ಮುಡ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಜಿ ವಿಚಾರಣೆ, ಸಿಎಂ ಪಟ್ಟದ ಬಗ್ಗೆ ವಿವಿಧ ಸಚಿವರ ಹೇಳಿಕೆಗಳು ಹೊರಬರುತ್ತಿರುವಾಗಲೇ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ.
ಭಾನುವಾರ ರಾತ್ರಿ ವಿಮಾನ ಏರುವ ಮೊದಲು ಅವರು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆಯೊಂದನ್ನು ನೀಡಿದ್ದಾರೆ. ಕುಟುಂಬದ ಜೊತೆ ಒಂದು ವಾರದ ಪ್ರವಾಸಕ್ಕಾಗಿ ಡಿ. ಕೆ. ಶಿವಕುಮಾರ್ ಭಾನುವಾರ ರಾತ್ರಿ ಅಮೆರಿಕಕ್ಕೆ ತೆರಳಿದ್ದಾರೆ. ಇದು ವೈಯಕ್ತಿಕ ಪ್ರವಾಸವಾಗಿದೆ. ಆದರೆ ಇದರ ಹಿಂದೆ ರಾಜಕೀಯ ನಡೆ ಇದೆ ಎಂದು ಬಿಂಬಿಸಲಾಗುತ್ತಿತ್ತು. ಆದ್ದರಿಂದ ಡಿ. ಕೆ. ಶಿವಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.
ಲೋಕಸಭೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರದಿಂದ 3 ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಸಹ ಅಮೆರಿಕದಲ್ಲಿದ್ದಾರೆ. ನಟ, ರಾಜಕೀಯ ನಾಯಕ ಕಮಲ್ ಹಾಸನ್ ಸಹ ಅಮೆರಿಕ ಪ್ರವಾಸದಲ್ಲಿದ್ದಾರೆ. ಆದ್ದರಿಂದ ಡಿ. ಕೆ. ಶಿವಕುಮಾರ್ ಅಮೆರಿಕ ಪ್ರವಾಸ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ‘ನಾನು ಕೈಗೊಳ್ಳುತ್ತಿರುವ ಅಮೆರಿಕ ಪ್ರವಾಸಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ವದಂತಿಗಳ ಬಗ್ಗೆ ನನ್ನ ಸ್ಪಷ್ಟನೆ ಇದು. ಈ ಪ್ರವಾಸವು ವೈಯಕ್ತಿಕವಾಗಿದ್ದು, ಯಾವುದೇ ರಾಜಕೀಯ ಉದ್ದೇಶವನ್ನು ಹೊಂದಿಲ್ಲ. ಅಥವಾ ನನಗೆ ಯಾವುದೇ ರಾಜಕೀಯ ಆಹ್ವಾನಗಳೂ ಬಂದಿಲ್ಲ. ಸಾರ್ವಜನಿಕರು ಯಾವುದೇ ರೀತಿಯ ಊಹಾಪೋಹಗಳಿಗೆ ಕಿವಿಗೊಡದಂತೆ ವಿನಂತಿಸುತ್ತೇನೆ’ ಎಂದು ಪೋಸ್ಟ್ ಹಾಕಿದ್ದಾರೆ.
ಅಮೆರಿಕ ಪ್ರವಾಸಕ್ಕೂ ಮೊದಲು ಡಿ. ಕೆ. ಶಿವಕುಮಾರ್ ಗೃಹ ಕಛೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗಿ ಮಾತುಕತೆಯನ್ನು ಸಹ ನಡೆಸಿದ್ದಾರೆ.
ಅಲ್ಲದೇ ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣಾ ತಯಾರಿ ನಡೆಯುತ್ತಿದೆ. ಪ್ರಸ್ತುತ ಅಮೆರಿಕದ ಉಪಾಧ್ಯಕ್ಷೆ ಭಾರತೀಯ ಮೂಲದ ಕಮಲಾ ಹ್ಯಾರೀಸ್ ಡಿ. ಕೆ. ಶಿವಕುಮಾರ್ಗೆ ವಿಶೇಷ ಆಹ್ವಾನ ನೀಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ನಾರ್ಥ್ ಕ್ಯಾರೋಲಿನಾದಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ಡಿ. ಕೆ. ಶಿವಕುಮಾರ್ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಇತ್ತು.
ಆದ್ದರಿಂದ ಡಿ. ಕೆ. ಶಿವಕುಮಾರ್ ಈ ಪ್ರವಾಸ, ‘ಯಾವುದೇ ರಾಜಕೀಯ ಉದ್ದೇಶವನ್ನು ಹೊಂದಿಲ್ಲ. ಅಥವಾ ನನಗೆ ಯಾವುದೇ ರಾಜಕೀಯ ಆಹ್ವಾನಗಳೂ ಬಂದಿಲ್ಲ’ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ. ಆದರೆ ಡಿ. ಕೆ. ಶಿವಕುಮಾರ್ ಅಮೆರಿಕ ಭೇಟಿ ಬಗ್ಗೆ ರಾಜ್ಯ ರಾಜಕೀಯದಲ್ಲಿ ಚರ್ಚೆಗಳು ನಡೆಯುತ್ತಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q