ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಹಗರಣ ಆರೋಪ ಸಂಬಂಧ ಕಾನೂನುಬಾಹಿರ ನಿರ್ಣಯ ಕೈಗೊಂಡ ರಾಜ್ಯಪಾಲರು ರಾಜೀನಾಮೆ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ನಲ್ಲಿ ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದಾರೆ. ಇದೇ ವೇಳೆ ತಮ್ಮ ವಿರುದ್ಧ ರಾಜ್ಯಪಾಲರು ನೀಡಿರುವ ಆದೇಶದ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ಚುನಾಯಿತ ಸರ್ಕಾರವನ್ನು ಅಸ್ತಿರಗೊಳಿಸುತ್ತಿದೆ. ಇದು ಪ್ರಜಾಪ್ರಭುತ್ವದ ಮೂಲಭೂತ ತತ್ವಕ್ಕೆ ಧಕ್ಕೆ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ, ಪ್ರಜಾತಂತ್ರಕ್ಕೆ ಧಕ್ಕೆ ಎಂದು ಸಚಿವ ಸಂಪುಟ ನಿರ್ಣಯಿಸಿದೆ. ಎಲ್ಲಾ ರಾಜ್ಯ ಸರ್ಕಾರಗಳ ಎಲ್ಲಾ ಮುಖ್ಯ ಕಾರ್ಯದರ್ಶಿಗಳಿಗೆ ಸೆಪ್ಟೆಂಬರ್ 3, 2021 ಕ್ಕೆ ಕೇಂದ್ರ ಸರ್ಕಾರವೇ ಕಳುಹಿಸಿರುವ ಸುತ್ತೋಲೆ ಪ್ರಕಾರವೇ ರಾಜ್ಯಪಾಲರು ಪ್ರೊಸೀಜರ್ ಅನುಸರಿಸಿಲ್ಲ. ಸುತ್ತೋಲೆಯಲ್ಲಿರುವ ನಿರ್ದೇಶನಗಳನ್ನೇ ರಾಜ್ಯಪಾಲರು ಪಾಲಿಸಿಲ್ಲ. ಆದ್ದರಿಂದ ರಾಜ್ಯಪಾಲರ ನಿರ್ಣಯ ಕಾನೂನುಬಾಹಿರ. ಈ ಕಾನೂನುಬಾಹಿರ ತೀರ್ಮಾನದ ವಿರುದ್ಧ ಕಾನೂನು ಹೋರಾಟ ನಡೆಸಲು ಸಚಿವ ಸಂಪುಟ ಸಭೆ ನಿರ್ಣಯಿಸಿದೆ. ಚುನಾಯಿತ ಸರ್ಕಾರವನ್ನು ಕಿತ್ತಾಕುವ ಕೇಂದ್ರ ಸರ್ಕಾರದ ದುರುದ್ದೇಶದ ಪ್ರಯತ್ನಕ್ಕೆ ನಾವು ತಡೆಯೊಡ್ಡಬೇಕು ಎಂದು ನಿರ್ಣಯಿಸಿದ್ದೇವೆ ಎಂದು ಹೇಳಿದರು.
ನನ್ನ ವಿರುದ್ಧ ತನಿಖೆ ನಡೆದಿಲ್ಲ. ತನಿಖೆಯಲ್ಲಿ ನನ್ನ ಪಾತ್ರದ ಉಲ್ಲೇಖವಿಲ್ಲ. ನನ್ನ ಪಾತ್ರದ ಬಗ್ಗೆ ಯಾರೂ ಯಾವುದೇ ದಾಖಲೆ ಕೊಟ್ಟಿಲ್ಲ. ನನ್ನ ಸರ್ಕಾರದ ಅವಧಿಯಲ್ಲಿ ನಡೆದ ವಿಚಾರ ಇದಲ್ಲ. ನನ್ನಿಂದ ಒಂದೂ ಪತ್ರ ಹೋಗಿಲ್ಲ. ನನ್ನ ಸಹಿ ಎಲ್ಲೂ ಇಲ್ಲ. ನನ್ನಿಂದ ಒಂದೂ ಮನವಿ ಪತ್ರವೂ ಹೋಗಿಲ್ಲ. ಎಲ್ಲವೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವುದು ಎಂದರು.
ನಾನು ಏಕೆ ರಾಜೀನಾಮೆ ನೀಡಬೇಕು? ನನ್ನ ಪಾತ್ರದ ಬಗ್ಗೆ ಎಲ್ಲೂ, ಯಾರೂ ಹೇಳುತ್ತಿಲ್ಲ. ಆದರೂ ನಾನೇಕೆ ರಾಜೀನಾಮೆ ನೀಡಲಿ? ಯಾವುದೇ ದಾಖಲೆ, ಸಾಕ್ಷ್ಯ, ತನಿಖೆ ಇಲ್ಲದಿದ್ದರೂ ರಾಜ್ಯಪಾಲರು ಆಧಾರವಿಲ್ಲದೆ ಅನುಮತಿ ನೀಡಿ ಕೇಂದ್ರದ ಒತ್ತಡಕ್ಕೆ ಒಳಗಾಗಿದ್ದಾರೆ. ತಪ್ಪು ಮಾಡದ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಕಾನೂನುಬಾಹಿರ ನಿರ್ಣಯ ಕೈಗೊಂಡ ರಾಜ್ಯಪಾಲರು ರಾಜೀನಾಮೆ ನೀಡಬೇಕು.
ದೊಡ್ಡ ಷಡ್ಯಂತ್ರ ನಡೆಯುತ್ತಿರುವುದು ನಮಗೆ ಗೊತ್ತಿತ್ತು. ಅದಕ್ಕೆ ನಾವೂ ಹೋರಾಟದ ಸಿದ್ಧತೆ ಮಾಡಿಕೊಂಡಿದ್ದೇವೆ. ಬಿಜೆಪಿ–ಜೆಡಿಎಸ್ ರಾಜ್ಯದ ಜನರ ಮುಂದೆ ಬೆತ್ತಲಾಗುತ್ತಿದ್ದಾರೆ. ನಾವು ಸತ್ಯ ಮುಂದಿಟ್ಟು ಜನರ ನಡುವೆ ಮತ್ತಷ್ಟು ಗಟ್ಟಿ ಆಗುತ್ತೇವೆ ಎಂದು ಅವರು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q