ಕನ್ನಡ ಭಾಷೆಯ ಮೂಲ ತತ್ವಗಳನ್ನು ಮಕ್ಕಳಿಗೆ ಅರ್ಥಪೂರ್ಣ ಮತ್ತು ಕ್ರಮಬದ್ಧವಾಗಿ ಶಿಕ್ಷಕರು ಕಲಿಸಿಕೊಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಕೆ.ಪದ್ಮನಾಭ ಅಭಿಪ್ರಾಯಪಟ್ಟರು.
ತುರುವೇಕೆರೆ ಪಟ್ಟಣದ ಬಿಆರ್ ಸಿ ಕಚೇರಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತುಮಕೂರು, ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ತುರುವೇಕೆರೆ ಹಾಗೂ ತಾಲ್ಲೂಕು ಕನ್ನಡ ಭಾಷಾ ಬೋಧಕರ ಸಂಘದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕಲಿಕಾ ಚೇತರಿಕೆ ಉಪಕ್ರಮ ತರಬೇತಿ ಕಾರ್ಯಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಪಠ್ಯದಲ್ಲಿರುವ ಮೌಲ್ವಿಕ ಅಂಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವ ಮೂಲಕ ಗುಣಾತ್ಮಕ ಕಲಿಕೆಗೆ ಹೆಚ್ಚು ಒತ್ತು ಕೊಡಬೇಕು. ತಾಲ್ಲೂಕಿನ ಪ್ರೌಢ ಶಾಲೆಗಳಲ್ಲಿ ವಿಷಯ ಶಿಕ್ಷಕರ ಕೊರತೆಯ ನಡುವೆಯೂ ಉತ್ತಮ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಜಿಲ್ಲಾ ಕನ್ನಡ ವಿಷಯ ಪರಿವೀಕ್ಷಕ ಎಚ್.ಜಿ.ಗಿರೀಶ್ 8 ಮತ್ತು 9ನೇ ತರಗತಿಯ ಮಕ್ಕಳಿಗೆ ಕಲಿಕಾ ಚೇತರಿಕೆ ಉಪಕ್ರಮಗಳ ಕುರಿತು ಮಾತನಾಡಿ, ಕೋವಿಡ್ 19ರ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಸಮರ್ಪಕ ಕಲಿಕೆ ಉಂಟಾಗಿಲ್ಲ. ಹಾಗಾಗಿ ಔಪಚಾರಿಕ ಶಿಕ್ಷಣದ ಒಂದು ಉಪಕ್ರಮವಾಗಿ ಕಲಿಕಾಚೇತರಿಕೆಯನ್ನು ಮಕ್ಕಳಲ್ಲಿ ಉಂಟು ಮಾಡುವುದಾಗಿದೆ.
ಅಂದರೆ ಮಕ್ಕಳು ಮರೆತದ್ದು, ಕಲಿಯದೇ ಬಿಟ್ಟದ್ದು ಮತ್ತು ಕಲಿಯಬೇಕಾದ್ದನ್ನು ಕ್ರಮಬದ್ಧವಾಗಿ ಕಲಿಸಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಯಾವುದೇ ಅಡೆತಡೆ ಇಲ್ಲದೆ ಮಕ್ಕಳ ಕಲಿಕೆಯನ್ನು ಸುಗಮಗೊಳಿಸುವುದಾಗಿದೆ ಎಂದರು.
ಬಿಆರ್ ಸಿ ಅಧಿಕಾರಿ ವೀಣಾ ಮಾತನಾಡಿ, ಪ್ರೌಢ ಶಾಲೆಗಳಲ್ಲಿ ಕಲಿಕಾ ಚೇತರಿಕೆ ಅನುಷ್ಠಾನವಾಗಿರುವ ಬಗ್ಗೆ ಪರಿಶೀಲನೆ ಮಾಡಲು ಜಿಲ್ಲಾ ತಂಡ ತಾಲ್ಲೂಕಿನ ಎಲ್ಲಾ ಪ್ರೌಢ ಶಾಲೆಗಳಿಗೆ ಜುಲೈ 18 ರಂದು ಭೇಟಿ ನೀಡಲಿದೆ ಎಂದರು.
ತಾಲ್ಲೂಕು ಕನ್ನಡ ಭಾಷಾ ಬೋಧಕರ ಸಂಘದ ಮಾಜಿ ಅಧ್ಯಕ್ಷ ಎಲ್.ಮಂಜೇಗೌಡ ಮಕ್ಕಳಿಗೆ ನೈತಿಕ ಶಿಕ್ಷಣ ಅಗತ್ಯ ಎಂದರು.
ಇದೇ ವೇಳೆ ಮುಖ್ಯ ಶಿಕ್ಷಕರಾಗಿ ಮುಂಬಡ್ತಿ ಹೊಂದಿ ಬೇರೆಡೆ ವರ್ಗಾವಣೆಯಾಗಿರುವ ವಿ.ಡಿ.ಪುಟ್ಟರಾಜು ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಭಾಷಾ ಬೋಧಕರ ಸಂಘದ ಅಧ್ಯಕ್ಷ ಆರ್.ಎಲ್.ಕೇಶವಮೂರ್ತಿ, ಉಪಾಧ್ಯಕ್ಷ ಎಚ್.ಎಂ.ರಂಗಸ್ವಾಮಿ, ಕೋಶಾಧ್ಯಕ್ಷ ಪ್ರಭು, ಕಾರ್ಯದರ್ಶಿ ಕೆ.ಟಿ.ಸಂಪತ್ತು, ಮುಖ್ಯ ಶಿಕ್ಷಕ ವಿ.ಟಿ.ಸೋಮಶೇಖರರಾಜು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು ಎಂ., ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz