ತುಮಕೂರು: ಶ್ರೀ ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ಲಿಂಗೈಕ್ಯ ಡಾ.ಶಿವಕುಮಾರ ಮಹಾಶಿವಯೋಗಿಗಳ ಜೀವನ ಪಯಣ, ಸೇವೆ, ಸಮರ್ಪಣಾ ಬದುಕು ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಭಿಪ್ರಾಯಪಟ್ಟರು.
ತುಮಕೂರಿನ ಶ್ರೀ ಸಿದ್ಧಗಂಗಾ ಮಠದಲ್ಲಿ ಮಂಗಳವಾರ ಶ್ರೀ ಶಿವಕುಮಾರ ಮಹಾಶಿವಯೋಗಿಗಳ 6ನೇ ಪುಣ್ಯ ಸಂಸ್ಮರಣೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಳ ಜೀವನ ಮತ್ತು ಉನ್ನತ ಚಿಂತನೆಯ ತತ್ವವನ್ನು ಅನುಸರಿಸಿ, ಇತರರನ್ನು ಅದೇ ಮಾರ್ಗವನ್ನು ಅನುಸರಿಸಲು ಪ್ರೇರೇಪಿಸಿದ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರ ಸೇವೆಯನ್ನು ಮೆಚ್ಚಿ ಹಲವಾರು ರಾಷ್ಟ್ರ ಹಾಗೂ ಅಂತರರಾಷ್ಟ್ರಮಟ್ಟದ ಪ್ರಶಸ್ತಿಗಳು ದೊರೆತಿದೆಯಲ್ಲದೆ, ಭಾರತ ಸರ್ಕಾರವು ಅವರಿಗೆ 2015ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಎಂದು ಹೇಳಿದರು.
ವಿಶ್ವ ಸಹೋದರತ್ವ, ವಿಶ್ವ ಶಾಂತಿ, ಸಮಾನತೆ ಹಾಗೂ ಸಾಮರಸ್ಯವನ್ನು ಪ್ರೇರೇಪಿಸುವ ಭಾರತೀಯ ಸಂಸ್ಕೃತಿಯು ಅನಂತವಾದುದು. ನಮ್ಮ ಸಂತರು ಅನಾದಿ ಕಾಲದಿಂದಲೂ ನಿರಂತರವಾಗಿ ಭಾರತೀಯ ಸಂಸ್ಕೃತಿಯನ್ನು ರಕ್ಷಿಸುತ್ತಿದ್ದಾರೆ. ನಮ್ಮ ಧರ್ಮದ ಏಕತೆ, ಸಮಗ್ರತೆ ಮತ್ತು ಸನಾತನ ಧರ್ಮದ ಪರಂಪರೆಯನ್ನು ಶ್ರೀಮಂತಗೊಳಿಸಲು ಸಾಧು–ಸಂತರು ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಸಾಧುಗಳು, ಸಂತರು, ಆಚಾರ್ಯರು ಮತ್ತು ಋಷಿಮುನಿಗಳು ವಿಶ್ವ ವೇದಿಕೆಯಲ್ಲಿ ಧರ್ಮ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಧ್ವಜವನ್ನು ಹಾರಿಸಿದ್ದಾರೆ. ಪ್ರಸ್ತುತ ಪ್ರಪಂಚದ ಅನೇಕ ದೇಶಗಳು ಆಧ್ಯಾತ್ಮಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕಾಗಿ ಭಾರತದ ಕಡೆಗೆ ನೋಡುತ್ತಿವೆ. ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ “ಮಹಾ ಕುಂಭ ಮೇಳ” ಒಂದು ಉದಾಹರಣೆಯಾಗಿದೆ ಎಂದು ತಿಳಿಸಿದರು.
ತ್ರಿವಿಧ ದಾಸೋಹದ ಮೂಲಕ 111 ವರ್ಷಗಳ ಕಾಲ ಮಾನವೀಯತೆಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಪರಮ ಪೂಜ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಆರನೇ ಪುಣ್ಯತಿಥಿಗೆ ಆಗಮಿಸುವ ಮೂಲಕ ಪೂಜ್ಯರ ದರ್ಶನ ಮತ್ತು ಆಶೀರ್ವಾದ ಪಡೆಯುವ ಅವಕಾಶ ನನಗೆ ದೊರತಿರುವುದು ಸಂತಸ ತಂದಿದೆ. ಧಾರ್ಮಿಕತೆ, ಧರ್ಮನಿಷ್ಠೆ ಮತ್ತು ಸಕಾರಾತ್ಮಕ ಶಕ್ತಿಯ ಪುಣ್ಯ ಭೂಮಿಯಾಗಿರುವ ಶ್ರೀ ಸಿದ್ದಗಂಗಾ ಮಠವು ನಾಡಿನ ಪ್ರಸಿದ್ಧ ಮಠಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ಸುಮಾರು 600 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಸಿದ್ದಗಂಗಾ ಮಠವು ಧಾರ್ಮಿಕ ಸ್ಥಳವಾಗಿದ್ದು, ಶಿಕ್ಷಣ, ಸೇವೆ ಮತ್ತು ಆಧ್ಯಾತ್ಮಿಕತೆಯ ಕೇಂದ್ರವಾಗಿದೆ. ಶ್ರೀ ಸಿದ್ಧಗಂಗಾ ಮಠವು ಸಾಮಾಜಿಕ–ಆರ್ಥಿಕ ಬದಲಾವಣೆಗಳನ್ನು ತರುವ ಮೂಲಕ ಸಮಾಜವನ್ನು ಸ್ವಾವಲಂಬಿ ಮಾಡುವ ಮಹತ್ವದ ಕೆಲಸವನ್ನು ಮಾಡುತ್ತಿದೆ. ಸಾಮಾಜಿಕ ಸಮಾನತೆ, ಸಮೃದ್ಧಿ, ಶ್ರೇಷ್ಠತೆ, ಸಬಲೀಕರಣ, ಉದ್ಯಮಶೀಲತೆ, ಜ್ಞಾನೋದಯಕ್ಕಾಗಿ ಎಲ್ಲರಿಗೂ ಮೌಲ್ಯಯುತವಾದ ಶಿಕ್ಷಣವನ್ನು ನೀಡುತ್ತಿರುವ ಮಠದ ಉನ್ನತಿಗಾಗಿ “ನಡೆದಾಡುವ ದೇವರು” ಎಂದು ಕರೆಯಲ್ಪಡುವ ಡಾ.ಶ್ರೀ ಶಿವಕುಮಾರ ಮಹಾಶಿವಯೋಗಿ ಅವರು ತಮ್ಮ ಸಂಪೂರ್ಣ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ರಾಜ್ಯಪಾಲರು ಹೇಳಿದರು.
ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರು ಶಿಕ್ಷಣವನ್ನು ಸಮಾಜದ ಬದಲಾವಣೆಯ ಪ್ರಮುಖ ಸಾಧನವೆಂದು ಪರಿಗಣಿಸಿ ಶಾಲಾ–ಕಾಲೇಜು, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳನ್ನೊಳಗೊಂಡಂತೆ 125ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಮಠದ ಅಡಿಯಲ್ಲಿ ನಡೆಯುವ ಶಿಕ್ಷಣ ಸಂಸ್ಥೆಗಳು ಜಾತಿ, ಧರ್ಮ ಅಥವಾ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಶಿಕ್ಷಣವನ್ನು ನೀಡುತ್ತಿವೆ. ಲಕ್ಷಾಂತರ ಬಡ ಮತ್ತು ಹಿಂದುಳಿದ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಹಾಸ್ಟೆಲ್ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದರಲ್ಲದೆ, ಪ್ರಸ್ತುತ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಯವರು ತಮ್ಮ ದೂರದೃಷ್ಟಿ, ಸದ್ಭಾವನೆಯಿಂದ ಮಠದ ಶ್ರೇಷ್ಠ ಸಂಪ್ರದಾಯಗಳನ್ನು ಮುನ್ನಡೆಸುತ್ತಿದ್ದಾರೆ. ಶ್ರೀ ಮಠದ ಸೇವಾ ಮನೋಭಾವ ಮತ್ತು ಕೀರ್ತಿಯನ್ನು ಜಾಗತಿಕ ಆಯಾಮಗಳಿಗೆ ಕೊಂಡೊಯ್ಯುತ್ತಿದ್ದಾರೆ ಎಂದು ಪ್ರಶಂಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೇಘಾಲಯ ರಾಜ್ಯಪಾಲರಾದ ಸಿ.ಎಚ್. ವಿಜಯಶಂಕರ್ ಕವನ ವಾಚನ ಮಾಡುವ ಮೂಲಕ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಭಕ್ತಿ ಸಮರ್ಪಣೆ ಮಾಡಿದರು. ಮನುಕುಲದ ಸಾರ್ಥಕ ಬದುಕಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಅವರು ದುಡಿದು ತಿನ್ನಬೇಕೆಂಬ ತತ್ವವನ್ನು ಪಾಲಿಸುವ ಮೂಲಕ ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿದ್ದರು. ಅನ್ನ ಪ್ರಸಾದ, ಅಕ್ಷರ ಪ್ರಸಾದ ಇಲ್ಲವೆಂದು ಯಾವೊಬ್ಬ ವ್ಯಕ್ತಿಯೂ ಮಠದಿಂದ ಹಿಂದಿರುಗಿದವರಿಲ್ಲ. ಮಠದ ಆಶ್ರಯ ಪಡೆದು ಉನ್ನತ ಸ್ಥಾನಕ್ಕೆ ತಲುಪಿ ಜಗತ್ತಿನ ಎಲ್ಲಾ ಭಾಗದಲ್ಲಿ ನೆಲೆಸಿರುವವರು ಮಠವನ್ನು ಸ್ಮರಿಸದ ದಿನಗಳಿಲ್ಲ. ಶುದ್ಧ ಬದುಕನ್ನು ಬದುಕಿ ಸಿದ್ಧ ಪುರುಷರಾಗಿ ಸಾರ್ಥಕ ಜೀವನವನ್ನು ನಡೆಸಿದ ಶ್ರೀಗಳ ವ್ಯಕ್ತಿತ್ವಕ್ಕೆ ಯಾರೂ ಸಾಟಿಯಿಲ್ಲವೆಂದು ಬಣ್ಣಿಸಿದರು.
ತಾವು ರಾಜ್ಯದ ಅರಣ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಮಗುವಿಗೊಂದು ಮರ–ಶಾಲೆಗೊಂದು ವನ ಎಂಬ ವಿನೂತನ ಕಾರ್ಯಕ್ರಮವನ್ನು ಶ್ರೀಗಳ ಆಶೀರ್ವಾದದಿಂದ ಈ ಮಠದಿಂದಲೇ ಚಾಲನೆ ನೀಡಿ ರಾಜ್ಯದ ಅರಣ್ಯ ಪ್ರದೇಶಗಳ ಅಭಿವೃದ್ಧಿಗೆ ಮುನ್ನುಡಿ ಹಾಡಲಾಗಿತ್ತು ಎಂದು ಸ್ಮರಿಸಿದರು.
