ಬೆಂಗಳೂರು: ಮುಡಾ ನಿವೇಶನ ಪಡೆದಿರುವುದು ಕಾನೂನುಬಾಹಿರವಲ್ಲ. ಕಾನೂನುಬಾಹಿರವಾಗಿದ್ದರೆ ಅಂದು ಬಿಜೆಪಿ ಸರ್ಕಾರವೇ ಇತ್ತು ಎಂದು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮತನಾಡಿದ ಅವರು, ರಾಜಕೀಯ ದುರುದ್ದೇಶದಿಂದ ಬಿಜೆಪಿಯವರು ಈ ರೀತಿ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಕಳಂಕವಿಲ್ಲದೇ ಇಷ್ಟು ವರ್ಷ ರಾಜಕಾರಣದಲ್ಲಿರುವವರು. ಹಾಗಾಗಿ ಅವರ ವಿರುದ್ಧ ಬಿಜೆಪಿ ನಾಯಕರೆಲ್ಲ ಸೇರಿ ವ್ಯವಸ್ಥಿತವಾಗಿ ಸಂಚು ರೂಪಿಸಿ ಈ ರೀತಿ ಮಾಡುತ್ತಿದ್ದಾರೆ ಎಂದು ಸ್ವಪಕ್ಷದ ನಾಯಕರ ವಿರುದ್ಧವೇ ಹೇಳಿಕೆ ನೀಡಿದರು.
ಮುಡಾದಿಂದ 50:50 ನಿವೇಶನ ಹಂಚಿಕೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಮಾತ್ರವಾಗಿಲ್ಲ. ಬಿಜೆಪಿ ನಾಯಕರ ಪತ್ನಿಯರೂ ಇದೇ ರೀತಿ ಮುಡಾ ನಿವೇಶನಗಳನ್ನು ಪಡೆದಿದ್ದಾರೆ. ಹಾಗಾದರೆ ಅವರು ಪಡೆದಿರುವುದೂ ಕಾನೂನುಬಾಹಿರವಾಗಬೇಕಲ್ಲ. ನೂರಾರು ಜನ ಮುಡಾದಿಂದ 50:50ರ ಸೈಟ್ ಪಡೆದುಕೊಂಡಿದ್ದಾರೆ. ಅಂದು ಬಿಜೆಪಿ ಸರ್ಕಾರ ಇದ್ದಾಗಲೇ ಸಿದ್ದರಾಮಯ್ಯ ಪತ್ನಿ ನಿವೇಶನಕ್ಕೆ ಮನವಿ ಮಾಡಿದ್ದರು. ಬಿಜೆಪಿ ಸರ್ಕಾರವೇ ಅವರಿಗೆ ನಿವೇಶನಕ್ಕೆ ಒಪ್ಪಿಗೆ ನೀಡಿ ನಿವೇಶನ ಕೊಟ್ಟಿದೆ. ಕಾನೂನುಬಾಹಿರ, ಹೀಗೆ ಸೈಟ್ ಕೊಡಲು ಆಗಲ್ಲ ಎನ್ನುವುದಾದರೆ ಅಂದೇ ಅಧಿಕಾರಿಗಳು, ಸರ್ಕಾರ ನಿವೇಶನ ಅರ್ಜಿ ವಜಾಮಾಡಬೇಕಿತ್ತು. ಈಗ ರಾಜಕೀಯ ದುರುದ್ದೇಶಕ್ಕೆ ಸಿಎಂ ವಿರುದ್ಧ ಆರೋಪ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296