ಬೆಂಗಳೂರು: ಕರ್ನಾಟಕದಲ್ಲಿ ತೀವ್ರವಾಗಿ ಕಾಡುತ್ತಿರುವ ಬರ ಪರಿಸ್ಥಿತಿ ಹಾಗೂ ಇದರಿಂದ ಉಂಟಾಗಿರುವ ಭಾರಿ ಬೆಳೆ ನಷ್ಟವು ರಾಜ್ಯದ ಆರ್ಥಿಕತೆಯ ಮೇಲೆ, ಅದರಲ್ಲೂ ವಿಶೇಷವಾಗಿ ಜಿಎಸ್ ಟಿ (GST) ಸಂಗ್ರಹದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಆತಂಕ ವ್ಯಕ್ತಪಡಿಸಿದ್ದಾರೆ. ಬರಗಾಲದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಪರಿಸ್ಥಿತಿಯಿಂದ ರಾಜ್ಯಕ್ಕೆ ಅಂದಾಜು 46,000 ಕೋಟಿ ರೂಪಾಯಿಗಳಷ್ಟು ಆರ್ಥಿಕ ನಷ್ಟ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ರಾಜ್ಯದ 177 ತಾಲೂಕುಗಳು ಬರಪೀಡಿತವೆಂದು ಘೋಷಿಸಲಾಗಿದ್ದು, ರಾಜ್ಯವು ಹಿಂದೆಂದೂ ಕಾಣದಂತಹ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇದರ ಪರಿಣಾಮವಾಗಿ ಬೆಳೆ ನಷ್ಟ ಸೇರಿದಂತೆ ಬೃಹತ್ ಮೊತ್ತದ ಆರ್ಥಿಕ ನಷ್ಟ ಉಂಟಾಗಿದೆ. ಈ ಆರ್ಥಿಕ ಬಿಕ್ಕಟ್ಟಿನಿಂದ ರಾಜ್ಯವನ್ನು ಪಾರು ಮಾಡಲು ಮತ್ತು ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡಲು ಕೇಂದ್ರ ಸರ್ಕಾರದಿಂದ ಸುಮಾರು 10,000 ದಿಂದ 11,000 ಕೋಟಿ ರೂ.ಗಳವರೆಗೆ ವಿಶೇಷ ಬರ ಪರಿಹಾರ ಬಿಡುಗಡೆ ಮಾಡುವಂತೆ ಕೋರಲಾಗಿದೆ ಎಂದು ಅವರು ವಿವರಿಸಿದರು.
ಜಿಎಸ್ ಟಿ ಸಂಗ್ರಹದಲ್ಲಿ ದೇಶದಲ್ಲೇ ಕರ್ನಾಟಕವು ಸತತವಾಗಿ ಎರಡನೇ ಸ್ಥಾನದಲ್ಲಿದೆ ಮತ್ತು ಜಿಎಸ್ಟಿ ಮಂಡಳಿ ಸಭೆಗಳಲ್ಲಿಯೂ ರಾಜ್ಯದ ಈ ಸಾಧನೆಯನ್ನು ಪ್ರಸ್ತಾಪಿಸಲಾಗಿದೆ. ಆದರೆ, ಬರಗಾಲದ ಪ್ರಭಾವದಿಂದ ಆರ್ಥಿಕ ಚಟುವಟಿಕೆಗಳು ಮಂದಗತಿಯಾಗಲಿರುವುದರಿಂದ ಇದು ಜಿಎಸ್ಟಿ ಸಂಗ್ರಹದ ಮೇಲೂ ಖಂಡಿತವಾಗಿ ಪರಿಣಾಮ ಬೀರಲಿದೆ ಎಂದು ಡಿಸಿಎಂ ಸ್ಪಷ್ಟಪಡಿಸಿದ್ದಾರೆ. ಇಂತಹ ಸವಾಲಿನ ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ಸರ್ಕಾರ ಅಗತ್ಯ ಹಣಕಾಸು ಮೀಸಲು ಕಾಯ್ದುಕೊಂಡಿದ್ದು, ಜಿಎಸ್ಟಿ ಸಂಗ್ರಹವನ್ನು ಸರಿದೂಗಿಸಲು ಮತ್ತು ಹೆಚ್ಚಿಸಲು ಕೈಗೊಳ್ಳಬೇಕಾದ ಪರ್ಯಾಯ ಕ್ರಮಗಳ ಬಗ್ಗೆಯೂ ಆರ್ಥಿಕ ತಜ್ಞರೊಂದಿಗೆ ಸಮಾಲೋಚಿಸಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
