ತುಮಕೂರು: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳು ಮತ್ತು ಗ್ರಾಮೀಣ ಭಾಗದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ನವಂಬರ್ 27ರಿಂದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಹಾಗೂ ಅನೈರ್ಮಲ್ಯ ಶೌಚಾಲಯಗಳ ಸಮೀಕ್ಷೆಯನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ಮ್ಯಾನುಯಲ್ ಸ್ಕ್ಯಾವೆಂಜರ್ ಹಾಗೂ ಅನೈರ್ಮಲ್ಯ ಶೌಚಾಲಯಗಳ ಸಮೀಕ್ಷೆ ನಡೆಸುವ ಬಗ್ಗೆ ಅಕ್ಟೋಬರ್ 28 ರಿಂದ ನಗರ/ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳ ಸೂಚನಾ ಫಲಕಗಳಲ್ಲಿ ಸುತ್ತೋಲೆಯನ್ನು ಪ್ರಕಟಿಸಿ ಸಮೀಕ್ಷೆ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದಾರೆ.
ಸಮೀಕ್ಷೆಯಲ್ಲಿ ಕಂಡು ಬಂದ ಅನೈರ್ಮಲ್ಯ ಶೌಚಾಲಯಗಳ ನಿರ್ಮಾಣ ಮತ್ತು ನಿರ್ವಹಣೆ ಮಾಡುತ್ತಿರುವ ಮಾಲೀಕರಿಗೆ ಅನೈರ್ಮಲ್ಯ ಶೌಚಾಲಯಗಳನ್ನು ನಾಶಪಡಿಸಿ ನೈರ್ಮಲ್ಯ ಶೌಚಾಲಯಗಳನ್ನಾಗಿ ಮಾರ್ಪಡಿಸಲು ಡಿಸೆಂಬರ್ 5ರೊಳಗಾಗಿ ನೋಟೀಸ್ ನೀಡಬೇಕು.
ಅನೈರ್ಮಲ್ಯ ಶೌಚಾಲಯಗಳು ಕಂಡು ಬರದ ಪ್ರದೇಶಗಳನ್ನು ಅನೈರ್ಮಲ್ಯ ಶೌಚಾಲಯಗಳ ರಹಿತ ಪ್ರದೇಶವೆಂದು ಘೋಷಿಸಲಾಗುವುದು. ಅನೈರ್ಮಲ್ಯ ಶೌಚಾಲಯಗಳು ಕಂಡು ಬಂದ ಪ್ರದೇಶಗಳಲ್ಲಿ ಮಲ ಸ್ವಚ್ಛ ಮಾಡುವ ವೃತ್ತಿಯಲ್ಲಿರುವ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳನ್ನು ಸ್ವಯಂ ಘೋಷಣೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸುವ ಮಾಹಿತಿ ನೀಡಲು 2025ರ ಜನವರಿ 5ರೊಳಗೆ ಕ್ಯಾಂಪ್‌ಗಳನ್ನು ಆಯೋಜಿಸಬೇಕು.
ಅರ್ಜಿದಾರರು ಸಲ್ಲಿಸಿರುವ ಅರ್ಜಿಗಳನ್ನು ಸಮೀಕ್ಷಾ ಸಮಿತಿಯ ಅಧಿಕಾರಿಗಳು 2025ರ ಜನವರಿ 25ರೊಳಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಅರ್ಜಿಗಳ ಪರಿಶೀಲನೆ ನಂತರ ಸಂಬಂಧಪಟ್ಟ ಸ್ಥಳೀಯ ಸಂಸ್ಥೆ(ನಗರಸಭೆ/ಪುರಸಭೆ/ಪಟ್ಟಣ ಪಂಚಾಯತಿ, ಮಹಾನಗರ ಪಾಲಿಕೆ ಒಳಗೊಂಡAತೆ ತಾಲ್ಲೂಕು ಪಂಚಾಯತಿ/ಗ್ರಾಮ ಪಂಚಾಯತಿ)ಗಳ ಕಚೇರಿ ಸೂಚನಾ ಫಲಕದಲ್ಲಿ 2025ರ ಫೆಬ್ರವರಿ 10ರಂದು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಬೇಕು.
ಪಟ್ಟಿ ಪ್ರಕಟಿಸಿದ ನಂತರ ಯಾವುದೇ ಆಕ್ಷೇಪಣೆಗಳು ಬಾರದೆ ಇದ್ದಲ್ಲಿ 2025ರ ಫೆಬ್ರವರಿ 17ರೊಳಗಾಗಿ ಅಂತಿಮ ಆಯ್ಕೆ ಪಟ್ಟಿಯನ್ನು ಪಡೆದು ಜಿಲ್ಲಾ ಮಟ್ಟದ ಸಮೀಕ್ಷಾ ಸಮಿತಿಯ ಮೂಲಕ ದೃಢೀಕರಿಸಿ, ದೃಢೀಕೃತ ಪಟ್ಟಿಯನ್ನು ರಾಜ್ಯ ಮಟ್ಟದ ಸಮೀಕ್ಷಾ ಸಮಿತಿಗೆ ಅನುಮೋದನೆಗಾಗಿ ಸಲ್ಲಿಸಬೇಕು ಎಂದು ಅವರು ಸೂಚಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296