ನಿನ್ನೆ, ಅಂದರೆ ಸೋಮವಾರ ಬೆಂಗಳೂರು ನಗರ ನವೆಂಬರ್ ೨೦೧೨ರಿಂದ ಈವರೆಗಿನ ಅತ್ಯಂತ ತಣ್ಣನೆಯ ದಿನವಾಗಿತ್ತಂತೆ. ಸೋಮವಾರದ ತಾಪಮಾನ ೧೩.೯ ಡಿಗ್ರಿ ಸೆಲ್ಸಿಯಸ್ ಗೆ ಇಳಿದಿತ್ತು, ಎನ್ನುತ್ತದೆ ಹವಾಮಾನ ಇಲಾಖೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಾಖಲಿಸಲಾಗಿರುವ ಕನಿಷ್ಠ ತಾಪಮಾನ ೧೪.೭ ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ದಾಖಲಾಗಿರುವ ಕನಿಷ್ಠ ತಾಪಮಾನ ೧೨.೫ ಡಿಗ್ರಿ ಸೆಲ್ಸಿಯಸ್. ಹವಾಮಾನ ಇಲಾಖೆಯ ಅಧಿಕಾರಿಗಳ ಪ್ರಕಾರ, ಸೋಮವಾರ ‘ನಾರ್ಮಲ್’ಗಿಂತ ತಾಪಮಾನ ಕೆಳಗಿಳಿತ್ತು.
“ಬೆಂಗಳೂರಿನಲ್ಲಿ ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ಸಾಮಾನ್ಯ ತಾಪಮಾನ ೧೮ ರಿಂದ ೨೦ ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದರೆ, ಸೋಮವಾರದಂದು ಇದು ಸುಮಾರು ೫.೧ ಡಿಗ್ರಿ ಸೆಲ್ಸಿಯಸ್ ನಷ್ಟು ಕಡಿಮೆಯಾಯಿತ್ತು. ಈ ಮಟ್ಟದ ತಾಪಮಾನ ಬೆಂಗಳೂರು ನಗರದಲ್ಲಿ ನವೆಂಬರ್ ೧೯, ೨೦೧೨ರಲ್ಲಿ ದಾಖಲಾಗಿತ್ತು,” ಎಂದಿದ್ದಾರೆ.
ಇದು ದಕ್ಷಿಣ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಸಮುದ್ರದ ಒತ್ತಡದಿಂದಲೂ ಆಗಿದೆ. “ಬಂಗಾಳ ಕೊಲ್ಲಿಯಲ್ಲಿನ ಒತ್ತಡ ತಮಿಳುನಾಡಿನ ಕರಾವಳಿಯ ಕಡೆಗೆ ಚಲಿಸುತ್ತಿದೆ. ಆ ಪಥದಲ್ಲಿ ತೇವಾಂಶವನ್ನೆಲ್ಲಾ ಸೆಳೆದುಕೊಳ್ಳುತ್ತದೆ. ಇದರಿಂದಾಗಿ ಆಕಾಶದಲ್ಲಿ ಮೋಡಗಳು ಕಂಡು ಬಂದಿಲ್ಲ. ಮೋಡಗಳು ಕಾಣದೆ ಇರುವ ಕಾರಣದಿಂದಾಗಿ ಭೂಮಿಯ ಮೇಲ್ಮೈನಿಂದ ಉತ್ಪತ್ತಿಯಾಗುವ ಶಾಖ ಸೆರೆಯಾಗುವುದಿಲ್ಲ, ಹಾಗಾಗಿ ತಾಪಮಾನದಲ್ಲಿ ಬಹಳ ಇಳಿಕೆ ದಾಖಲಾಯಿತು.
ಸೋಮವಾರ ಬೆಳಿಗ್ಗೆ ಕನಿಷ್ಠ ತಾಪಮಾನ ೫.೧ ಡಿಗ್ರಿಸೆಲ್ಸಿಯಸ್ ನಷ್ಟು ಕಡಿಮೆಯಾಗಿತ್ತು,” ಎಂದು ವಿವರಿಸಿದರು.
ಮುಂದಿನ ಎರಡು ವಾರಗಳಲ್ಲಿ, ಕನಿಷ್ಠ ತಾಪಮಾನ ರಾಜ್ಯದ ಕೆಲವು ಸ್ಥಳಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ. ಬೆಂಗಳೂರಿನಲ್ಲಿ ಬಹಳ ಕಡಿಮೆ ಇರುತ್ತದೆ. ಕರ್ನಾಟಕದ ದಕ್ಷಿಣದ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ರಾಮನಗರ, ಮೈಸೂರು, ಮಂಡ್ಯ ಹಾಗೂ ತುಮಕೂರಿನ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣವಿರುತ್ತದೆ ಹಾಗೂ ಸುಮಾರಾಗಿ ಮಳೆಯೂ ಬರುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
Reporting by Antony begur
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy