ತುರುವೇಕೆರೆ: ಅನಾರೋಗ್ಯ ಪೀಡಿತ ವೃದ್ಧೆಯೊಬ್ಬರು ಪಿಂಚಣಿಗಾಗಿ ಅಲೆದಾಡುತ್ತಿದ್ದು, ಸರಿಯಾದ ಚಿಕಿತ್ಸೆ ಪಡೆಯಲು ಸಾಧ್ಯವಾಗದೇ ಕಂಗಾಲಾಗಿ ಕಣ್ಣೀರು ಹಾಕಿದ ಹೃದಯ ವಿದ್ರಾವಕ ಘಟನೆ ನಡೆದಿದೆ.
ತುರುವೇಕೆರೆ ತಾಲೂಕು ದಬ್ಬೆಗಟ್ಟ ಹೋಬಳಿ ಮುದಿಗೆರೆ ಗ್ರಾಮದ ವಯೋವೃದ್ಧೆ ಪ್ರೇಮಾ ಎಂಬವರು ನೊಂದ ಮಹಿಳೆಯಾಗಿದ್ದು, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಇವರು ಕಣ್ಣೀರು ಹಾಕುತ್ತಿದ್ದರು. ಇದನ್ನು ಗಮನಿಸಿದ ಇದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕುಣಿಗಲ್ ನ ಉಪನ್ಯಾಸಕಿ ಸೌಮ್ಯ ಅವರು, “ಯಾಕೆ ಅಳುತ್ತಿದ್ದೀರಿ?” ಎಂದು ವಿಚಾರಿಸಿದ್ದಾರೆ.
“ನಾನು ಡಯಾಲಿಸಿಸ್ ಗೆ ಒಳಪಡುತ್ತಿದ್ದು, ಆರ್ಥಿಕವಾಗಿ ಬಳಲುತ್ತಿದ್ದೇನೆ. ಪಿಂಚಣಿ ಮಾಡಿಸಿಕೊಳ್ಳಲು ತಾಲ್ಲೂಕು ಕಚೇರಿಗೆ, ನಾಡ ಕಚೇರಿಗೆ ಹಲವು ವರ್ಷಗಳಿಂದ ಅಲೆಯುತ್ತಿದ್ದು, ಇಲಾಖೆಯ ಸಿಬ್ಬಂದಿ ನನ್ನ ಬಳಿ 3 ಸಾವಿರ ಹಣ ಕೇಳಿದ್ದಾರೆ. ಅದರಲ್ಲಿ ಒಂದೂವರೆ ಸಾವಿರ ಈಗಾಗಲೇ ನನ್ನಿಂದ ಪಡೆದುಕೊಂಡಿದ್ದಾರೆ. ಆದರೆ ಇನ್ನೂ ಪಿಂಚಣಿ ಮಂಜೂರಾತಿ ಪತ್ರ ನೀಡಿಲ್ಲ” ಎಂದು ಅಳವತ್ತುಕೊಂಡಿದ್ದಾರೆ.
ವೃದ್ಧೆಯ ಕಥೆ ಕೇಳಿ ಮನಕರಗಿದ ಉಪನ್ಯಾಸಕಿ ಸೌಮ್ಯ ಅವರು, ವೃದ್ಧೆಯ ವಿಡಿಯೋ ಮಾಡಿ, ಭೂಮಿ ಮತ್ತು ವಸತಿ ಹೋರಾಟ ಸಮಿತಿ ಸದಸ್ಯರ ಗಮನಕ್ಕೆ ತಂದಿದ್ದಾರೆ. ಸಮಿತಿಯವರು ತಕ್ಷಣವೇ ತಹಶೀಲ್ದಾರ್ ರೇಣುಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ದೊರಕಿದ ಕೇವಲ ಮೂರು ಗಂಟೆಗಳ ಅವಧಿಯಲ್ಲಿ ವೃದ್ಧೆಗೆ ಪಿಂಚಣಿ ಆದೇಶ ಪತ್ರವನ್ನು ಅವರ ಮನೆಗೆ ತಲುಪಿಸಿದ ತಹಶೀಲ್ದಾರ್ ರೇಣು ಕುಮಾರ್ ಅವರು ಸೇವಾತತ್ಪರತೆ ಮೆರೆದಿದ್ದಾರೆ.
ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ ವೃದ್ಧೆ:
ವೃದ್ಧೆ ಪ್ರೇಮಾ ಅವರು ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಾರೆ. ವಯೋ ವೃದ್ಧೆಗೆ ಸರ್ಕಾರದಿಂದ ಸಿಗುವ ಅಲ್ಪ ಪ್ರಮಾಣದ ಹಣವನ್ನು ಪಡೆಯಲು ಕೂಡ ಲಂಚ ಕೊಡುವ ದುಸ್ಥಿತಿ ತಾಲೂಕಿನಲ್ಲಿ ಎದುರಾಗಿರುವುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತಕ್ಷಣವೇ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ತಾಲೂಕು ಆಡಳಿತ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ. ಜೊತೆಗೆ ತಹಶೀಲ್ದಾರ್ ರೇಣು ಕುಮಾರ್ ಅವರು ಶೀಘ್ರವೇ ವೃದ್ಧೆಯ ಸಮಸ್ಯೆಗೆ ಸ್ಪಂದಿಸಿರುವ ನಡೆಗೆ ಪ್ರಸಂಶೆ ವ್ಯಕ್ತವಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz