ವರದಿ: ಅರವಿಂದ ಮಲ್ಲಿಗೆ, ಬೀದರ್
ಬೀದರ್: ಗ್ರಾಮೀಣ ಭಾಗದ ಬಡ ಕೂಲಿ ಕಾರ್ಮಿಕರು ಕೆಲಸ ಹುಡುಕಿಕೊಂಡು ಬೇರೆ ನಗರಗಳಿಗೆ ವಲಸೆ (ಗುಳೆ) ಹೋಗಬಾರದು. ಜುಲೈ 1ರಿಂದ ಜಾರಿಗೆ ಬಂದಿರುವ ಹೊಸ ‘ವಿಕಸಿತ ಭಾರತ–ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ)’ ಅಂದರೆ ವಿಬಿ–ಜಿ ರಾಮ್ ಜಿ (VB–G RAM G) ಯೋಜನೆಯಡಿ ತಮ್ಮ ಸ್ವಗ್ರಾಮಗಳಲ್ಲೇ ಕೆಲಸ ಪಡೆದುಕೊಳ್ಳಬೇಕು ಎಂದು ಭಾಲ್ಕಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಸೂರ್ಯಕಾಂತ ಬಿರಾದಾರ್ ತಿಳಿಸಿದ್ದಾರೆ.
ನರೇಗಾ ಯೋಜನೆ ಬಂದ್ ಆಗಿಲ್ಲ:
ಗ್ರಾಮೀಣ ಭಾಗದ ಬಡವರ ಆಶಾಕಿರಣವಾಗಿದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆ ಸಂಪೂರ್ಣವಾಗಿ ಬಂದ್ ಆಗಿಲ್ಲ. ಬದಲಿಗೆ, ಕೇಂದ್ರ ಸರ್ಕಾರವು ಕೂಲಿ ಕಾರ್ಮಿಕರ ಹಿತದೃಷ್ಟಿಯಿಂದ ಈ ಯೋಜನೆಯಲ್ಲಿ ಹಲವು ಪ್ರಮುಖ ಮಾರ್ಪಾಡುಗಳನ್ನು ಮಾಡಿದೆ. ಈಗ ಈ ಯೋಜನೆಗೆ ‘ವಿಬಿ–ಜಿ ರಾಮ್ ಜಿ’ ಎಂದು ಹೊಸದಾಗಿ ನಾಮಕರಣ ಮಾಡಲಾಗಿದ್ದು, ಜುಲೈ 1ರಿಂದಲೇ ಇದು ಅಧಿಕೃತವಾಗಿ ಅನುಷ್ಠಾನಗೊಂಡಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಕಾರ್ಮಿಕರಿಗೆ ಸಿಗುವ ಲಾಭಗಳು:
- ಕೆಲಸದ ದಿನಗಳ ಹೆಚ್ಚಳ: ಈ ಹಿಂದೆ ನರೇಗಾ ಯೋಜನೆಯಡಿ ವರ್ಷಕ್ಕೆ ಕೇವಲ 100 ದಿನಗಳ ಕೆಲಸ ನೀಡಲಾಗುತ್ತಿತ್ತು. ಆದರೆ ಈ ಹೊಸ ಯೋಜನೆಯಲ್ಲಿ ಉದ್ಯೋಗದ ಅವಧಿಯನ್ನು 125 ದಿನಗಳಿಗೆ ಹೆಚ್ಚಿಸಲಾಗಿದೆ.
- ಕೂಲಿ ದರ ಏರಿಕೆ: ಕಾರ್ಮಿಕರ ದಿನಗೂಲಿಯನ್ನು 370 ರೂ. ನಿಂದ 382 ರೂ.ಗೆ ಹೆಚ್ಚಳ ಮಾಡಲಾಗಿದ್ದು, ಇದರಿಂದ ಗ್ರಾಮೀಣ ಕುಟುಂಬಗಳ ಆದಾಯ ಹೆಚ್ಚಲಿದೆ.
- ಹೆಚ್ಚಿನ ಕಾಮಗಾರಿಗಳು: ಈ ಹಿಂದೆ ಯೋಜನೆಯಲ್ಲಿ 266 ಕಾಮಗಾರಿಗಳು ಲಭ್ಯವಿದ್ದವು, ಈಗ ಅವುಗಳ ಸಂಖ್ಯೆಯನ್ನು 318 ಕಾಮಗಾರಿಗಳಿಗೆ ವಿಸ್ತರಿಸಲಾಗಿದೆ. ಇವುಗಳಲ್ಲಿ ಬಹುತೇಕ ಕೆಲಸಗಳು ಕೂಲಿ ಆಧಾರಿತವಾಗಿಯೇ ಇರಲಿವೆ.
ಅರ್ಜಿ ಸಲ್ಲಿಸುವುದು ಹೇಗೆ?
ಕಾರ್ಮಿಕರು ಕೂಲಿ ಕೆಲಸ ಸಿಗುವುದಿಲ್ಲ ಎಂಬ ಭಯಪಡುವ ಅಗತ್ಯವಿಲ್ಲ. ಕೆಲಸದ ಬೇಡಿಕೆಗಾಗಿ ನಿಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ‘ನಮೂನೆ-6’ ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
“ವಿಬಿ–ಜಿ ರಾಮ್ ಜಿ ಯೋಜನೆಯು ಸಂಪೂರ್ಣವಾಗಿ ಕಾರ್ಮಿಕ ಸ್ನೇಹಿಯಾಗಿದೆ. ಉದ್ಯೋಗಕ್ಕಾಗಿ ಊರು ಬಿಟ್ಟು ಹೋಗದೆ, ನಿಮ್ಮ ಹಳ್ಳಿಯಲ್ಲೇ ಸಿಗುವ ಈ ಹೊಸ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಿ.”
— ಸೂರ್ಯಕಾಂತ ಬಿರಾದಾರ್, ಇಒ, ಭಾಲ್ಕಿ ತಾಲೂಕು ಪಂಚಾಯಿತಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


