ಸರಗೂರು: ತಾಲೂಕಿನ ಹಳೆಹೇಗ್ಗುಡಿಲು ಗ್ರಾಮದಲ್ಲಿ ಸೋಮವಾರದಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರೊಬ್ಬರ ಮೇಲೆ ಕಾಡುಹಂದಿ ಏಕಾಏಕಿ ದಾಳಿ ನಡೆಸಿ, ತೀವ್ರವಾಗಿ ಗಾಯಗೊಳಿಸಿರುವ ಘಟನೆ ನಡೆದಿದೆ.
ಗ್ರಾಮದ ಸಿದ್ದಯ್ಯ ಎಂಬುವರ ಮಗ ಸುರೇಶ್ ಕಾಡುಹಂದಿ ದಾಳಿಗೆ ಒಳಗಾದ ದುರ್ದೈವಿ ರೈತರಾಗಿದ್ದಾರೆ. ಸುರೇಶ್ ಅವರು ತಮ್ಮ ಜಮೀನಿನಲ್ಲಿ ಪೈಪ್ಲೈನ್ ಜೋಡಿಸುವ ಕೆಲಸದಲ್ಲಿ ನಿರತರಾಗಿದ್ದಾಗ, ಪೊದೆಗಳ ಮರೆಯಿಂದ ಬಂದ ಕಾಡುಹಂದಿ ಏಕಾಏಕಿ ಇವರ ಮೇಲೆರಗಿದೆ. ಹಂದಿಯ ದಾಳಿಯ ಭೀಕರತೆಗೆ ರೈತನ ತೊಡೆಯ ಭಾಗ ಸೀಳಿಹೋಗಿದ್ದು, ತೀವ್ರ ರಕ್ತಸ್ರಾವವಾಗಿದೆ. ಸುರೇಶ್ ಅವರ ಕಿರುಚಾಟವನ್ನು ಕೇಳಿದ ಅಕ್ಕಪಕ್ಕದ ಜಮೀನಿನ ರೈತರು ತಕ್ಷಣ ಧಾವಿಸಿ ಬಂದು, ಜೋರಾಗಿ ಕೂಗಾಡಿ ಕಾಡುಹಂದಿಯನ್ನು ಕಾಡಿನ ಕಡೆಗೆ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಳಿಕ ಗಾಯಾಳುವನ್ನು ತಕ್ಷಣವೇ ಪಟ್ಟಣದ ಸ್ವಾಮಿ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು, ಸದ್ಯ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.
ಅರಣ್ಯ ಇಲಾಖೆ ವಿರುದ್ಧ ಆಕ್ರೋಶ:
ಘಟನೆಯಿಂದ ಆಕ್ರೋಶಗೊಂಡ ಹಳೆಹೇಗ್ಗುಡಿಲು ಗ್ರಾಮಸ್ಥರು ಹಾಗೂ ರೈತರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ಮಳೆಯಿಲ್ಲದೆ ಕಂಗಾಲಾಗಿರುವ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ. ಸಿಕ್ಕ ಅಲ್ಪಾವಧಿಯ ವಿದ್ಯುತ್ ನಲ್ಲೇ ರೈತರು ಪ್ರಾಣದ ಹಂಗು ತೊರೆದು ಜಮೀನುಗಳಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ಸರಣಿಯಾಗಿ ಜಮೀನುಗಳಿಗೆ ನುಗ್ಗಿ, ಫಸಲು ಕೈಗೆ ಬರುವ ಮುನ್ನವೇ ನಾಶಪಡಿಸುತ್ತಿವೆ. ಇದರ ಜೊತೆಗೆ ರೈತರ ಮೇಲೆಯೂ ದಾಳಿ ನಡೆಸುತ್ತಿರುವುದು ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದೆ ಎಂದು ಗ್ರಾಮಸ್ಥರು ಆಳಲು ತೋಡಿಕೊಂಡಿದ್ದಾರೆ.
ಕಾಡುಪ್ರಾಣಿಗಳ ಹಾವಳಿಯ ಬಗ್ಗೆ ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮೊದಲೇ ದೂರು ನೀಡಿದರೂ ಅವರು ಜಮೀನುಗಳಿಗೆ ಬಂದು ಪರಿಶೀಲನೆ ನಡೆಸಲು ಮುಂದಾಗುವುದಿಲ್ಲ. ಆದರೆ ಇಂತಹ ಅನಾಹುತಗಳು ಸಂಭವಿಸಿದಾಗ ಮಾತ್ರ ಅಧಿಕಾರಿಗಳು ಓಡೋಡಿ ಬರುತ್ತಾರೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಭೇಟಿ ನೀಡಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಗಾಯಾಳು ರೈತನ ಆರೋಗ್ಯ ವಿಚಾರಿಸಿದರು. ಬಳಿಕ ಮಾತನಾಡಿದ ಅಧಿಕಾರಿಗಳು, “ಗಾಯಾಳುವಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಇಲಾಖೆಯಿಂದ ಸಿಗಬೇಕಾದ ಸೂಕ್ತ ಪರಿಹಾರವನ್ನು ಆದಷ್ಟು ಬೇಗ ಒದಗಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗುವುದು,” ಎಂದು ಭರವಸೆ ನೀಡಿದ್ದಾರೆ.ಈ ಘಟನೆಗೆ ಸಂಬಂಧಿಸಿದಂತೆ ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




