ತಮಿಳುನಾಡಿನ ಎಲ್ಲಾ ದೇವಾಲಯಗಳಲ್ಲಿ ಇನ್ನು ಮುಂದೆ ಮೊಬೈಲ್ ಪೋನ್ ಬಳಕೆಯನ್ನು ನಿಷೇಧಿಸುವಂತೆ ಮದ್ರಾಸ್ ಹೈಕೋರ್ಟ್ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಆದೇಶಿಸಿದೆ.
ತಮಿಳುನಾಡಿನ ತೂತಿಕೊರಿನ್ ಜಿಲ್ಲೆಯ ತಿರುಚೆಂದೂರಿನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದೊಳಗೆ ಮೊಬೈಲ್ ನಿಷೇಧಿಸುವಂತೆ ನಿರ್ದೇಶನ ಕೋರಿ ಎಂ. ಸೀತಾರಾಮನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ಯರ್ಥಪಡಿಸುವ ಸಂದರ್ಭದಲ್ಲಿ ಮದ್ರಾಸ್ ಹೈಕೋರ್ಟ್ ಈ ಆದೇಶ ನೀಡಿದೆ. ಭಕ್ತರು ಮೊಬೈಲ್ನಲ್ಲಿ ದೇವರ ವಿಗ್ರಹಗಳು ಮತ್ತು ಪೂಜೆಗಳ ಪೋಟೋಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅರ್ಜಿದಾರರು ಬೇಸರ ವ್ಯಕ್ತಪಡಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆರ್. ಮಹದೇವನ್ ಮತ್ತು ಜೆ. ಸತ್ಯನಾರಾಯಣ ಪ್ರಸಾದ್, ಭಕ್ತರ ಸುರಕ್ಷತೆಯ ಬಗ್ಗೆ ಎಚ್ಚರ ವಹಿಸುವುದರ ಜೊತೆಗೆ ದೇವಾಲಯದ ಪಾವಿತ್ರ್ಯ ಕಾಪಾಡಲು ಅಧಿಕಾರಿಗಳು ದೇವಾಲಯದ ಆವರಣದಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಗುರುವಾಯೂರ್‌ನಲ್ಲಿರುವ ಶ್ರೀ ಕೃಷ್ಣ ದೇವಾಲಯ, ತಿರುಪತಿಯ ಶ್ರೀ ವೆಂಕಟೇಶ್ವರ ದೇವಾಲಯಗಳಲ್ಲಿ ಮೊಬೈಲ್ ನಿಷೇಧ ಜಾರಿಯಲ್ಲಿದೆ. ತಿರುಚೆಂದೂರಿನ ದೇವಾಲಯದ ಅಧಿಕಾರಿಗಳು ಈಗಾಗಲೇ ದೇವಾಲಯದ ಆವರಣದೊಳಗೆ ಮೊಬೈಲ್ ನಿಷೇಧ, ಡ್ರೆಸ್ ಕೋಡ್ ಮತ್ತು ಇತರ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ತಮಿಳುನಾಡಿನ ಎಲ್ಲಾ ದೇವಾಲಯಗಳಲ್ಲಿ ಇದನ್ನು ಅನುಸರಿಸಲು ಕೋರ್ಟ್ ಧಾರ್ಮಿಕ ದತ್ತಿ ಇಲಾಖೆಗೆ ಆದೇಶಿಸಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy