ತುಮಕೂರು : ಪ್ರಸ್ತುತ ಬೇಸಿಗೆ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯು ತೀವ್ರವಾಗುವ ಸಂಭವವಿರುವುದರಿಂದ ಜಿಲ್ಲಾ ಮಟ್ಟದಲ್ಲಿ ಕುಡಿಯುವ ನೀರಿನ ದೂರುಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮಕೈಗೊಳ್ಳಲು ಸಹಾಯವಾಣಿ ತೆರೆಯಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ತಿಳಿಸಿದ್ದಾರೆ.
ಸಹಾಯವಾಣಿಯು ಪ್ರತಿ ದಿನ ಬೆಳಿಗ್ಗೆ 8:30 ರಿಂದ ಸಂಜೆ 6:30ರವರೆಗೆ ಕಾರ್ಯ ನಿರ್ವಹಿಸಲಿದ್ದು, ಕುಡಿಯುವ ನೀರಿಗೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ: 0816–2005188ಕ್ಕೆ ಕರೆ ಮಾಡುವ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ.
ಅದೇ ರೀತಿ ತಾಲ್ಲೂಕು ಮಟ್ಟದಲ್ಲಿಯೂ ಸಹಾಯವಾಣಿಗಳನ್ನು ತೆರೆಯಲಾಗಿದ್ದು, ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗಗಳ ಸಹಾಯಕ ಕಾರ್ಯಪಾಲಕ ಅಭಿಯಂತರರು ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಸಹಾಯವಾಣಿ ಕೇಂದ್ರದಲ್ಲಿ ದೂರು ದಾಖಲಿಸಲು ಜಿಲ್ಲಾ ಪಂಚಾಯತಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಚೇರಿಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಕಾರ್ಯ ನಿಯೋಜನೆಗೆ ಸಂಬಂಧಿಸಿದಂತೆ ವೇಳಾಪಟ್ಟಿ ನಿಗಧಿಪಡಿಸಲಾಗಿದ್ದು, ಸಿಬ್ಬಂದಿಗಳು ವೇಳಾಪಟ್ಟಿಯನ್ವಯ ಮುಂದಿನ ಆದೇಶದವರೆಗೂ ಕಾರ್ಯನಿರ್ವಹಿಸಬೇಕು. ಜಿಲ್ಲಾ ಪಂಚಾಯತಿ ಕಚೇರಿಯಲ್ಲಿರುವ ದೂರು ದಾಖಲಾತಿ ವಹಿಯಲ್ಲಿ ಸ್ವೀಕೃತ ದೂರುಗಳ ದಿನಾಂಕ, ಸಮಯ, ದೂರುದಾರರ ವಿವರ, ದೂರಿನ ಸ್ವರೂಪವನ್ನು ದಾಖಲಿಸಬೇಕೆಂದು ಸೂಚಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————