ತುಮಕೂರು: ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ,ಅಕ್ಟೋಬರ್ 18, 19 ಹಾಗೂ 20ರಂದು 3 ದಿನಗಳ ಕಾಲ ಜಿಲ್ಲೆಗೆ ಭೇಟಿ ನೀಡಲಿದ್ದು, ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಅಕ್ಟೋಬರ್ 18ರಂದು ಬೆಳಿಗ್ಗೆ 10 ರಿಂದ ಮ.1:30 ಹಾಗೂ ಮಧ್ಯಾಹ್ನ 2:30 ರಿಂದ ಸಂಜೆ 5 ಗಂಟೆಯವರೆಗೆ ಸಾರ್ವಜನಿಕ ಕುಂದು ಕೊರತೆಗಳ ವಿಚಾರಣೆ/ ದೂರು ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ.
ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎ.ವಿ.ಲಕ್ಷ್ಮೀನಾರಾಯಣ ಅವರು ತಿಳಿಸಿದರು.
ನಗರದ ಪರಿವೀಕ್ಷಣಾ ಮಂದಿರದಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಗೆ ಸಂಬಂಧಿಸಿದಂತೆ ಈಗಾಗಲೇ ಲೋಕಾಯುಕ್ತಕ್ಕೆ 182ಕ್ಕೂ ಹೆಚ್ಚು ದೂರು ಅರ್ಜಿಗಳು ಸಲ್ಲಿಕೆಯಾಗಿವೆ. ಜಿಲ್ಲೆಯ ಯಾವುದೇ ಸರ್ಕಾರಿ ಅಧಿಕಾರಿ/ಸಿಬ್ಬಂದಿ ಕಾನೂನು ಬದ್ಧವಾಗಿ ತಮ್ಮ ಕರ್ತವ್ಯ ನಿರ್ವಹಿಸದೆ ವಿನಾಕಾರಣ ವಿಳಂಬ ಮಾಡುತ್ತಿರುವ, ಕೆಲಸ ಮಾಡದೆ ತೊಂದರೆ ಉಂಟುಮಾಡುತ್ತಿರುವ ಬಗ್ಗೆ ಯಾವುದೇ ದೂರುಗಳಿದ್ದಲ್ಲಿ ಸಾರ್ವಜನಿಕರು ನೇರವಾಗಿ ಈ ಸಭೆಗೆ ಆಗಮಿಸಿ ಲಿಖಿತ ರೂಪದಲ್ಲಿ ನೀಡಬಹುದಾಗಿದೆ. ಸಭೆಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು, ಸ್ಥಳದಲ್ಲಿಯೇ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳಲಾಗುವುದಲ್ಲದೆ ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅ.19ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1:30 ಹಾಗೂ ಮ.2:30 ರಿಂದ ಸಂಜೆ 5 ಗಂಟೆಯವರೆಗೆ ಅಕ್ಟೋಬರ್ 18ರಂದು ಸಾರ್ವಜನಿಕರಿಂದ ಸ್ವೀಕೃತವಾದ ಅರ್ಜಿ/ ಕುಂದು ಕೊರತೆಗಳ ವಿಲೇವಾರಿ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ. ನಂತರ ಲೋಕಾಯುಕ್ತ ಕಚೇರಿಯಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಬಾಕಿ ಇರುವ ದೂರು ಪ್ರಕರಣಗಳ ಕುರಿತು ವಿಚಾರಣೆ ನಡೆಸಲಿದ್ದಾರೆ. ವಿಚಾರಣೆ ಬಾಕಿ ಇರುವ ಪ್ರಕರಣಗಳನ್ನು ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಕಾನೂನು ರೀತ್ಯಾ ವಿಚಾರಣೆ ನಡೆಸಲಾಗುವುದು ಎಂದರು.
ಮರುದಿನ ಅ.20ರಂದು ಜಿಲ್ಲೆಯ ವಿವಿಧ ಭಾಗಗಳಿಗೆ ಉಪ ಲೋಕಾಯುಕ್ತರು ಭೇಟಿ ನೀಡಲಿದ್ದು, ಉಪ ಲೋಕಾಯುಕ್ತರು ನಡೆಸುವ ಕುಂದು ಕೊರತೆ ಸಭೆಗೆ ಹಾಜರಾಗಿ ತಮ್ಮ ದೂರುಗಳನ್ನು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಜಿಲ್ಲೆಯ ಜನತೆ ಸಭೆಯ ಪ್ರಯೋಜನ ಪಡೆಯಬೇಕೆಂದು ಅವರು ಮನವಿ ಮಾಡಿದರು.
ಮಾಧ್ಯಮ ಗೋಷ್ಠಿಯಲ್ಲಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರಾದ ಕೆ.ಜಿ.ರಾಮಕೃಷ್ಣಪ್ಪ ಹಾಗೂ ಬಿ. ಉಮಾ ಶಂಕರ್, ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಡಿ.ಮೊಹಮ್ಮದ್ ಸಲೀಮ್, ಶಿವ ರುದ್ರಪ್ಪ ಮೇಟಿ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q