ಚಿಕ್ಕಮಗಳೂರು: ಜನಿಸಿದ ಎರಡೇ ದಿನಕ್ಕೆ ಹೆಣ್ಣು ಮಗುವನ್ನು ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದ ದಂಪತಿ ಹಾಗೂ ನಿವೃತ್ತ ನರ್ಸ್ರನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಹರಾವರಿ ಗ್ರಾಮದ ಕೋಣನಗುಡ್ಡದ ರತ್ನಾ, ಸದಾನಂದ ದಂಪತಿ ಮಗುವನ್ನು ಮಾರಾಟ ಮಾಡಿದ ದಂಪತಿಯಾಗಿದ್ದು, ಕೊಪ್ಪದ ನಿವೃತ್ತ ನರ್ಸ್ ಕುಸುಮ ಎಂಬುವರ ಮೂಲಕ 1 ಲಕ್ಷ ರೂಪಾಯಿಗೆ ಕಾರ್ಕಳದ ರಾಘವೇಂದ್ರ ಎಂಬವರಿಗೆ ಮಗುವನ್ನು ಮಾರಾಟ ಮಾಡಲಾಗಿತ್ತು.
ವಿಚಾರ ತಿಳಿದ ಎನ್.ಆರ್ ಪುರ ಠಾಣೆಯ ಪೊಲೀಸರು ತನಿಖೆ ನಡೆಸಿ, ಬಳಿಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರು ಕಾರ್ಕಳಕ್ಕೆ ತೆರಳಿ ಮಗುವನ್ನು ಸುರಕ್ಷಿತವಾಗಿ ತಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ.
ಇನ್ನು, ಮಗು ದತ್ತು ಪಡೆದ ರಾಘವೇಂದ್ರ, ನಿವೃತ್ತ ನರ್ಸ್ ಕುಸುಮ ಅವರ ಸಹೋದರ. ತಮಗೆ ಮಕ್ಕಳು ಇಲ್ಲದೆ ಇರುವುದರಿಂದ ಸಾಕಲು ಮಗು ಪಡೆದಿದ್ದೇನೆ ಎಂದು ರಾಘವೇಂದ್ರ ಪೊಲೀಸರ ಮುಂದೆ ಹೇಳಿದ್ದಾರೆ ಎನ್ನಲಾಗಿದೆ.
ರತ್ನಾ–ಸದಾನಂದ ದಂಪತಿಗೆ ಮೂವರು ಮಕ್ಕಳಿದ್ದು, ಇಬ್ಬರನ್ನು ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಎನ್.ಆರ್ ಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಗುವಿನ ತಂದೆ ಸದಾನಂದ ಮತ್ತು ತಾಯಿ ರತ್ನಾ ಹಾಗೂ ಮಗು ಮಾರಾಟಕ್ಕೆ ಮಧ್ಯವರ್ತಿಯಾಗಿ ಕೆಲಸ ಮಾಡಿದ ನಿವೃತ್ತ ನರ್ಸ್ ಕುಸುಮ ಅವರನ್ನು ಬಂಧಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW