಉತ್ತರಾಖಂಡ ರಾಜ್ಯ ಸರ್ಕಾರಗಳನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಕಾಡ್ಗಿಚ್ಚನ್ನು ತಡೆಗೆ ಅಗತ್ಯವಿರುವ ಅನುದಾನವನ್ನು ಯಾಕೆ ಬಿಡುಗಡೆ ಮಾಡಿಲ್ಲ? ಅರಣ್ಯ ಸಿಬ್ಬಂದಿಯನ್ನು ಮತಗಟ್ಟೆ ಕರ್ತವ್ಯಕ್ಕೆ ನಿಯೋಜಿಸಿದ್ದು ಯಾಕೆ ಎಂದು ಖಾರವಾಗಿ ಪ್ರಶ್ನಿಸಿದೆ. ಈ ಬಗ್ಗೆ ಪರಿಸರವಾದಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ಸರ್ಕಾರಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿತು.
ನವೆಂಬರ್ ನಿಂದ ಈವರೆಗೂ ಸಾವಿರಕ್ಕೂ ಅಧಿಕ ಬಾರಿ ರಾಜ್ಯದ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು. ಈವರೆಗೂ 1,100 ಹೆಕ್ಟೇರ್‌ಗೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಈ ಕಾಡ್ಗಿಚ್ಚು ತಡೆಗೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ₹ 10 ಕೋಟಿ ರೂ ಬೇಡಿಕೆ ಸಲ್ಲಿಸಿದ್ದರೂ ನೀಡಿದ್ದು ಕೇವಲ ₹ 3.15 ಕೋಟಿ ನೀಡಲಾಗಿದೆ ಎಂಬ ವರದಿಯನ್ನು ಕೋರ್ಟ್ ಮುಂದಿಡಲಾಗಿತ್ತು. ಏಪ್ರಿಲ್ 19ರಂದು ಉತ್ತರಾಖಂಡದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ನಡೆದಿತ್ತು.
ಚುನಾವಣಾ ಸಂಬಂಧಿತ ಕರ್ತವ್ಯಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ನಿಯೋಜಿಸುವ ಕುರಿತು ಈ ಹಿಂದೆಯೂ ಕೋರ್ಟ್ ಪ್ರಶ್ನಿಸಿತ್ತು. ಜೊತೆಗೆ ಅರಣ್ಯ ಸಿಬ್ಬಂದಿ, ಲಭ್ಯವಿರುವ ಅಗ್ನಿ ಶಾಮಕ ದಳದ ಸಿಬ್ಬಂದಿ ಸರಿಯಾದ ಉಪಕರಣ, ಸಲಕರಣೆಗಳಿಲ್ಲದೆ ಗಂಭೀರ ಸ್ವರೂಪದ ಕಾಡ್ಗಿಚ್ಚನ್ನು ನಂದಿಸಬೇಕಾಗಿತ್ತು. ಇದಕ್ಕೆ ಕೋರ್ಟ್ ಬೇಸರ ವ್ಯಕ್ತಪಡಿಸಿದ್ದು ಸರ್ಕಾರ ಜವಾಬ್ದಾರಿ ಮರೆತಿದೆ ಎಂದು ಟೀಕಿಸಿತ್ತು.
ಕಾಡ್ಗಿಚ್ಚು ತಡೆಯುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಚ್ ಬಿಸಿ ಮುಟ್ಟಿಸಿರುವುದು ಇದೇ ಮೊದಲಲ್ಲ. ಕಾಡ್ಗಿಚ್ಚನ್ನು ನಂದಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರಕ್ಕೆ ಎಲ್ಲದಕ್ಕೂ ಮಳೆ ದೇವತೆಗಳನ್ನು ಅಥವಾ ಮೋಡ ಬಿತ್ತನೆಯನ್ನು ನಂಬಿ ಕೆಲಸ ಮಾಡದಿರಿ ಎಂದು ತಿಳಿಸಿತ್ತು.
ಇತ್ತೀಚೆಗೆ ರಾಜ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಾಗ ಕಾಡಂಚಿನ ಗ್ರಾಮದಲ್ಲಿ ದನದ ಹಟ್ಟಿಯನ್ನು ಉಳಿಸಿಕೊಳ್ಳಲು ಯತ್ನಿಸಿದ್ದ ಸಾವಿತ್ರಿ ಎಂಬ 65 ವರ್ಷದ ಮಹಿಳೆಗೆ ಬೆಂಕಿ ತಗಲಿ ಮೃತಪಟ್ಟಿದ್ದರು. ಕಾಡಿಗೆ ಬೆಂಕಿ ಹಚ್ಚಿದ ನಾಲ್ವರು ಆರೋಪಿಗಳ ಮೇಲೆ ಕೇಸು ದಾಖಲಾಗಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296