ತುರುವೇಕೆರೆ: ತುರುವೇಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಸಿ.ಎಸ್.ಪುರ ಹೋಬಳಿಯ ಡಿ ರಾಂಪುರದಲ್ಲಿ ನಡೆಸುತ್ತಿರುವ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ವಿರೋಧಿಸಿ, ಇದೇ ಮೇ 16 ರಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಈ ಹೋರಾಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ರೈತರು, ನಾಗರೀಕರು, ವಿಚಾರವಂತರು, ಚಿಂತಕರು, ಬುದ್ಧಿಜೀವಿಗಳು ಭಾಗವಹಿಸಬೇಕು ಎಂದು, ತುರುವೇಕೆರೆ ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪ ಮನವಿ ಮಾಡಿದರು.
ತಮ್ಮ ಗೃಹ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಎಂ.ಟಿ. ಕೃಷ್ಣಪ್ಪ, ಟಿ ಬಿ ಸಿ ನಾಲೆಯಿಂದ ಏಳರಿಂದ ಎಂಟು ಅಡಿ ಆಳದಲ್ಲಿ ಕೊಳವೆಗಳ ಮುಖಾಂತರ ರಾಮನಗರಕ್ಕೆ ನೀರನ್ನು ಕೊಂಡೊಯ್ಯುತ್ತಿದ್ದು, ಸಹಜವಾಗಿ ಎಲ್ಲಾ ನೀರು ಗ್ರಾವಿಟಿಯ ಮೂಲಕ ಹರಿದರೆ ಮುಖ್ಯವಾಗಿ ತುರುವೇಕೆರೆ ತಾಲೂಕಿನ ಕಸಬಾ, ದಂಡಿನ ಶಿವರ, ಸಂಪಿಗೆ, ಗುಬ್ಬಿ ತಾಲೂಕಿನ ಸಿಎಸ್ ಪುರ ಹೋಬಳಿಯ ಭಾಗದ ಜನರಿಗೆ ಒಂದು ಹನಿ ನೀರು ಕೂಡ ಸಿಗುವುದಿಲ್ಲ. ಇದರಿಂದ ತಾಲೂಕಿನ ಯಾವ ಕೆರೆ ಕಟ್ಟೆಗಳಾಗಲಿ ತುರುವೇಕೆರೆ ಪಟ್ಟಣದ ವಾಸಿಗಳಿಗೆ ಕುಡಿಯುವ ನೀರನ್ನು ಪೂರೈಸುವ ಮಲ್ಲಾಘಟ್ಟ ಕೆರೆಗೂ ಸಹ ಹೇಮಾವತಿಯಿಂದ ನೀರು ಹರಿಯುವುದಿಲ್ಲ ಎಂದರು.
ರಾಜ್ಯ ಸರ್ಕಾರ ಜಿಲ್ಲೆಯ ಜನರಿಗೆ ತೊಂದರೆಯನ್ನು ಕೊಡಲು ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಈ ಕಾಮಗಾರಿಗೆ ಯಾವುದೇ ಕಾರಣಕ್ಕೂ ನಾನು ಅವಕಾಶ ಕೊಡುವುದಿಲ್ಲ. 24.50 ಟಿಎಂಸಿ ನೀರಿನಲ್ಲಿ 19.40 ಕಳೆದರೆ ಉಳಿದಿರುವ 11.50 ಟಿಎಂಸಿ ನೀರು ರಾಮನಗರ ಕಡೆಗೆ ಹೋದರೆ ಬಾಕಿ 8.4 ಟಿಎಂಸಿ ನೀರು ಉಳಿಯುತ್ತದೆ. ಇದನ್ನು ಜಿಲ್ಲೆಯ ಇಡೀ ಎಲ್ಲಾ ತಾಲೂಕುಗಳಿಗೆ ಹಂಚಿಕೆ ಮಾಡಲು ಸಾಧ್ಯವಾಗುವುದಿಲ್ಲ. ಗುಬ್ಬಿ ತಾಲೂಕಿನ ಡಿ ರಾಂಪುರ 70ನೇ ಕಿಲೋಮೀಟರ್ ನಿಂದ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕೆರೆಗಳಿಗೆ 843.71 ಎಂ ಸಿ ಎಫ್ ಟಿ ನೀರು ಆದೇಶ ಹೊರಡಿಸಿ. ಅದನ್ನು 35.40 ಕಿಲೋಮೀಟರ್ ಉದ್ದದ 10 ಅಡಿ ವ್ಯಾಸದ ಪೈಪ್ ಅಳವಡಿಕೆ ಮಾಡಿಕೊಂಡು ತೆಗೆದುಕೊಂಡು ಹೋಗಲಿದ್ದಾರೆ. ಹಾಗೇನಾದರೂ ಆದರೆ ಅಭಾವ ಕೆಟ್ಟ ದಟ್ಟ ದರಿದ್ರ ರಾಜ್ಯ ಸರ್ಕಾರ ರೈತರ ಮೇಲೆ ದಬ್ಬಾಳಿಕೆಯನ್ನು ನಡೆಸಿ ಜಿಲ್ಲೆಯ ಜನರಿಗೆ ಅನ್ಯಾಯ ವ್ಯಸಗುತ್ತಿರುವುದನ್ನು ಖಂಡಿಸಿ, ದಿನಾಂಕ 16/05/ 2024 ರಂದು ಬೆಳಗ್ಗೆ 11 ಗಂಟೆಗೆ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ತಡೆಗೆ ಬೃಹತ್ ಹೋರಾಟವನ್ನು ಗುಬ್ಬಿ ತಾಲೂಕಿನ ಡಿ ರಾಂಪುರ ಬಳಿ ಮಾಡಲಾಗುತ್ತಿದ್ದು, ಈ ಬಗ್ಗೆ ಕ್ಷೇತ್ರದ ಜನತೆಗೆ ಈಗಾಗಲೇ ಕರಪತ್ರಗಳ ಚಳುವಳಿಯನ್ನು ಮಾಡಿದ್ದು, ಕಾಮಗಾರಿಗೆ ನಾವುಗಳು ವಿರೋಧ ಮಾಡುತ್ತಿದ್ದರು. ಸರ್ಕಾರವು ಜಿಲ್ಲೆಯ ನಾಯಕರುಗಳನ್ನಾಗಲಿ, ರೈತರನ್ನಾಗಲಿ ಸಭೆ ಕರೆಯುವಂತಹ ಸೌಜನ್ಯವಂತೂ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಸಮಸ್ತ ನಾಗರಿಕರು, ರೈತರು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು ವಿವಿಧ ಪಕ್ಷಗಳ ನಾಯಕರುಗಳು ಸ್ವಸಹಾಯ ಗುಂಪುಗಳು ಪಕ್ಷಾತೀತವಾಗಿ ನಮ್ಮ ನೀರು ನಮ್ಮ ಹಕ್ಕು ಎಂಬ ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ದೊಡ್ಡ ಗೌಡ, ಜೆಡಿಎಸ್ ತಾಲೂಕು ವಕ್ತಾರ ವೆಂಕಟಾಪುರ ಯೋಗೀಶ್, ಮುಖಂಡರುಗಳಾದ ಬಿಎಸ್ ದೇವರಾಜು, ಸೊಪ್ಪನಹಳ್ಳಿ ರಂಗನಾಥ್, ಮುಂಗಿ ಕುಪ್ಪೆ ಬಸವರಾಜು, ಹರಿಕಾರನಹಳ್ಳಿ ಮಂಜಪ್ಪ, ಹೊನ್ನೇನಳ್ಳಿ ಕೃಷ್ಣಪ್ಪ ಸೇರಿದಂತೆ ಇತರರು ಇದ್ದರು.
ವರದಿ: ಸುರೇಶ ಬಾಬು ಎಂ. ತುರುವೇಕೆರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA