ಮಧುಗಿರಿ: ಸರ್ಕಾರಿ ಕಚೇರಿಗಳ ಆವರಣಕ್ಕೆ, ಕಚೇರಿ ಅವಧಿ ಮುಗಿದ ನಂತರ ಯಾವುದೇ ವಾಹನಗಳನ್ನು ಒಳಗೆ ಬಿಡುವಂತಿಲ್ಲ ಎನ್ನುವ ನಿಯಮಗಳಿದ್ದರೂ, ರಾತ್ರಿ 10 ಮುಕ್ಕಾಲು ಗಂಟೆಯ ಸುಮಾರಿಗೆ ಕ್ರೈನ್ ವೊಂದು ಮಧುಗಿರಿ ತಾಲೂಕು ದಂಡಾಧಿಕಾರಿಗಳ ಕಚೇರಿ ಆವರಣಕ್ಕೆ ಪ್ರವೇಶಿಸಿದ ಘಟನೆ ನಡೆದಿದ್ದು, ಈ ಘಟನೆ ಸಾರ್ವಜನಿಕರಲ್ಲಿ ತಮ್ಮ ಕಡತಗಳ ಭದ್ರತೆಯ ಬಗ್ಗೆ ಆತಂಕ ಸೃಷ್ಟಿ ಮಾಡಿದೆ.
ಫೆಬ್ರವರಿ 10ರಂದು ಈ ಘಟನೆ ನಡೆದಿದೆ. ಈ ಘಟನೆ ಸಂಬಂಧ ನಮ್ಮತುಮಕೂರು ವಾಹಿನಿಗೆ ಕಾಳಜಿ ಫೌಂಡೇಶನ್‌ನ ಸಂಘಟನಾ ಕಾರ್ಯದರ್ಶಿ ಮಧುಗಿರಿ ಮಹೇಶ್ ಮಾಹಿತಿ ನೀಡಿದ್ದಾರೆ.
ರಾತ್ರಿ ಸುಮಾರು 9:30ಕ್ಕೆ ತಾಲೂಕು ದಂಡಾಧಿಕಾರಿಗಳ ಕಚೇರಿ ಆವರಣಕ್ಕೆ ಕ್ರೇನ್ ವಾಹನದ ಮೂಲಕ ಪೆಟ್ಟಿಗೆ ಅಂಗಡಿಯನ್ನು ತಂದು ಅಕ್ರಮವಾಗಿ ಇಡುತ್ತಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ. ಹೀಗಾಗಿ ಮಹೇಶ್ ಅವರು ಕೂಡಲೇ ದಂಡಾಧಿಕಾರಿಗಳ ಕಚೇರಿಯ ಸೆಕ್ಯೂರಿಟಿ ಬಳಿ ಕೇಳಿದಾಗ ತಹಶೀಲ್ದಾರ್ ರವರೇ ಯಾವುದಾದರೂ ಒಂದು ಮೂಲೆಯಲ್ಲಿ ಇಟ್ಟುಕೊಳ್ಳಲಿ ಎಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ಸಮಯ 10.45ಕ್ಕೆ ಕ್ರೇನ್ (ಕೆಎ 27 ಎನ್ 4749) ಮುಖಾಂತರ ಖಾಸಗಿ ವ್ಯಕ್ತಿಗಳು ಕಚೇರಿ ಸಿಬ್ಬಂದಿಗಳೊಂದಿಗೆ ಶಾಮೀಲಾಗಿ ಸರ್ಕಾರಿ ಕಚೇರಿಯ ಸಮಯವನ್ನು ಹೊರತುಪಡಿಸಿ ಹಾಗೂ ಸರ್ಕಾರಿ ಕಚೇರಿಯ ಬಂದೋಬಸ್ತ್ ಗೆ ದಕ್ಕೆಯಾಗುವಂತೆ ಅಂಗಡಿ ಪೆಟ್ಟಿಗೆಯನ್ನು ಅಕ್ರಮವಾಗಿ ಹಾಗೂ ಅತಿಕ್ರಮವಾಗಿ ಅವರಣಕ್ಕೆ ತಂದು ಕಚೇರಿಯ ಬಲಭಾಗದಲ್ಲಿ ಇಡಲು ಬಂದಾಗ ಸ್ಥಳೀಯ ಪತ್ರಕರ್ತರೂ ಆದ ನಂದೀಶ್ ಹಾಗೂ ಕಿರಣ್ ರವರ ಸಹಯೋಗದಲ್ಲಿ ತಡೆದು ಪ್ರಶ್ನಿಸಿದಾಗ ಅಲ್ಲಿರುವ ಸಿಬ್ಬಂದಿ ಎಸ್.ಡಿ.ಎ ಪ್ರಜ್ವಲ್ ಹಾಗೂ ತಹಶೀಲ್ದಾರ್ ಅವರೇ ಒಳಗೆ ಇಡಲು ಅನುಮತಿ ನೀಡಿದ್ದು, ಅವರು ಕರೆ ಮಾಡಿದ ಬಳಿಕವೇ ಗೇಟ್ ಬೀಗ ತೆಗೆದು ವಾಹನವನ್ನು ಒಳಗಡೆ ಬಿಟ್ಟಿರುತ್ತೇನೆ ಎನ್ನುತ್ತಾರೆ.
ಮತ್ತೆ ತಹಶೀಲ್ದಾರ್ ಅವರಿಗೆ ಕರೆ ಮಾಡಲು ಸೂಚಿಸಿದಾಗ ಎಸ್.ಡಿ.ಎ ಪ್ರಜ್ವಲ್ ಹಾಗೂ ತಹಶೀಲ್ದಾರ್ ರವರ ಸಂಭಾಷಣೆಯ ನಡೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ತದ ನಂತರ ಪೊಲೀಸ್ ಠಾಣೆ ಹಾಗೂ 112ಗೆ ಪತ್ರಕರ್ತರ ಮೂಲಕ ಮಾಹಿತಿ ನೀಡಿರುತ್ತೇವೆ. ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಯೂ ಬಂದಿದ್ದು, ಅವರಿಗೆ ಸಂಪೂರ್ಣ ವಿಷಯನ್ನು ತಿಳಿಸಿ ಠಾಣೆಗೆ ದೂರು ನೀಡಲು ತೆರಳಿದ ವೇಳೆ, ಠಾಣೆಯಲ್ಲಿದ್ದ ಪೋಲಿಸ್ ಸಿಬ್ಬಂದಿಗಳು ಬೆಳಗ್ಗೆ ಬಂದು ದೂರು ನೀಡಲು ತಿಳಿಸಿದ್ದಾರೆ. ಮತ್ತು ಇದಕ್ಕೂ ಮೊದಲೇ ತಾಲೂಕು ಕಚೇರಿ ಆವರಣದಲ್ಲಿ ಅನಧಿಕೃತ ಅಂಗಡಿ ಪೆಟ್ಟಿಗೆಗಳನ್ನು ತೆರವು ಮಾಡಲು ಅಂಬಾರಿ ಎಕ್ಸ್‌ಪ್ರೆಸ್ ಕನ್ನಡ ಪಾಕ್ಷಿಕ ಪತ್ರಿಕೆಯ ಸಂಪಾದಕರು ಸರ್ಕಾರಕ್ಕೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದು, ಕ್ರಮವಹಿಸಲು ತಹಶೀಲ್ದಾರ್ ರವರಿಗೆ ಸೂಚಿಸಿರುತ್ತಾರೆ. ಆದರೂ ಸಹ ಇವರು ಯಾವುದೇ ಅಂಗಡಿ ಮಳಿಗೆಗಳನ್ನು ತೆರವು ಮಾಡದೆ ಅಕ್ರಮವಾಗಿ ಅಂಗಡಿ ಪೆಟ್ಟಿಗೆಗಳನ್ನು ಇಡಲು ಅನುಮತಿ ನೀಡುತ್ತಿರುವುದು ಇವರ ಕರ್ತವ್ಯ ನಿಷ್ಠೆ ಎಷ್ಟಿದೆ ಎಂದು ತಿಳಿಯುತ್ತದೆ ಎಂದು ಮಹೇಶ್ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ಕಚೇರಿಯಲ್ಲಿ ಸರ್ಕಾರ ಹಾಗೂ ಸಾರ್ವಜನಿಕ ಕಡತಗಳು ಮತ್ತು ಖಜಾನೆ ಇದ್ದು, ದುರುಪಯೋಗವಾದರೆ ಯಾರು ಹೊಣೆ ಎಂಬುದು ಪ್ರಶ್ನಾರ್ಥಕವಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ನವೀನ್ ಕುಮಾರ್ ಸಾಮಾಜಿಕ ಕಾರ್ಯಕರ್ತರು ಕೊರಟಗೆರೆ ಇವರಿಗೆ ತಹಶೀಲ್ದಾರ್ ರವರೇ ಖುದ್ದು ದಿನಾಂಕ 23/08/2022 ರಂದು ತಾಲೂಕು ಕಚೇರಿ ಆವರಣದಲ್ಲಿ ಇರುವ ಅಂಗಡಿಗಳಿಗೆ ಸಂಬಂಧಿಸಿದಂತೆ ಈ ಕಚೇರಿ ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಲಾಗಿ ಸದರಿ ಅಂಗಡಿ ಮಳಿಗೆಗಳಿಗೆ ಯಾವುದೇ ಪರವಾನಗಿ ಅಥವಾ ನಿರಾಕ್ಷೇಪಣಾ ಪತ್ರ ನೀಡಿರುವುದು ಕಂಡು ಬಂದಿಲ್ಲ ಎಂಬ ಅಂಶವನ್ನು ತಿಳಿಸಿರುತ್ತಾರೆ. ಇಷ್ಟೆಲ್ಲಾ ಇರುವಾಗ ತಹಶೀಲ್ದಾರ್ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ ಯಾವುದೋ ಆಮೀಷಕ್ಕೆ ಒಳಗಾಗಿ ಪೆಟ್ಟಿಗೆ ಅಂಗಡಿ ಇಡಲು ಅನುಮತಿ ನೀಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಮಧುಗಿರಿ ಮಹೇಶ್ ಅವರು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಫೆ.11ರಂದು ಮಧುಗಿರಿ ಠಾಣೆಗೆ ಮಹೇಶ್ ಅವರು ದೂರು ನೀಡಿದ್ದಾರೆ. ಅಕ್ರಮವಾಗಿ ಹಾಗೂ ಅತಿಕ್ರಮವಾಗಿ ತಡರಾತ್ರಿಯಲ್ಲಿ ಪೆಟ್ಟಿಗೆ ಅಂಗಡಿಯನ್ನು ತಾಲೂಕು ಕಚೇರಿ ಆವರಣದಲ್ಲಿ ಇಡಲು ಮುಂದಾದವರ ಮೇಲೆ ದೂರು ದಾಖಲು ಮಾಡಿ ವಾಹನವನ್ನು ವಶಕ್ಕೆ ಪಡೆದು ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ. ಆದರೆ ಈ ಸಂಬಂಧ ಈವರೆಗೂ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ತಿಳಿದು ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4