ಕಾರ್ಯಕ್ರಮದ ದಿವ್ಯ ನೇತೃತ್ವವಹಿಸಿದ್ದ ಶ್ರೀ ಸಿದ್ಧಗಂಗಾ ಮಠದ ಅಧ್ಯಕ್ಷ ಶ್ರೀ ಸಿದ್ಧಲಿಂಗ ಮಹಾಸ್ವಾಮಿ ಮಾತನಾಡಿ, ಶ್ರೀ ಮಠದ ಸಾಧನೆಯ ಹಿಂದೆ ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದದ ಶ್ರಮವಿದೆ. ಗಂಧದಂತೆ ತಮ್ಮ ಜೀವನವನ್ನು ಇತರರಿಗಾಗಿ ತೇಯ್ದು ಎಲ್ಲ ವರ್ಗದವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿ ನಾಡಿನ ಜನರ ಮನ ಗೆದ್ದಿದ್ದರು. ಜಂಗಮರಾಗಿ ನಾಡನ್ನು ಸುತ್ತಿ, ಪೀಠಾಧ್ಯಕ್ಷರಾಗಿ ಇಡೀ ರಾಷ್ಟçದ ಮಣ್ಣಿನ ಸ್ಪರ್ಶ ಮಾಡಿದ ಶ್ರೀಗಳು ಗ್ರಾಮೀಣ ಭಾಗದ ಮಕ್ಕಳಿಗಾಗಿ ಶಾಲೆ-ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ಅಕ್ಷರ ದಾಸೋಹಿ ಎನಿಸಿಕೊಂಡಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಮೈಸೂರಿನ ಶ್ರೀ ಸುತ್ತೂರು ವೀರಸಿಂಹಾಸನ ಸಂಸ್ಥಾನ ಮಠದ ಅಧ್ಯಕ್ಷ ಶ್ರೀ ಶಿವರಾತ್ರಿದೇಶಿಕೇಂದ್ರಮಹಾಸ್ವಾಮಿ ಮಾತನಾಡಿ, ಶ್ರೀ ಶಿವಕುಮಾರ ಸ್ವಾಮೀಜಿಗಳು ಅವತರಿಸಿದ ಈ ಸಿದ್ಧಗಂಗಾ ಕ್ಷೇತ್ರವು ಅವರ ದೂರದೃಷ್ಟಿತ್ವ ಸೇವೆಗಳಿಂದ ಪುನೀತವಾಗಿದೆ. ಶ್ರೀ ಉದ್ದಾನ ಶಿವಯೋಗಿ ಸ್ವಾಮೀಜಿ ಅವರ ಅಪೇಕ್ಷೆಯಿಂದ ಮಠದ ಅಧಿಕಾರವನ್ನು ವಹಿಸಿಕೊಂಡು ಮುನ್ನಡೆಸಿದ ಮಹಾನ್ ಶಿವಯೋಗಿಯಾಗಿದ್ದರು. ಕಠಿಣ ಜೀವನ ಪರಿಕ್ರಮಗಳನ್ನು ಅಳವಡಿಸಿಕೊಂಡಿದ್ದ ಶ್ರೀಗಳ ದಿನಚರಿಯನ್ನು ಪಾಲಿಸಲು ಅಸಾಧ್ಯ. ಪೂಜೆಯು ವೈಯಕ್ತಿಕ. ಪೂಜೆಯ ಫಲಾಫಲಗಳು ಸಾರ್ವತ್ರಿಕವೆಂದು ಭಾವಿಸಿದ್ದ ಶಿವಕುಮಾರ ಸ್ವಾಮೀಜಿ ಅವರ ಜ್ಞಾನದ ಜ್ಯೋತಿಯಿಂದ ಸಿದ್ಧಗಂಗಾ ಕ್ಷೇತ್ರವು ಪ್ರಕಾಶಮಾನವಾಗಿ ಬೆಳಗುತ್ತಲೇ ಇರುತ್ತದೆ ಎಂದು ಭಾವಿಸಿದರು.
ಶ್ರವಣಬೆಳಗೊಳ ಜೈನಮಠದ ಜಗದ್ಗುರು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿ ಮಾತನಾಡಿ, ಜನಸೇವೆಯಿಂದ ಶಿವಕುಮಾರ ಸ್ವಾಮೀಜಿ ಅವರು ಭಾರತದ ಶ್ರೇಷ್ಠ ಸಂತರಲ್ಲೊಬ್ಬರಾಗಿದ್ದಾರೆ. ತಮ್ಮ ಪಂಚೇಂದ್ರಿಯಗಳ ಬಯಕೆಗಳನ್ನು ನಿಗ್ರಹಿಸುವ ಮೂಲಕ ಜೀವನದಲ್ಲಿ ಸಾರ್ಥಕತೆಯನ್ನು ಪಡೆದುಕೊಂಡಿದ್ದರು. ಇವರ ತತ್ವಾದರ್ಶಗಳು ತುಮಕೂರನ್ನು ಸಮೃದ್ಧಿಗೊಳಿಸುವ ಮೂಲಕ ಇಂದಿನ ಯುವ ಜನಾಂಗಕ್ಕೆ ಆದರ್ಶಪ್ರಾಯವಾಗಿವೆ ಎಂದು ತಿಳಿಸಿದರು.
ಶ್ರೀ ಸಿದ್ಧಗಂಗಾ ಮಠದ ಉತ್ತಾಧಿಕಾರಿ ಶ್ರೀ ಶಿವಸಿದ್ಧೇಶ್ವರಸ್ವಾಮಿ ತಮ್ಮ ನುಡಿ ನಮನದಲ್ಲಿ ಶಿವಕುಮಾರ ಸ್ವಾಮೀಜಿ ಅವರ ಸಾಧನೆ ಬಗ್ಗೆ ವಿವರಿಸಿದರು. ಬಸವತತ್ವದ ಆಧಾರದ ಮೇಲೆ ಮಠವನ್ನು ಕಟ್ಟಿ ಬೆಳೆಸಿದ ಶ್ರೀಗಳು ಬಡವರು, ನಿರ್ಗತಿಕರ ಪಾಲಿಕೆ ಅಭಯಹಸ್ತವಾಗಿದ್ದರು. ತಮ್ಮ ಮಾನವೀಯ ಸೇವೆಗಳ ಮೂಲಕ ಸಾವಿಲ್ಲದ ಡಾ.ಶಿವಕುಮಾರ ಸ್ವಾಮೀಜಿ ಅವರು ಭಕ್ತರ ಪಾಲಿಗೆ ನಡೆದಾಡುವ ದೇವರಾಗಿದ್ದಾರೆ ಎಂದು ನುಡಿದರು.
ಈ ಸಂದರ್ಭದಲ್ಲಿ ಕನ್ನಡ ನಾಡು–ನುಡಿಯ ಬಗ್ಗೆ ಅಪಾರ ಸೇವೆ ಸಲ್ಲಿಸಿರುವ ಜಾನಪದ ಜಂಗಮ, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಾಡೋಜ ಡಾ.ಗೊ.ರು.ಚನ್ನಬಸಪ್ಪ ಅವರಿಗೆ ಸಿದ್ಧಗಂಗಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದಕ್ಕೂ ಮುನ್ನ ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಪುಣ್ಯ ಸ್ಮರಣೆ ನಿಮಿತ್ತ ಏರ್ಪಡಿಸಿದ್ದ ವಚನಗಾಯನ ಕಾರ್ಯಕ್ರಮದಲ್ಲಿ ‘ಮರವಿದ್ದು ಫಲವೇನು? ನೆಳಲಿಲ್ಲದೆನ್ನಕ್ಕ–ಧನವಿದ್ದು ಫಲವೇನು? ದಯವಿಲ್ಲದೆನ್ನಕ್ಕ, ಶಿವಭಕ್ತಿಯುಳ್ಳವನಿಗೆ ಇಂತೀ ಷಡ್ಗುಣವಿರಬೇಕು’ ಎಂಬ ವಚನಗಳು ನೆರೆದ ಶರಣರಿಗೆ ವಚನಾಮೃತವನ್ನು ಉಣಬಡಿಸಿದವು.
