ಹಿರಿಯೂರು: ತಾಲ್ಲೂಕಿನ ಹಿರಿಯೂರು ನಗರಗಳಲ್ಲಿ ಶುಚಿತ್ವ ಕಾಪಾಡದ ಹೋಟೆಲ್ ಗಳಿಗೆ ನಗರಸಭೆಯ ನೂತನ ಅಧ್ಯಕ್ಷರಾದ ಎಸ್. ಶಿವರಂಜಿನಿ ಯಾದವ್ ದಿಢೀರ್ ದಾಳಿ ನಡೆಸಿ ಹೊಟೇಲ್ ಗಳಲ್ಲಿ ಶುಚಿತ್ವ ಕಾಪಾಡಲು ತಾಕೀತು ಮಾಡಿದರು.
ಶುಕ್ರವಾರದಂದು ಹಿರಿಯೂರು ನಗರದ ವಿವಿಧ ಹೋಟೆಲ್ ಗಳಿಗೆ ನಗರಸಭೆಯ ಆರೋಗ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ದಿಢೀರ್ ದಾಳಿ ನಡೆಸಿ ಸ್ವಚ್ಛತೆಯನ್ನು ಕಾಪಾಡುವಂತೆ ಅವರು ಎಚ್ಚರಿಕೆ ನೀಡಿದರು.
ಹಿರಿಯೂರು ನಗರದ ಸ್ವಚ್ಛತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ, ಇದೇ ಪುನರಾವರ್ತನೆಯಾದರೆ, ಸಾರ್ವಜನಿಕರಿಂದ ದೂರು ಬಂದರೆ ಎಷ್ಟೇ ಪ್ರಭಾವಿಗಳಿಂದ ಒತ್ತಡ ತಂದರೂ ನಾನು ಕೇಳುವುದಿಲ್ಲ. ಕಠಿಣಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾಮಾಂತರ ಪ್ರದೇಶಗಳಿಂದ ಬಂದ ಜನರಿಗೆ ಶುಚಿ-ರುಚಿಯಾದ ಊಟ-ತಿಂಡಿ ಸಿಗುವಂತಾಗಬೇಕು. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ, ವಿವೇಚನೆಯಿಂದ ಹೋಟೆಲ್ ಗಳನ್ನು ನಡೆಸಬೇಕು ಎಂದುಹೋಟೆಲ್ ಮಾಲಿಕರಿಗೆ ಶಿವರಂಜನಿ ಯಾದವ್ ಸೂಚಿಸಿದರು.
ಈ ಸಂದರ್ಭದಲ್ಲಿ ಹಿರಿಯೂರು ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರುಗಳಾದ ಸಂಧ್ಯಾ ಮತ್ತು ಮೀನಾಕ್ಷಿ ಮಾತನಾಡಿ, ಸ್ವಚ್ಛ, ಸುಂದರ, ನೈರ್ಮಲ್ಯ ನಗರವನ್ನಾಗಿಸಲು ಎಲ್ಲಾ ಹೋಟೆಲ್, ಉದ್ದಿಮೆ, ಬೀದಿಬದಿ, ತರಕಾರಿ-ಹೂ ಮಾರಾಟಗಾರರು ನಗರಸಭೆಯೊಂದಿಗೆ ಸಹಕರಿಸಬೇಕು ಎಂದರಲ್ಲದೆ, ನಗರದ ಶುಚಿತ್ವ ಕಾಪಾಡಲು, ಪರಿಣಾಮಕಾರಿ ಕ್ರಮ ಜರುಗಿಸಲು ನಗರಸಭೆಯ ಆರೋಗ್ಯ ಶಾಖೆ ಸಿದ್ಧವಾಗಿದ್ದು, ನಗರದ ಎಲ್ಲಾ ಸಾರ್ವಜನಿಕರು, ವ್ಯಾಪಾರಿಗಳು, ಜನಪ್ರತಿನಿಧಿಗಳು ಸಹಕರಿಸಬೇಕು ಎಂಬುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀಶೈಲ ವೃತ್ತದ ಬಳಿ ಇರುವ ಹೋಟೆಲ್ ಒಂದರಲ್ಲಿ ಶುಚಿತ್ವ ಕಾಪಾಡದೇ ತಿಂಡಿ, ಊಟ ತಯಾರಿಸುತ್ತಿದ್ದ ಹೋಟೆಲ್ ಮಾಲೀಕರಿಗೆ 10 ಸಾವಿರ ರೂಗಳ ದಂಡ ವಿಧಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ರತ್ನಮ್ಮ, ಸಿಬ್ಬಂದಿಗಳಾದ ದೇವರಾಜ್, ದುರ್ಗೇಶ್, ಈರಕ್ಯಾತಪ್ಪ ಇತರರು ಉಪಸ್ಥಿತರಿದ್ದರು..
ವರದಿ: ಮುರುಳಿಧರನ್ ಆರ್. ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz