ತುಮಕೂರು: ಆಧುನಿಕ ಸಮಾಜದಲ್ಲೂ ಮಲಹೊರುವ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿರುವುದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ನಗರದ ಕೆಇಬಿ (KEB) ಇಂಜಿನಿಯರ್ಸ್ ಗಳ ಸಂಘದ ಆವರಣದಲ್ಲೇ ಮುಗ್ಧ ಕಾರ್ಮಿಕರಿಂದ ಬರಿಗೈ ಹಾಗೂ ಬರಿಮೈನಲ್ಲಿ ಮಲ ಬಾಚಿಸಿದ ಅಮಾನವೀಯ ಘಟನೆ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕೆಇಬಿ ಇಂಜಿನಿಯರ್ಸ್ ಸಂಘದ ಆವರಣದಲ್ಲಿರುವ ಶೌಚ ಗುಂಡಿಯ ಮಲವನ್ನು ಹೊತ್ತು ಸಾಗಿಸಲು ನಾಲ್ವರು ದಲಿತ ಕಾರ್ಮಿಕರನ್ನು ನಿಯೋಜಿಸಲಾಗಿತ್ತು. ತುಮಕೂರು ಮೂಲದ ನಂದೀಶ್, ಅರುಣ ಹಾಗೂ ಮಧುಗಿರಿ ಮೂಲದ ಮೂರ್ತಿ ನಾಯ್ಕ ಮತ್ತು ನವೀನ ಎಂಬುವವರೇ ಈ ಕೃತ್ಯಕ್ಕೆ ಬಲಿಯಾದ ದುರ್ದೈವಿಗಳು. ಯಾವುದೇ ಸುರಕ್ಷತಾ ಪರಿಕರಗಳಿಲ್ಲದೆ ಬರಿಗೈ ಮತ್ತು ಬರಿಮೈನಲ್ಲಿ ಶೌಚ ಗುಂಡಿಯ ಮಲವನ್ನು ಬಾಚಿ, ಟ್ರಾಕ್ಟರ್ ಗೆ ತುಂಬುವಂತೆ ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ.
“ಮಣ್ಣು ತುಂಬಲು ಕರೆತಂದು ಈ ಕೆಲಸ ಮಾಡಿಸಿದರು”
ಈ ಕುರಿತು ಅಳಲು ತೋಡಿಕೊಂಡಿರುವ ದಲಿತ ಕಾರ್ಮಿಕರು, “ಇಂಜಿನಿಯರೊಬ್ಬರು ನಮಗೆ ಈ ಕೆಲಸವನ್ನು ಹೇಳಿದ್ದಾರೆ. ಕಳೆದ ಮೂರು ದಿನಗಳಿಂದ ನಾವು ಇಲ್ಲಿ ಕೆಲಸ ಮಾಡುತ್ತಿದ್ದೇವೆ. ಮೊದಲು ನಮ್ಮನ್ನು ಮಣ್ಣು ತುಂಬುವ ಕೆಲಸವೆಂದು ಹೇಳಿ ಕರೆತರಲಾಗಿತ್ತು. ಆದರೆ ಇಲ್ಲಿಗೆ ಬಂದು ನೋಡಿದಾಗ ಅದು ಶೌಚ ಗುಂಡಿ ಎಂದು ತಿಳಿಯಿತು. ಹೊಟ್ಟೆ ಪಾಡಿಗಾಗಿ ವಿಧಿಯಿಲ್ಲದೆ ಈ ಕೆಲಸ ಮಾಡಬೇಕಾಯಿತು. ಇಂತಹ ಕೆಲಸ ಮಾಡಬಾರದು ಎಂಬ ಕಾನೂನು ನಮಗೆ ಗೊತ್ತಿರಲಿಲ್ಲ. ಇನ್ಮುಂದೆ ಇಂತಹ ಕೆಲಸಕ್ಕೆ ಕರೆದರೆ ಖಂಡಿತ ಹೋಗುವುದಿಲ್ಲ” ಎಂದು ಕಣ್ಣೀರಿಟ್ಟಿದ್ದಾರೆ.
ಅಧಿಕಾರಿಗಳ ಬೇಜವಾಬ್ದಾರಿತನ:
ಇತ್ತೀಚೆಗಷ್ಟೇ ಜಿಲ್ಲೆಯ ಕೊರಟಗೆರೆ ಬಸ್ ನಿಲ್ದಾಣದಲ್ಲಿ ಬಾಲ ಕಾರ್ಮಿಕನೊಬ್ಬನಿಂದ ಶೌಚ ಗುಂಡಿ ಸ್ವಚ್ಛಗೊಳಿಸಿದ ಘಟನೆ ಮಾಸುವ ಮುನ್ನವೇ, ಈಗ ತುಮಕೂರು ನಗರದ ಹೃದಯಭಾಗದಲ್ಲೇ ಇಂತಹದ್ದೇ ಮತ್ತೊಂದು ಅನಿಷ್ಟ ಪದ್ಧತಿ ಬೆಳಕಿಗೆ ಬಂದಿದೆ. ಆದರೆ, ಈ ಘಟನೆ ಕುರಿತು ಮಾಹಿತಿ ನೀಡಿದರೂ ತುಮಕೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಾರದೆ ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.
“ಕಾನೂನುಬಾಹಿರವಾಗಿ ಮತ್ತು ಅಮಾನವೀಯವಾಗಿ ಕಾರ್ಮಿಕರನ್ನು ಮಲಹೊರುವ ಕೆಲಸಕ್ಕೆ ಬಳಸಿಕೊಂಡ ಕೆಇಬಿ ಇಂಜಿನಿಯರ್ಸ್ ಸಂಘದ ಪದಾಧಿಕಾರಿಗಳು ಹಾಗೂ ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು”
— ಜಟ್ಟಿ ಅಗ್ರಹಾರ ನಾಗರಾಜು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



3 Comments
Please help computer course
Please help me computer course me student
Hi hello please