ತುಮಕೂರು: ಪಠ್ಯಕ್ರಮವನ್ನು ಸಿದ್ಧಪಡಿಸುವಾಗ ಎಲ್ಲ ವಿದ್ಯಾರ್ಥಿಗಳೂ ಗಮನದಲ್ಲಿರಬೇಕು. ಆದರೆ ನಿಧಾನಗತಿಯಲ್ಲಿ ಕಲಿಯುವವರಿದ್ದಾರೆ ಎಂಬ ಕಾರಣಕ್ಕೆ ಪಠ್ಯಕ್ರಮವನ್ನು ಸಡಿಲಗೊಳಿಸಬಾರದು ಎಂದು ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷ ಪ್ರೊ.ಹೆಚ್.ಕೆ.ಶಿವಲಿಂಗಸ್ವಾಮಿ ಅಭಿಪ್ರಾಯಪಟ್ಟರು.
ತುಮಕೂರು ವಿ.ವಿ. ಇಂಗ್ಲಿಷ್ ಅಧ್ಯಾಪಕರ ವೇದಿಕೆ ಹಾಗೂ ಹುಳಿಯಾರು ಬಿಎಂಎಸ್ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗಗಳ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹೊಸ ಪಠ್ಯಕ್ರಮ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಯಾವುದೇ ವಿಷಯದಲ್ಲಿ ಪಠ್ಯಕ್ರಮ ಪ್ರಮುಖ ಪಾತ್ರವಹಿಸುತ್ತದೆ. ಪಠ್ಯಕ್ರಮವೆಂದರೆ ವಿಶ್ವವಿದ್ಯಾಲಯದ ಮತ್ತು ವಿಭಾಗದ ಅಸ್ಮಿತೆಯಾಗಿರುತ್ತದೆ. ಪ್ರತಿ ವಿಷಯದ ಪಠ್ಯಕ್ರಮವು ನಿರ್ದಿಷ್ಟ ಉದ್ದೇಶಗಳನ್ನು ಹೊಂದಿದ್ದು ವಿದ್ಯಾರ್ಥಿಗಳ ಮನೋವೈಜ್ಞಾನಿಕ ಬೆಳವಣಿಗೆ, ಸಮಾಜದ ಅಗತ್ಯಗಳು ಮತ್ತು ಭವಿಷ್ಯದ ಸವಾಲುಗಳನ್ನು ಗಮನದಲ್ಲಿಡಲಾಗುತ್ತದೆ ಎಂದರು.
ನಿಧಾನಗತಿಯ ಕಲಿಕಾರ್ಥಿಗಳಿಗಾಗಿ ಪಠ್ಯಕ್ರಮವನ್ನು ಸಡಿಲಗೊಳಿಸುವುದು ಒಳ್ಳೆಯದಲ್ಲ. ಉಪನ್ಯಾಸಕರು ವಿಷಯವನ್ನು ಕ್ರಮಬದ್ಧವಾಗಿ ಕಲಿಸಲು ಸಿದ್ಧರಾಗಬೇಕೇ ಹೊರತು ಕೆಲವು ವಿದ್ಯಾರ್ಥಿಗಳ ಅಸಾಮರ್ಥ್ಯವನ್ನು ನೆಪವಾಗಿಟ್ಟುಕೊಂಡು ಪಠ್ಯಕ್ರಮವನ್ನು ದುರ್ಬಲಗೊಳಿಸಬಾರದು ಎಂದರು.
ದೇಶದ ಶ್ರೇಷ್ಠ ಯುನಿವರ್ಸಿಟಿಗಳ ಪಠ್ಯಕ್ರಮಗಳು ನಮಗೆ ಮಾದರಿಯಾಗಬೇಕು. ಬದಲಾಗುತ್ತಿರುವ ಜಗತ್ತಿನ ಅಗತ್ಯಗಳಿಗೆ ಅನುಗುಣವಾಗಿ ಪಠ್ಯಕ್ರಮವನ್ನು ರಚಿಸಬೇಕು ಎಂದು ಸಲಹೆ ನೀಡಿದರು.
ತುಮಕೂರು ವಿಶ್ವವಿದ್ಯಾನಿಲಯ ಬಿಎ ಐಚ್ಛಿಕ ಇಂಗ್ಲಿಷ್ ವಿಷಯಕ್ಕಾಗಿ ನೂತನ ಮಾದರಿಯಲ್ಲಿ ರಚಿಸಿರುವ ಪಠ್ಯಕ್ರಮದ ಕುರಿತು ಕಾರ್ಯಾಗಾರ ನಡೆಸಲಾಯಿತು.
ಇಂಗ್ಲಿಷ್ ಐಚ್ಛಿಕ ಪರೀಕ್ಷಾ ಮಂಡಳಿಯ ಅಧ್ಯಕ್ಷೆ ಡಾ. ಕೆ. ಬಿ. ಸರಸ್ವತಿ, ತುಮಕೂರು ವಿವಿ ಇಂಗ್ಲಿಷ್ ಅಧ್ಯಾಪಕರ ವೇದಿಕೆಯ ಅಧ್ಯಕ್ಷೆ ಡಾ. ದಾಕ್ಷಾಯಿಣಿ ಜಿ., ಡಾ.ನೀಲಕಂಠಾಚಾರ್, ಡಾ.ಎಚ್.ಎಂ.ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW