ಬೆಂಗಳೂರು: ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ 46 ಎಕರೆ ವಿಸ್ತೀರ್ಣದ ಮಾರನಕಟ್ಟೆ ಕೆರೆಯ 21 ಎಕರೆ ಪ್ರದೇಶವನ್ನು ಅಕ್ರಮವಾಗಿ ಆಕ್ರಮಿಸಿಕೊಂಡು ಸರ್ಕಾರದ ವಿವಿಧ ಇಲಾಖೆಗಳನ್ನು ಸೇರಿದಂತೆ, ಖಾಸಗಿ ಸಂಘ–ಸಂಸ್ಥೆಗಳು ಕಟ್ಟಡಗಳನ್ನು ನಿರ್ಮಿಸಿ ಭಾಗಶಃ ಕೆರೆಯನ್ನು ನಾಶಪಡಿಸಿರುವ ಕುರಿತು ಇಂದು ಲೋಕಾಯುಕ್ತರಲ್ಲಿ ದೂರು ದಾಖಲಾಗಿದೆ.
ಈ ದೂರುವನ್ನು ನೈಜ ಹೋರಾಟಗಾರರ ವೇದಿಕೆಯ ಹಿರಿಯ ಸಮಾಜಸೇವಕ ಹೆಚ್.ಎಂ.ವೆಂಕಟೇಶ್, ಕಾಳಜಿ ಫೌಂಡೇಶನ್‌ನ ಜಿ.ಎಲ್. ನಟರಾಜ್, ಮಾಹಿತಿ ಹಕ್ಕು ರಾಜ್ಯ ವೇದಿಕೆಯ ಹೆಚ್.ಎಸ್. ಸ್ವಾಮಿ ಮತ್ತು ಮಾಹಿತಿ ಅಧ್ಯಯನ ಕೇಂದ್ರದ ಎಲ್.ಎಸ್. ಮಲ್ಲಿಕಾರ್ಜುನ್ ಅವರು ಸಲ್ಲಿಸಿದ್ದಾರೆ.
ಕಾನೂನು ಉಲ್ಲಂಘಿಸಿ ಕೆರೆಯೊಳಗೆ ನಿರ್ಮಿಸಿದ ನ್ಯಾಯಾಧೀಶರ ವಸತಿಗೃಹ, ಶಿಕ್ಷಣ ಇಲಾಖೆಯ ಕಟ್ಟಡಗಳು ಸೇರಿದಂತೆ ವಿವಿಧ ಸರ್ಕಾರಿ ಕಟ್ಟಡಗಳನ್ನು ತೆರವುಗೊಳಿಸಿ ಕೆರೆಯನ್ನು ಪುನಶ್ಚೇತನಗೊಳಿಸುವಂತೆ ಅವರು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಉಪಲೋಕಾಯುಕ್ತರು ಕೆರೆಯ ಸ್ಥಿತಿಗತಿಗಳನ್ನು ಪರಿಶೀಲಿಸಲು ಭೇಟಿ ನೀಡಿದ್ದು, ಅಲ್ಲಿನ ಹಂದಿ ಜೋಗಿ ಜನಾಂಗದ 42 ಕುಟುಂಬಗಳನ್ನು ಸ್ಥಳಾಂತರಿಸಲು ತಕ್ಷಣದ ಕ್ರಮ ಕೈಗೊಳ್ಳುವಂತೆ ತಾಲೂಕು ಆಡಳಿತಕ್ಕೆ ಸೂಚನೆ ನೀಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q