ತುಮಕೂರು: ಭಾರತದ ಬಹುತ್ವ ಸಂಸ್ಕೃತಿಯನ್ನು ತಿಳಿಸಿದ ಬುದ್ಧ, ಬಸವ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಕುವೆಂಪು ಅವರಂತಹ ದಾರ್ಶನಿಕರ ವಿಚಾರಧಾರೆಗಳನ್ನು ಉಳಿಸಲು ಸಮತೆ–ಮಮತೆಗಳ ಪರಂಪರೆ ಅಗತ್ಯ ಎಂದು ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ತುಮಕೂರು ದಸರಾ ಉತ್ಸವ ಅಂಗವಾಗಿ ನಗರದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದ ಪ್ರೊ.ಹೆಚ್.ಜಿ. ಸಣ್ಣಗುಡ್ಡಯ್ಯ ಹಾಗೂ ವೀಚಿ ವೇದಿಕೆಯಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ ಪರಂಪರೆ ಮತ್ತು ಸಾಮಾಜಿಕ ಜವಾಬ್ದಾರಿ ಕುರಿತು ಸಂವಾದಗೋಷ್ಠಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪರಂಪರೆ ಎಲ್ಲಾ ಕಾಲದಲ್ಲಿಯೂ ಬೆಳವಣಿಗೆ ಹೊಂದುತ್ತಾ ಬರುತ್ತಿದ್ದು, ಸಂಸ್ಕೃತಿ ಮತ್ತು ಪರಂಪರೆಗಳ ನಡುವಿನ ಸೂಕ್ಷö್ಮ ವ್ಯತ್ಯಾಸಗಳನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಬರವಣಿಗೆ ಸಂಸ್ಕೃತಿಯ ಜೊತೆ–ಜೊತೆಗೆ ಜನಮೂಲ ಸಂಸ್ಕೃತಿಯನ್ನು ತಿಳಿದಾಗ ಮಾತ್ರ ಈ ನೆಲದ ಮೂಲ ಪರಂಪರೆಯ ನೆಲೆಗಟ್ಟನ್ನು ನೋಡಲು ಸಾಧ್ಯ ಎಂದು ತಿಳಿಸಿದರು.
ಜಿಲ್ಲೆಯು ಕನ್ನಡ ಭಾಷೆ ಹಾಗೂ ರಾಜ್ಯಕ್ಕೆ ಹಲವು ಮೊದಲುಗಳನ್ನು ನೀಡಿದೆ. ಕನ್ನಡದ ಮೊದಲ ನಾಟಕ ಸಂಸ್ಥೆ, ಕನ್ನಡ ಮೊದಲ ಟಾಕಿ ಸಿನಿಮಾಗೆ ಚಿತ್ರಕಥೆ, ಸಾಹಿತ್ಯ, ಬರವಣಿಗೆ ಸೇರಿದಂತೆ ಕಲೆ, ವಿಜ್ಞಾನ, ಸಾಹಿತ್ಯ, ಸಿನಿಮಾ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಜಿಲ್ಲೆಗೆ ತನ್ನದೇ ಆದ ಇತಿಹಾಸ ಇರುವುದರಿಂದ ಜಿಲ್ಲೆಯ ಸಾಧಕರನ್ನು ಕುರಿತು ತಿಳಿಸುವಂತಹ ವಿವಿಧ ರೀತಿಯ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q