ಕೇಂದ್ರದ ಜಲಶಕ್ತಿ ಹಾಗೂ ರೈಲ್ವೇ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿ, ಸಮಾಜದಲ್ಲಿ ಆಶ್ರಯವಿಲ್ಲದ ಎಲ್ಲ ವರ್ಗದವರಿಗೆ ಆಶ್ರಯ ನೀಡಿ ಅನ್ನ, ಅಕ್ಷರ, ದಾಸೋಹವನ್ನು ಉಣಬಡಿಸುವ ಮೂಲಕ ಡಾ: ಶ್ರೀ ಶಿವಕುಮಾರ ಸ್ವಾಮೀಜಿಯವರು ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರಲ್ಲದೆ ತಾವು ಉನ್ನತ ಸ್ಥಾನಕ್ಕೇರಲು ಶ್ರೀಗಳ ಆಶೀರ್ವಾದವೇ ಕಾರಣ. ಸಿದ್ಧಗಂಗಾ ಶ್ರೀಗಳಾದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯವರ ಸಂಸ್ಮರಣಾ ದಿನವನ್ನು ದಾಸೋಹ ದಿನವನ್ನಾಗಿ ಘೋಷಿಸಿ ರಾಜ್ಯದಾದ್ಯಂತ ಆಚರಣೆಯನ್ನು ಕಾರ್ಯರೂಪಕ್ಕೆ ತರಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ತುಮಕೂರು ಲೋಕಸಭಾ ಕ್ಷೇತ್ರದ ಸದಸ್ಯನಾಗಿ ಆಯ್ಕೆಯಾಗಿದ್ದರಿಂದ ಕೇಂದ್ರ ರೈಲ್ವೆ ಖಾತೆ ಸಚಿವನಾಗಿ ಅಧಿಕಾರವಹಿಸಿಕೊಂಡಿದ್ದೇನೆ. ಅಧಿಕಾರ ವಹಿಸಿಕೊಂಡ ನಂತರ ಜಿಲ್ಲೆಯಲ್ಲಿ ರಾಯದುರ್ಗ–ತುಮಕೂರು, ತುಮಕೂರು–ದಾವಣಗೆರೆ ಸುಮಾರು 400 ಕಿ.ಮೀ.ಕ್ಕೂ ಹೆಚ್ಚು ದೂರದ ರೈಲು ಮಾರ್ಗದ ನಿರ್ಮಾಣ ಕಾಮಗಾರಿಗಳು ಭರದಿಂದ ಸಾಗಿವೆ. ಮುಂದಿನ 2 ವರ್ಷದೊಳಗೆ ಜಿಲ್ಲೆಯ 23 ಕಡೆ ರೈಲ್ವೆ ಮೇಲ್ಸೇತುವೆಯನ್ನು ಅಭಿವೃದ್ಧಿಪಡಿಸುವ ಸಂಕಲ್ಪ ಮಾಡಲಾಗಿದೆ. ನಗರದ ರೈಲು ನಿಲ್ದಾಣವನ್ನು 100 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಳಿಸಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ಇಡಲಾಗುವುದು ಎಂದು ತಿಳಿಸಿದರು.
ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ಹಾಗೂ ಬಿ. ಸುರೇಶ್ ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಮೇಘಾಲಯದ ಹಿರಿಯ ಅಧಿಕಾರಿ ಬ್ರಹ್ಮದತ್ ಸೇರಿದಂತೆ ಶ್ರೀ ಮಠದ ಆಡಳಿತಾಧಿಕಾರಿಗಳು, ವಿವಿಧ ಇಲಾಖಾಧಿಕಾರಿಗಳು, ಅಸಂಖ್ಯಾತ ಭಕ್ತಾಧಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx