ಬೆಂಗಳೂರು: ಬೆಂಗಳೂರಿನಿಂದ ಗೋವಾಕ್ಕೆ ನೇರವಾಗಿ ಪ್ರಯಾಣಿಸುವವರಿಗೆ ಶೀಘ್ರದಲ್ಲೇ ಮತ್ತೊಂದು ಉತ್ತಮ ರೈಲು ಸಂಪರ್ಕ ಸಿಗುವ ನಿರೀಕ್ಷೆಯಿದೆ. ಯಶವಂತಪುರ–ಮಡಗಾಂ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ವಿಸ್ತರಣೆಯಾಗಲಿದ್ದು, ಮಂಗಳೂರು ಸೇರಿದಂತೆ ಕರ್ನಾಟಕದ ಕರಾವಳಿಯ ಹಲವು ಪ್ರಮುಖ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಸಾಧ್ಯತೆಯಿದೆ.
ಪ್ರಸ್ತುತ ಮಂಗಳೂರು ಸೆಂಟ್ರಲ್-ಮಡಗಾಂ ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯನ್ನು ಯಶವಂತಪುರದವರೆಗೆ ವಿಸ್ತರಿಸುವುದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ ಎನ್ನಲಾಗಿದೆ. ವಿಸ್ತರಿತ ಸೇವೆಯು ಮಂಗಳೂರು ಜಂಕ್ಷನ್ ಮೂಲಕ ಸಂಚರಿಸಲಿದೆ.
ಈ ರೈಲಿಗೆ 26655/26656 ಸಂಖ್ಯೆ ನೀಡಲಾಗಿದ್ದು, ಯಶವಂತಪುರ-ಮಡಗಾಂ-ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ಎಂದು ಕರೆಯಲಾಗುತ್ತದೆ.ರೈಲ್ವೆ ಇಲಾಖೆಯಿಂದ ಅಧಿಕೃತ ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲ. ಆದರೆ ಲಭ್ಯವಿರುವ ವರದಿಗಳ ಪ್ರಕಾರ, ಯಶವಂತಪುರದಿಂದ ಬೆಳಗ್ಗೆ 6.05ಕ್ಕೆ ಹೊರಡುವ ರೈಲು ಸಂಜೆ 7.15ರ ವೇಳೆಗೆ ಮಡಗಾಂ ತಲುಪುವ ನಿರೀಕ್ಷೆಯಿದೆ. ಮಡಗಾಂನಿಂದ ಬೆಳಗ್ಗೆ 5.30ಕ್ಕೆ ಹೊರಡುವ ರೈಲು ಸಂಜೆ 6.40ಕ್ಕೆ ಯಶವಂತಪುರ ತಲುಪುವ ಸಾಧ್ಯತೆಯಿದೆ.
ಈ ವೇಳಾಪಟ್ಟಿಯಂತೆ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣದ ಅವಧಿ ಸುಮಾರು 13 ಗಂಟೆಗಳಾಗಬಹುದು. ಆದರೆ ಪ್ರಯಾಣಿಕರ ಪ್ರಮುಖ ಬೇಡಿಕೆ ಮಾತ್ರ ಪ್ರಯಾಣದ ಸಮಯವನ್ನು ಇನ್ನಷ್ಟು ಕಡಿಮೆ ಮಾಡಬೇಕು ಎಂಬುದಾಗಿದೆ.ಪ್ರಸ್ತಾವಿತ ಮಾರ್ಗದಲ್ಲಿ ಯಶವಂತಪುರದಿಂದ ಮಡಗಾಂವರೆಗೆ ಒಟ್ಟು 14 ಪ್ರಮುಖ ನಿಲ್ದಾಣಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ.
ಯಶವಂತಪುರ, ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಮಂಗಳೂರು ಜಂಕ್ಷನ್, ಉಡುಪಿ, ಕುಂದಾಪುರ, ಬೈಂದೂರು, ಮುರ್ಡೇಶ್ವರ, ಗೋಕರ್ಣ ರೋಡ್, ಕಾರವಾರ ಹಾಗೂ ಮಡಗಾಂ ಪ್ರಮುಖ ನಿಲ್ದಾಣಗಳಾಗಿವೆ.
ಮಂಗಳೂರು ಸೆಂಟ್ರಲ್–ಮಡಗಾಂ ವಂದೇ ಭಾರತ್ ಸೇವೆ 2023ರ ಡಿಸೆಂಬರ್ 31ರಿಂದ ಕಾರ್ಯನಿರ್ವಹಿಸುತ್ತಿದೆ. ಈ ಸೇವೆಯಿಂದ ಮಂಗಳೂರು ಮತ್ತು ಗೋವಾ ನಡುವೆ ವೇಗದ ರೈಲು ಸಂಪರ್ಕ ಲಭ್ಯವಾಗಿದೆ.
ಇದೀಗ ಸೇವೆಯನ್ನು ಯಶವಂತಪುರದವರೆಗೆ ವಿಸ್ತರಿಸಿದರೆ ಬೆಂಗಳೂರು–ಹಾಸನ–ಮಂಗಳೂರು–ಉಡುಪಿ–ಉತ್ತರ ಕನ್ನಡ–ಗೋವಾ ನಡುವೆ ನೇರ ವಂದೇ ಭಾರತ್ ಸಂಪರ್ಕ ದೊರೆಯಲಿದೆ. ಇದರಿಂದ ಬೆಂಗಳೂರಿನಿಂದ ಕರಾವಳಿ ಮತ್ತು ಗೋವಾ ಪ್ರವಾಸಕ್ಕೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗುವ ನಿರೀಕ್ಷೆಯಿದೆ.
ಆದರೆ ಅಂತಿಮ ಮಾರ್ಗ, ನಿಲ್ದಾಣಗಳು, ವೇಳಾಪಟ್ಟಿ ಮತ್ತು ಪ್ರಯಾಣದ ಅವಧಿಯನ್ನು ರೈಲ್ವೆ ಇಲಾಖೆ ಅಧಿಕೃತವಾಗಿ ಪ್ರಕಟಿಸಿದ ಬಳಿಕವೇ ಸ್ಪಷ್ಟವಾಗಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
