ಬೀದರ್: ಜಿಲ್ಲಾ ಸರ್ಕಾರಿ ಆಸ್ಪತ್ರೆಯಾದ ಬ್ರಿಮ್ಸ್‌ನಲ್ಲಿ (ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ಗುರುವಾರ ತಡರಾತ್ರಿ ಕರ್ತವ್ಯ ನಿರತ ವೈದ್ಯರ ಮೇಲೆ ಭೀಕರ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಕ್ಷಣದ ಕಾರ್ಯಾಚರಣೆ ನಡೆಸಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಆದಿತ್ಯ ತಜಲಾಪುರ, ವಿನೋದ್ ಚಾಂಬೋಲ್, ಗೋವಿಂದ್ ಬೆನಕನಳ್ಳಿ, ಅನಿಲ್ ಬೆನಕನಳ್ಳಿ, ಮಹಾದೇವ ಬೆನಕನಳ್ಳಿ, ಬಾಲಾಜಿ ತಜಲಾಪುರ ಹಾಗೂ ಪವನ್ ಚಾಂಬೋಲ್ ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನೆಲೆ: ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ವಿಜಯ್ ಸಿಂಗ್ ತುಕಾರಾಂ ಎಂಬಾತ ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಗಾಗಿ ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದನು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ವಿಜಯ್‌ನ ಸಂಬಂಧಿಕರು ಮತ್ತು ಪರಿಚಯಸ್ಥರ ಗುಂಪು, ಮೆಡಿಕೋ ಲೀಗಲ್ ಸರ್ಟಿಫಿಕೇಟ್ (MLC) ವಿಚಾರವಾಗಿ ಕರ್ತವ್ಯದಲ್ಲಿದ್ದ ವೈದ್ಯ ಡಾ. ತುಕಾರಾಂ ಮಾಚಿಂದ್ರ ಅವರೊಂದಿಗೆ ಗಲಾಟೆ ತೆಗೆದಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ, ಗುಂಪು ವೈದ್ಯರ ಮೇಲೆ ತೀವ್ರವಾಗಿ ಹಿಗ್ಗಾಮುಗ್ಗಾ ಥಳಿಸಿ ಹಲ್ಲೆ ನಡೆಸಿದೆ. ಅಲ್ಲದೆ, “ರೋಗಿಗೆ ಸರಿಯಾಗಿ ಚಿಕಿತ್ಸೆ ನೀಡಬೇಕು, ಏನಾದರೂ ಹೆಚ್ಚು ಕಡಿಮೆಯಾದರೆ ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ” ಎಂದು ವೈದ್ಯರಿಗೆ ಜೀವ ಬೆದರಿಕೆ ಹಾಕಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಆಸ್ಪತ್ರೆಯ ಇತರ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ವೈದ್ಯರ ಆಕ್ರೋಶ ಮತ್ತು ಪ್ರತಿಭಟನೆ: ವೈದ್ಯರ ಮೇಲಿನ ಈ ಭೀಕರ ಹಲ್ಲೆಯನ್ನು ಖಂಡಿಸಿ ಬ್ರಿಮ್ಸ್ ಆಸ್ಪತ್ರೆಯ ಕಿರಿಯ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಶುಕ್ರವಾರ ಆಸ್ಪತ್ರೆಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಆಸ್ಪತ್ರೆಗಳಲ್ಲಿ ವೈದ್ಯರ ರಕ್ಷಣೆಗೆ ಸೂಕ್ತ ಭದ್ರತೆ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಬ್ರಿಮ್ಸ್ ನಿರ್ದೇಶಕಿ ಡಾ. ಶಾಂತಲಾ ಕೌಜಲಗಿ ಮಾತನಾಡಿ, “ವೈದ್ಯರ ಮೇಲಿನ ಹಲ್ಲೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಬ್ರಿಮ್ಸ್‌ಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಲಾಗುವುದು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು” ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
ಸಂಸದ ಸಾಗರ್ ಖಂಡ್ರೆ ಖಂಡನೆ: ಘಟನೆ ತಿಳಿಯುತ್ತಿದ್ದಂತೆ ಹಲ್ಲೆಗೊಳಗಾದ ವೈದ್ಯ ಡಾ. ತುಕಾರಾಂ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬೀದರ್ ಲೋಕಸಭಾ ಕ್ಷೇತ್ರದ ಸಂಸದ ಸಾಗರ್ ಖಂಡ್ರೆ ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಹಗಲಿರುಳು ಶ್ರಮಿಸುವ ವೈದ್ಯರ ಮೇಲೆ ಸಣ್ಣ ವಿಷಯಕ್ಕಾಗಿ ಕಾನೂನನ್ನು ಕೈಗೆತ್ತಿಕೊಂಡು ಇಷ್ಟೊಂದು ಕ್ರೂರವಾಗಿ ಹಲ್ಲೆ ನಡೆಸಿರುವುದು ಅಮಾನವೀಯ ಮತ್ತು ಆಘಾತಕಾರಿ ಸಂಗತಿ” ಎಂದು ಕಳವಳ ವ್ಯಕ್ತಪಡಿಸಿದರು. ಅಲ್ಲದೆ, ಆಸ್ಪತ್ರೆಯ ಒಳಗೆ ಭಯದ ವಾತಾವರಣ ಸೃಷ್ಟಿಸಿದ ಪ್ರತಿಯೊಬ್ಬ ಆರೋಪಿಯ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಗಾಯಾಳು ವೈದ್ಯ ಡಾ. ತುಕಾರಾಂ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


