ವೈ.ಎನ್.ಹೊಸಕೋಟೆ: ವಿದ್ಯಾರ್ಥಿಗಳಿಗೆ ಮೌಲ್ಯಗಳನ್ನು ಕಟ್ಟಿಕೊಡುವುದೇ ಮುಖ್ಯ ಶಿಕ್ಷಣ ಎಂದು ನಿವೃತ್ತ ಉಪಪ್ರಾಂಶುಪಾಲರಾದ ಡಿ.ಎನ್.ಸುಬ್ಬಣ್ಣ ತಿಳಿಸಿದರು.
ಗ್ರಾಮದ ರಾಷ್ಟ್ರೀಯ ವಿದ್ಯಾಪೀಠ ಪ್ರೌಢಶಾಲೆಯ ೧೯೯೮–೯೯ ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ ಬಳಗ ಶನಿವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾತಾಪಿತೃಗಳನ್ನು ಗುರುಗಳನ್ನು ಗೌರವಿಸುವುದು ಮತ್ತು ಪೂಜಿಸುವುದು ಈ ನೆಲದ ಸಂಸ್ಕೃತಿ. ಆ ಸಂಸ್ಕೃತಿಯನ್ನು ನಮ್ಮ ಈ ಶಾಲೆ ಕಟ್ಟಿದೆ. ವಿದ್ಯಾರ್ಥಿಗಳಲ್ಲಿ ಪಾಠಗಳ ಜೊತೆಗೆ ಮೌಲ್ಯಗಳನ್ನು ಕಟ್ಟಿಕೊಟ್ಟಾಗ ಅದು ಉತ್ತಮ ಶಿಕ್ಷಣವಾಗುತ್ತದೆ. ಸಂಸ್ಕಾರವನ್ನು ಕಟ್ಟಿದ ಈ ಶಾಲೆಗೆ ಹಳೆಯ ವಿದ್ಯಾರ್ಥಿಗಳಾದ ತಾವು ಸಹಕಾರ ನೀಡಿದರೆ ಶಾಲಾ ಪ್ರಗತಿ ಸಾಧ್ಯ ಎಂದರು.
ಸುವರ್ಣ ಸಂಭ್ರಮದ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ ನಮ್ಮ ಬದುಕು ಸಾರ್ಥಕವೆನಿಸುತ್ತಿದೆ. ವಿದ್ಯಾರ್ಥಿಗಳು ಗುರುವಂದನೆ ಕಾರ್ಯಕ್ರಮದಡಿ ನಮಗೆ ನೀಡಿದ ಗೌರವಾಧಾರಣಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ನಿವೃತ್ತ ಪ್ರಾಂಶುಪಾಲ ಮಹಮ್ಮದ್ ಹುಸೇನ್ ತಿಳಿಸಿದರು.
ನಾನು ಕಲಿತ ಈ ಶಾಲೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ನನಗೆ ದೊರೆತ ಪುಣ್ಯ ಎಂದು ಭಾವಿಸಿದ್ದೇನೆ. ತಾವುಗಳೂ ಸಹ ಈ ಶಾಲೆಯ ಪ್ರಗತಿಗೆ ಕೈಜೋಡಿಸಿ ಎಂದರು.
ಸಂಸ್ಥೆಯ ಅಧ್ಯಕ್ಷರಾದ ಇ.ವಿ.ಶ್ರೀಧರ್ ಮಾತನಾಡಿ, ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಕನಸಿನ ಕೂಸಾಗಿ ೧೯೫೨ರಲ್ಲಿ ಆರಂಭಗೊಂಡ ಶಾಲೆ ಅಪಾರ ಸೇವೆ ಪೂರೈಸಿದೆ. ಸಾವಿರಾರು ವಿದ್ಯಾರ್ಥಿಗಳ ವಿದ್ಯಾರ್ಜನೆಯ ಕೇಂದ್ರವಾಗಿದ್ದ ಇಲ್ಲಿ ಕಲಿತ ವಿದ್ಯಾರ್ಥಿಗಳು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಆದರೆ ಇಂದು ಹಲವು ಕಾರಣಗಳಿಂದ ತನ್ನ ಸುವರ್ಣ ಯುಗವನ್ನು ಕಳೆದು ಕೊಂಡಿದೆ. ಆದಾಗಿ ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ತವರು ಶಾಲೆಯ ಪ್ರಗತಿಗೆ ಶ್ರಮಿಸಬೇಕು ಎಂದು ಕರೆಕೊಟ್ಟರು.
ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಾದ ಎ.ಎನ್.ವೆಂಕಟರತ್ನಯ್ಯ, ಸಿ.ಟಿ.ನಾರಾಯಣ, ಎನ್.ಜಿ.ಸುಧಾಕರ್, ಮೃತ್ಯುಂಜಯ, ಸಣ್ಣಅಕ್ಕಲಪ್ಪ, ಕೃಷ್ಣಪ್ಪ, ಎನ್.ಎಸ್.ರಾಮು, ಬಿ.ವೆಂಕಟೇಶ್, ಬಿ.ತಿಪ್ಪೇಸ್ವಾಮಿ, ಆರ್.ಬಿ.ಗೋಪಾಲ್, ತಿಮ್ಮರಾಜು, ಮಧುಶ್ರೀನಿವಾಸ, ವೆಂಕಟಚಲಪತಿ, ಕೇಶ್ಯಾನಾಯ್ಕ, ಡಿ.ಟಿ.ರಾಮಪ್ಪ, ನರಸಿಂಹಮೂರ್ತಿ ಮಾತನಾಡಿದರು.
ಎರಡು ದಿನಗಳು ನಡೆದ ಪೂರ್ವ ವಿದ್ಯಾರ್ಥಿಗಳ ಅಪೂರ್ವ ಸಂಗಮ ಕಾರ್ಯಕ್ರಮದಲ್ಲಿ ಶನಿವಾರದಂದು ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ, ವಿದ್ಯಾರ್ಥಿಗಳ ಪರಿಚಯ ಹಾಗೂ ಭಾನುವಾರ ವಾದ್ಯ ಮೇಳಗಳೊಂದಿಗೆ ಗುರುವೃಂದದ ಪುರಮೆರವಣಿಗೆ ನೆರವೇರಿತು. ಹಳೆಯ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿ ಸಂತೋಷ ವ್ಯಕ್ತಪಡಿಸಿದರು. ವೇದಿಕೆ ಕಾರ್ಯಕ್ರಮದಲ್ಲಿ ಎಲ್ಲಾ ಗುರುಗಳನ್ನು ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಗುರುವಂದನೆ ಸಮರ್ಪಿಸಿದರು. ವಿದ್ಯಾರ್ಥಿ ಮತ್ತು ಶಿಕ್ಷಕರು ತಮ್ಮ ಶಾಲಾ ದಿನಗಳನ್ನು ಮೆಲಕು ಹಾಕಿದರು. ತಂಡದ ಎಲ್ಲಾ ಹಳೆಯ ವಿದ್ಯಾರ್ಥಿಗಳು ಇದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx