ಬೆಂಗಳೂರು: ಸಮಾಜದ ಸ್ವಾಸ್ಥ್ಯವನ್ನ ಕಾಪಾಡಬೇಕು ಅಂದ್ರೆ ಮಾಧ್ಯಮಗಳ ಪಾತ್ರ ಬಲುದೊಡ್ಡದು ಅಂತಾರೆ. ಅದಕ್ಕಾಗಿಯೇ ಇವತ್ತಿನ ಈ ಸುದ್ದಿ ಸಾಕ್ಷಿಯಾಗಿದೆ. ನೋಡೋಕೆ, ಕೇಳೋಕೆ ಪ್ರೇಕ್ಷಕರಿಗೆ ಇಷ್ಟವಿಲ್ಲದಿದ್ರೂ ಇಲ್ಲಿನ ಪರಿಸ್ಥಿತಿ, ದುಸ್ಥಿತಿ ಬಗ್ಗೆ ತೋರಿಸಲೇ ಬೇಕಾದ ಅನಿವಾರ್ಯವಿದೆ.
ಹೌದು… ಬೆಂಗಳೂರಿನಲ್ಲಿ ಸಾಕಷ್ಟು ಸ್ಮಶಾನಗಳಿವೆಯಾದರೂ, ಕಲ್ಪಲ್ಲಿ ಸ್ಮಶಾನ ನಗರದ ಅತ್ಯಂತ ಹಳೆಯ ಸ್ಮಶಾನಗಳಲ್ಲಿ ಒಂದು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೇರಿದ ಸ್ಮಶಾನವಾದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದೆ. ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಕನಿಷ್ಟ ಮೂಲಭೂತ ಸೌಕರ್ಯ ಇಲ್ಲದೆ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ. ಸ್ಮಶಾನದಲ್ಲಿ ಸಮಾಧಿ ಅಗೆಯುವವರು ಹಾಗೂ ಅವರ ಕುಟುಂಬಸ್ಥರು ಸೇರಿ ಸುಮಾರು 40ಕ್ಕೂ ಹೆಚ್ಚು ಮಂದಿ ನೆಲೆಸಿದ್ದಾರೆ.
ಅಲ್ಲದೆ, ಇಲ್ಲಿ ನೋಂದಣಿ ಕಚೇರಿ ಕೂಡ ಇದೆ. ಅಡುಗೆ, ಸ್ನಾನ, ಶೌಚಾಲಯ ಎಲ್ಲದಕ್ಕೂ 35-40 ಮಂದಿಗೆ 2 ಟ್ಯಾಂಕರ್ ಮಾತ್ರ ನೀರು ಪೂರೈಕೆ ಆಗುತ್ತಿದೆ. 6 ನಲ್ಲಿಗಳಿದ್ದರೂ ಎರಡು ನಲ್ಲಿಗಳು ಮಾತ್ರ ಕೆಲಸ ಮಾಡುತ್ತಿವೆ. ನೀರಿನ ಗುಣಮಟ್ಟ, ನಿರಂತರ ಹೊಗೆ ಸ್ಮಶಾನದ ಕೆಲಸಗಾರರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಸ್ಮಶಾನದ ಏಕೈಕ ಮಹಿಳಾ ರಿಜಿಸ್ಟ್ರಾರ್ ಸತ್ಯಾ ಅವರು ಮಾತನಾಡಿ, ಸ್ಮಶಾನದಲ್ಲಿ ಎರಡು ಶೌಚಾಲಯಗಳಿದ್ದರು. ಅವುಗಳ ಸ್ಥಿತಿ ಶೋಚನೀಯವಾಗಿದೆ. ಅವುಗಳ ಸ್ಥಿತಿ ಹೇಳತೀರದ್ದಾಗಿದೆ. ಅವು ಬಳಕೆಗೆ ಸೂಕ್ತವಲ್ಲ. ಮುಖ್ಯವಾಗಿ ಮಹಿಳೆಯರಿಗೆ ಎಂದು ಬೇಸರ ವ್ಯಕ್ತಪಡಿಸಿದ್ದರು.
ಶೌಚಾಲಯ ಬಳಕೆ ಮಾಡಬೇಕೆಂದ್ರೆ ಸುಮಾರು 1 ಕಿಮೀ ದೂರದಲ್ಲಿರುವ ನನ್ನ ಮನೆಗೆ ಹೋಗಬೇಕು. ಹೀಗಾಗಿ ಆಗಾಗ್ಗೆ ಕಚೇರಿ ಬಂದ್ ಮಾಡಬೇಕಾಗುತ್ತದೆ. ಆದರೆ, ಈ ಗ್ಯಾಪ್ ನಲ್ಲಿ ಕಚೇರಿಗೆ ಬರುವವರಿಗೆ ನಮ್ಮ ಪರಿಸ್ಥಿತಿ ಅರ್ಥವಾಗುವುದಿಲ್ಲ. ಅವರಿಗೆ ವಿವರಿಸೋಕೆ ಆಗುವುದೂ ಇಲ್ಲ. ಕಚೇರಿಗೆ ಬರುವವರು ತಕ್ಷಣವೇ ತಮ್ಮ ಕೆಲಸವಾಗಬೇಕೆಂಂದು ನಿರೀಕ್ಷಿಸುತ್ತಾರೆ. ಆದರೆ, ನಮ್ಮ ಮೂಲಭೂತ ಅಗತ್ಯವನ್ನು ನೋಡುವವರು ಯಾರು? ಎಂದು ಪ್ರಶ್ನಿಸಿದರು.
ಸ್ಮಶಾನ ಎಂದರೆ, ದುಃಖ, ನೋವು. ಆದರೆ, ಇಲ್ಲಿನ ಸಿಬ್ಬಂದಿಗಳ ನೋವು ಮಾತ್ರ ಹೇಳತೀರದಾಗಿದೆ. ಒಂದಿರಲಿ, ಇಲ್ಲದೇ ಇರಲಿ, ಸ್ಮಶಾನದಲ್ಲಿ ಸಮಾಧಿ ಅಗೆಯುವುದರ ಮೇಲೆ ಇವರ ಜೀವನ ಅವಲಂಬಿಸಿದೆ. ಮೂಲ ಸೌಕರ್ಯಗಳಿಲ್ಲದಿದ್ದರೂ ನಿರಂತರ ಕೆಲಸವನ್ನು ಮಾಡುತ್ತಿದ್ದಾರೆ. ಒಂದು ವೇಳೆ ಇವರು ಕೆಲಸ ನಿಲ್ಲಿಸಿದರೆ ಏನಾಗುತ್ತದೆ? ಜನರ ನೋಟ ಯಾರತ್ತ ತಿರುಗುತ್ತದೆ? ಆಗ ಬಿಬಿಎಂಪಿ ಯಾರನ್ನು ಅವಲಂಬಿಸುತ್ತದೆ? ಎಂದು ನಿರ್ಲಕ್ಷ್ಯ ವಹಿಸಿದ ಪಾಲಿಕೆಯೇ ಉತ್ತರಿಸಬೇಕಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296