ಪಾವಗಡ: ತಾಲ್ಲೂಕಿನಲ್ಲಿ ಸಾರ್ವಜನಿಕರಿಗೆ, ಸಿಬ್ಬಂದಿ ಕೊರತೆಯಿಂದಾಗಿ ಆರೋಗ್ಯ ಸೇವೆ ಸಿಗುತ್ತಿಲ್ಲ ಎಂದು ಆರೋಪಿಸಿ, ತಾಲ್ಲೂಕು ಕಛೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿ, ಅಗತ್ಯ ಸಿಬ್ಬಂದಿ ಒದಗಿಸಬೇಕೆಂದು ರೈತ ಸಂಘದ ಮುಖಂಡರು ಆಗ್ರಹಿಸಿದರು. ತಾಲ್ಲೂಕು ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ನವರ ನೇತೃತ್ವದಲ್ಲಿ ತಹಶೀಲ್ದಾರ್ ರವರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದರು.
ಇದೇ ವೇಳೆ ತಾಲ್ಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ ಮಾತನಾಡಿ, ಪಾವಗಡದಲ್ಲಿ ಘನ ಸರ್ಕಾರದ ಸರ್ಕಾರಿ ಆಸ್ಪತ್ರೆ ನೂತನವಾಗಿ ಕಟ್ಟಡ ನಿರ್ಮಾಣವಾಗಿದ್ದು, ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ 3 ಜನ ಡಾಕ್ಟರ್ ಗಳು ಇದ್ದು, ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಇಲ್ಲದೆ ಜನ ಪರದಾಡುವಂತೆ ಆಗಿದೆ. ಪಾವಗಡ ಸರ್ಕಾರಿ ಆಸ್ಪತ್ರೆಗೆ ಬೇಕಾಗಿರುವ ತಜ್ಞ ವೈದ್ಯರುಗಳ ಸಂಖ್ಯೆ ಮಂಜೂರು 10 ಹುದ್ದೆ, ಈಗ ಹಾಲಿ ಕೆಲಸ ಮಾಡುತ್ತಿರುವವರು ಸಂಖ್ಯೆ 3 ಜನರಿದ್ದಾರೆ. ತುರ್ತು ಚಿಕಿತ್ಸೆ ವೈದ್ಯಾಧಿಕಾರಿ 3 ಜನರು ಇರುವ ಕಡೆ ಒಬ್ಬರೂ ಇಲ್ಲ, ದಂತ ವೈದ್ಯರುಗಳಿಲ್ಲ, ಸಹಾಯಕ ಆಡಳಿತಾಧಿಕಾರಿ ಇಲ್ಲ, ಕಚೇರಿ ಅಧೀಕ್ಷಕರಿಲ್ಲ. ಪ್ರಥಮ ದರ್ಜೆ ಸಹಾಯಕರು 3 ಜನ ಇರುವ ಕಡೆ ಖಾಲಿ 2 ಹುದ್ದೆ, ದ್ವಿತೀಯ ದರ್ಜೆ ಸಹಾಯಕರು 3 ಜನ ಇರುವ ಕಡೆ ಖಾಲಿ 2 ಹುದ್ದೆ, ಹಿರಿಯ ಶುಶ್ರೂಷಕರು 2 ಇರುವ ಕಡೆ ಒಬ್ಬರೂ ಇಲ್ಲ.
ಒಟ್ಟು ಹುದ್ದೆಗಳು 94, 27 ಜನರು ಕಾರ್ಯನಿರ್ವಹಿಸುತ್ತಿದ್ದು, 50 ಕ್ಕೂ ಹೆಚ್ಚು ಹುದ್ದೆ ಖಾಲಿ ಇರುವುದರಿಂದ ಪಾವಗಡ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳು ಹಿಡಿಶಾಪ ಹಾಕುತ್ತಿದ್ದಾರೆ. ಆಸ್ಪತ್ರೆ ಸಿಬ್ಬಂಧಿ ಕೊರತೆಯಿಂದ ಗರ್ಭಿಣಿ ಸ್ತ್ರೀಯರಿಗೆ ಮತ್ತು ಹೆರಿಗೆಗೆ ಬಂದಿರುವ ಸ್ತ್ರೀಯರಿಗೆ ತುಮಕೂರು ಜಿಲ್ಲಾಸ್ಪತ್ರೆಗೆ ಮತ್ತು ಬೆಂಗಳೂರಿಗೆ ಕಳುಹಿಸಿಕೊಡುವ ಪ್ರಸಂಗ ಎದುರಾಗಿದೆ. ಹೊರರೋಗಿಗಳಿಗೆ ಮತ್ತು ಒಳರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗದೇ ಇರುವ ಕಾರಣ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುವಂತಾಗಿದೆ. ನಿರ್ಗತಿಕರು, ಆರ್ಥಿಕವಾಗಿ ಹಿಂದುಳಿದಿರುವ ಜನರು ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯಲಾಗುತ್ತಿಲ್ಲ, ಆದ್ದರಿಂದ ಕೂಡಲೇ ಸಮರ್ಪಕ ಸಿಬ್ಬಂದಿ ಒದಗಿಸಿ ತಾಲ್ಲೂಕಿನ ಜನತೆಗೆ ಉತ್ತಮ ಆರೋಗ್ಯ ಸೇವೆ ನೀಡಬೇಕು, ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಮಾತ್ರೆಗಳು, ಚಿಕ್ಕಮಕ್ಕಳಿಗೆ ಟಾನಿಕ್, ಇಂಜೆಕ್ಷನ್ ಗಳು ಲಭ್ಯವಿಲ್ಲ ಎಂದು ಹೇಳಿ ಔಷಧಿಗಳಿಗೆ ಹೊರಗಡೆ ತರುವಂತೆ ಬರೆದು ಕೊಡುತ್ತಿದ್ದಾರೆ.
ಆಸ್ಪತ್ರೆಗಳಲ್ಲಿ ಆಲ್ಫಾಸೌಂಡ್ ಸ್ಕ್ಯಾನಿಂಗ್ ಮತ್ತು ಶಸ್ತ್ರಚಿಕಿತ್ಸೆಗೆ ಬೇಕಾದ ಸಲಕರಣೆಗಳ ಕೊರತೆಯಿದೆ, ಆದ್ದರಿಂದ ಸರ್ಕಾರಿ ಆಸ್ಪತ್ರೆಗೆ ಬೇಕಾದ ವೈದ್ಯರು ಮತ್ತು ಸಿಬ್ಬಂದಿಗಳನ್ನು ಸಂಪೂರ್ಣವಾಗಿ ತುಂಬಬೇಕು. ಇಲ್ಲವಾದರೆ ಪಾವಗಡ ತಾಲ್ಲೂಕು ರೈತ ಸಂಘ ಮತ್ತು ಎಲ್ಲಾ ಪ್ರಗತಿಪರ ಸಂಘಟನೆಗಳು ನಿರಂತರ ಧರಣಿಯನ್ನು ಹಮ್ಮಿಕೊಳ್ಳಲಾಗುತ್ತದೆಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಹಲವು ರೈತ ಮುಖಂಡರು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296