ಔರಾದ್/ಬೀದರ್: ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಸಂತಪೂರ ಪೊಲೀಸ್ ಠಾಣೆ ವ್ಯಾಪ್ತಿಯ ಜಮಗಿ ವಲಯದ ಕೇಶವ ತಾಂಡಾದ ಹೊಲ ಒಂದರಲ್ಲಿ ಅಕ್ರಮವಾಗಿ ಬೆಳೆದಿದ್ದ ₹9.5 ಲಕ್ಷ ಮೌಲ್ಯದ ಗಾಂಜಾ ಬೆಳೆಯನ್ನು ಸಂತಪೂರ ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಪ್ರದೀಪ್ ಗುಂಟಿ (IPS) ಅವರ ಮಾರ್ಗದರ್ಶನದಲ್ಲಿ ಹಾಗೂ ಭಾಲ್ಕಿ ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಅವರ ನೇತೃತ್ವದಲ್ಲಿ ಈ ಯಶಸ್ವಿ ದಾಳಿ ನಡೆದಿದೆ.
ಔರಾದ್ ಸಿಪಿಐ ರಘೂವೀರಸಿಂಗ್ ಠಾಕೂರ್ ಮತ್ತು ಸಂತಪೂರ ಠಾಣೆಯ ಪಿಎಸ್ ಐ ದಿನೇಶ್ ಎಮ್. ಟಿ. ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಅರುಣ್ ಸಿಂಗ್, ಸೂರ್ಯಕಾಂತ ದೇಶಮುಖ, ರಾಜಶೇಖರ್, ರಾಜಕುಮಾರ್ ಐ, ಸುಭಾಷ್, ರಾಮರೆಡ್ಡಿ ಹಾಗೂ ಕೊಟ್ರೇಶ ಅವರನ್ನೊಳಗೊಂಡ ಪೊಲೀಸ್ ತಂಡವು ಹೊಲದ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಅಕ್ರಮವಾಗಿ ಬೆಳೆಸಲಾಗಿದ್ದ 18 ಕೆಜಿ ತೂಕದ 62 ಹಸಿ ಗಾಂಜಾ ಗಿಡಗಳನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ಗಾಂಜಾದ ಅಂದಾಜು ಮೌಲ್ಯ ₹9.5 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.
ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಶ್ಲಾಘಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, “ಮಾದಕ ದ್ರವ್ಯಗಳನ್ನು ಬೆಳೆಸುವುದು, ಸರಬರಾಜು ಮಾಡುವುದು ಹಾಗೂ ಸೇವಿಸುವುದು ಕಾನೂನುಬಾಹಿರ ಅಪರಾಧವಾಗಿದೆ. ಇಂತಹ ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಬೀದರ್ ಜಿಲ್ಲೆಯನ್ನು ಸಂಪೂರ್ಣ ‘ನಶಾಮುಕ್ತ’ (ಮಾದಕ ದ್ರವ್ಯ ಮುಕ್ತ) ಜಿಲ್ಲೆಯನ್ನಾಗಿಸಲು ಪೊಲೀಸರ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯಲಿದೆ” ಎಂದು ಎಚ್ಚರಿಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
