ತಿರುವನಂತಪುರಂ: ಭಾರೀ ಮಳೆ ಇರುವ ಹಿನ್ನೆಲೆ ಹವಾಮಾನ ಇಲಾಖೆಯು ಕೇರಳದ 9 ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಿದೆ. ಭಾರೀ ಮಳೆಯಾದರೆ ಮಣಿಯಾರ್ ಅಣೆಕಟ್ಟಿನ ಶೆಟರ್ ಗಳನ್ನು ಮೇಲಕ್ಕೆತ್ತುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ನೈಋತ್ಯ ಮಾನ್ಸೂನ್ ಮೇ 19ರ ವೇಳೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ತಲುಪುವ ನಿರೀಕ್ಷೆಯಿದೆ. ಇದರ ನಂತರ ಮುಂಗಾರು ಮೇ 29 ಮತ್ತು ಜೂನ್ 1ರ ನಡುವೆ ಕೇರಳವನ್ನು ಅಪ್ಪಳಿಸಬಹುದು. ಸಾಮಾನ್ಯವಾಗಿ, ಜೂನ್ 10ರೊಳಗೆ ಮುಂಗಾರು ಮಹಾರಾಷ್ಟ್ರವನ್ನು ಪ್ರವೇಶಿಸುತ್ತದೆ. ಈ ವರ್ಷ ಅದು ಸರಿಯಾದ ಸಮಯಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಜೂನ್ 15ರ ವೇಳೆಗೆ ಗುಜರಾತ್, ಮಧ್ಯಪ್ರದೇಶ, ಛತ್ತೀಸ್ ಗಢ, ಜಾರ್ಖಂಡ್ ಮತ್ತು ಬಿಹಾರಕ್ಕೆ ಮುಂಗಾರು ಪ್ರವೇಶಿಸಬಹುದು. ಜೂನ್ 20-25ರ ನಡುವೆ ಮುಂಗಾರು ಉತ್ತರ ಪ್ರದೇಶ, ಹಿಮಾಚಲ, ಉತ್ತರಾಖಂಡ ಮತ್ತು ಕಾಶ್ಮೀರವನ್ನು ಪ್ರವೇಶಿಸುವ ಸಾಧ್ಯತೆಯಿದೆ. ಮಾನ್ಸೂನ್ ಜೂನ್ 30ರಂದು ರಾಜಸ್ಥಾನ, ದೆಹಲಿ, ಹರಿಯಾಣ ಮತ್ತು ಪಂಜಾಬ್‌ಗೆ ಅಪ್ಪಳಿಸಬಹುದು. ಇದು ಜುಲೈ 8ರ ವೇಳೆಗೆ ಇಡೀ ದೇಶವನ್ನು ಆವರಿಸುತ್ತದೆ.
ತಿರುವನಂತಪುರದಲ್ಲಿ ಇಂದು ಗರಿಷ್ಠ ತಾಪಮಾನ ಸುಮಾರು 34 ಡಿಗ್ರಿ ಸೆಲ್ಸಿಯಸ್ ಇತ್ತು. ಬುಧವಾರ ರಾತ್ರಿ 11.30ರವರೆಗೆ ಸಮುದ್ರದ ಅಬ್ಬರ ಹೆಚ್ಚಾಗಿದ್ದು, ಅಲೆಗಳ ಅಬ್ಬರ ಹೆಚ್ಚಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಇಂದು ಕೇರಳದ ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಎರ್ನಾಕುಲಂ, ಇಡುಕ್ಕಿ, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್ ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296