ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲಪಾಳ್ಯ ಹಾಗೂ ದೊಡ್ಡಪ್ಪನಹಳ್ಳಿಯಲ್ಲಿರುವ ಕಸದ ತೊಟ್ಟಿಯನ್ನು ಕಳೆದ ಮೂರು ತಿಂಗಳಿಂದ ಸ್ವಚ್ಛಗೊಳ್ಳಿಸಿಲ್ಲ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲಪಾಳ್ಯ ಗ್ರಾಮ ಪಂಚಾಯಿತಿಯಲ್ಲಿ ಕಸವನ್ನು ತೆಗೆದುಕೊಂಡು ಹೋಗದೇ ಸ್ವಚ್ಛತೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣ ಲೂಟಿ ಮಾಡಲಾಗುತ್ತಿದೆ. ಇಡೀ ಗ್ರಾ.ಪಂ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಜನ ವಾಸಿಸುವ ಪ್ರದೇಶದಲ್ಲಿ ನೈರ್ಮಲ್ಯತೆ ಕಾಪಾಡುತ್ತಿಲ್ಲ ಎಂದು ದೂರಿದ್ದಾರೆ.
ದೊಡ್ಡಪ್ಪನಹಳ್ಳಿ ಬಳಿಯೇ ವೃದ್ಧಾಶ್ರಮ ಇದ್ದು, ಆಸರೆ ಇಲ್ಲದ ಹಿರಿ ಜೀವಿಗಳು ಬದುಕುತ್ತಿರುವ ಸ್ಥಳದಲ್ಲಿ ಗಬ್ಬು ವಾಸನೆ ನಾರುತ್ತಿದ್ದು, ಸೊಳ್ಳೆ, ಕ್ರಿಮಿ ಕೀಟಗಳಿಂದ ಅವರು ದಿನ ನಿತ್ಯ ಹೇಳಿಕೊಳ್ಳುಲು ಆಗದಂತಹ ಬಾಧೆಯನ್ನು ಅನುಭವಿಸುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರು. ಇಲ್ಲಿರುವ ಉರ್ದು ಶಾಲೆಯ ಸಮೀಪ ತೊಟ್ಟಿಯಲ್ಲಿ ಕಸ ತುಂಬಿದ್ದು, ಹತ್ತಿರದಲ್ಲಿಯೇ ಅಂಗನವಾಡಿ ಇದೆ. ಅದಕ್ಕೆ ಹೊಂದಿಕೊಂಡಂತೆ ಶುದ್ಧ ಕುಡಿಯುವ ನೀರಿನ ಘಟಕವಿದ್ದು, ನೀರು ತರಲು ಹೋದವರು ಮೂಗು ಮಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಶಾಲೆಗೆ ದಾಖಲು ಆಗಲು ಬರುವ ವಿದ್ಯಾರ್ಥಿಗಳು, ಸಣ್ಣ ಮಕ್ಕಳಿಗೆ ತೊಂದರೆಯಾಗುತ್ತಿದ್ದು, ಇಲ್ಲಿ ವಾಸಿಸುವ ಹಿರಿಯ ನಾಗರಿಕರಿಗೆ ಆರೋಗ್ಯ ಸಮಸ್ಯೆ ಬಿಗಡಾಯಿಸಿದ್ದು, ಕೂಡಲೇ ಕಸ ತೆರವು ಮಾಡಿ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಬೇಕೆಂದು ಆಗ್ರಹಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296