ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ಕೊರಟಗೆರೆ: ಸರ್ಕಾರ 1960ರ ಇಸವಿಯಲ್ಲಿ ಶ್ರೀ ಚೆಲುವ ಚೆನ್ನಿಗರಾಯ ದೇವಾಲಯಕ್ಕೆ ಸರ್ವೇ ನಂ. 130ರಲ್ಲಿ 4 ಎಕೆರೆ 6 ಗುಂಟೆ ಜಮೀನು ಮಂಜೂರು ಮಾಡಿದೆ. ಈ ದೇವಾಲಯ ಮುಜರಾಯಿ ಇಲಾಖೆ ಒಳಪಡಲಿದ್ದು. ಇಲಾಖೆಗೆ ಗೊತ್ತಿಲ್ಲದೆ ಅರ್ಚಕರ ಕುಟುಂಬ ನೆಲಮಂಗಲದ ಮಹಿಳೆಗೆ ಕ್ರಯ ಮಾಡಿದ್ದಾರೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿದೆ.
ಕೊರಟಗೆರೆ ತಾಲ್ಲೂಕಿನ ಹೊಳವಹಳ್ಳಿ ಹೋಬಳಿ ತೊಗರಿಘಟ್ಟ ಗ್ರಾಮದ ಶ್ರೀ ಚೆನ್ನಿಗರಾಯ ಸ್ವಾಮಿ ದೇವಾಲಯ ಮುಜರಾಯಿ ಇಲಾಖೆ ಸೇರಿದೆ. ಸರ್ಕಾರದ ಜಮೀನನ್ನು ಕ್ರಯ ಮಾಡುವ ಮುನ್ನ ಇಲಾಖೆ ಗಮನಕ್ಕೆ ತರದೇ ನೆಲಮಂಗಲ ಭಾಗ್ಯಮ್ಮ ಮತ್ತು ದೀಪ.ಜೆ ಎಂಬುವವರಿಗೆ ಮಾರಾಟ ಮಾಡಿದ್ದು, ಒತ್ತಡಕ್ಕೆ ಮಣಿದ ಕುಣಿಗಲ್ ಉಪ ನೋಂದಾಣಾಧಿಕಾರಿಗಳು ಜಮೀನಿನ ದಾಖಲೆಗಳನ್ನು ಪರಿಶೀಲಿಸದೆ ಕ್ರಯ ಮಾಡಿದ್ದರೆಂದು ತಾಲ್ಲೂಕು ಕಚೇರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟನೆಯಲ್ಲಿ ಆಕ್ರೋಶ ಹೊರ ಹಾಕಿದರು.
ಸರ್ಕಾರದಿಂದ ದೇವಾಲಯಕ್ಕೆ ಜಮೀನು ಮಂಜುರಾದ ವೇಳೆ ಲ್ಯಾಂಡ್ ಟ್ಯೂಬುನಲ್ ಅಡಿಯಲ್ಲಿ ಸದರಿ ದೇವಾಲಯದ ಅರ್ಚಕ ಚೆನ್ನಕೇಶವಚಾರ್ ಮತ್ತು ಪತ್ನಿ ಪುಟ್ಟಲಕ್ಷಮ್ಮನವರು ಖಾತೆ,ಪಹಣಿ ಮಾಡಿಸಿಕೊಂಡಿದ್ದರು, ಇವರ ಮರಣದ ನಂತರ ಸೊಸೆ ಸುಶೀಲಮ್ಮ ಕೋಂ ಲೇಟ್ ಶ್ರೀರಂಗಮೂರ್ತಿ ರವರ ಹೆಸರಿಗೆ ಎಂ ಆರ್ ಎಚ್ 54/2019 — 20 ರಲ್ಲಿ ಖಾತೆ ಮತ್ತು ಪಹಣಿಯಾಗಿದ್ದು, ಗ್ರಾಮಸ್ಥರು ಇದನ್ನು ವಿರೋಧಿಸಿ ಜಮೀನಿನ ಮೇಲೆ ಭೂ–ನ್ಯಾಯಮಂಡಳಿಯಲ್ಲಿ ಕೇಸು ದಾಖಲಿಸಿದ್ದು, ಜಮೀನು ವಿಚಾರಣೆಯ ಸಂಭಂದ ಪಟ್ಟಂತೆ ಪಹಣಿಯಲ್ಲಿ ಉಲ್ಲೇಖವಾಗಿದೆ.
ಕೊರಟಗೆರೆ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಮತ್ತು ಉಚ್ಚ ನ್ಯಾಯಾಲಯ ದೇವಾಲಯದ ಹೆಸರಿಗೆ ಖಾತೆ ಬದಲಾವಣೆ ಮಾಡುವಂತೆ ಆದೇಶ ಮಾಡಿದೆ. ನ್ಯಾಯಾಲಯ ಆದೇಶವನ್ನೇ ಉಲ್ಲಂಘಿಸಿ ಸುಶೀಲಮ್ಮ ರವರ ಮಗ ನರಸಿಂಹಮೂರ್ತಿ ಮತ್ತು ಸೊಸೆ ಅಶ್ವಿನಿ ಬಿ.ಎ ಕುಣಿಗಲ್ ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ 12 ಮೇ 2025 ರಂದು ನೆಲಮಂಗಲದ ಭಾಗ್ಯಮ್ಮ ಮತ್ತು ದೀಪ ಜೆ ಎಂಬುವವರಿಗೆ ಕ್ರಯ ಮಾಡಿರುವುದು ಕಂಡು ಬಂದಿದೆ.
ಕೂಡಲೇ ಎಂ.ಆರ್ ವಜಾಗೊಳಿಸುವಂತೆ ಕೋರಿ ತಹಶೀಲ್ದಾರ್ ಕೆ.ಮಂಜುನಾಥ್ ಗೆ ಊರಿನ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಗ್ರಾಮಸ್ಥರಾದ ಎಚ್.ನಾರಾಯಣಪ್ಪ, ಟಿ.ಎಚ್ ಕೃಷ್ಣಮೂರ್ತಿ, ಸಂಜೀವರೆಡ್ಡಿ, ಗ್ರಾ.ಪಂ ಸದಸ್ಯ ಸಿದ್ದಲಿಂಗಪ್ಪ, ನರಸಿಂಹಮೂರ್ತಿ, ಲಕ್ಷ್ಮಿಕಾಂತ್, ಅರ್ಚಕ ನಟರಾಜ್ ಆರಾಧ್ಯ, ಗೋವಿಂದಪ್ಪ, ಮರೀಸ್ವಾಮಿ, ನರೇಂದ್ರಬಾಬು, ಲಿಂಗರಾಜು, ನಾರಾಯಣ ಸ್ವಾಮಿ, ಅನಂತರಾಮು, ಪಾಪೇಗೌಡ ಸೇರಿದಂತೆ ಇತರರು ಇದ್ದರು.
ಅಗತ್ಯ ಕ್ರಮಕ್ಕೆ ತಹಶೀಲ್ದಾರ್ ಭರವಸೆ :
ತಾಲ್ಲೂಕಿನ ತೊಗರಿಗಟ್ಟ ಗ್ರಾಮದ ಸ.ನಂ 130 ರ ಶ್ರೀ ಚೆಲುವ ಚೆನ್ನಿಗರಾಯ ಸ್ವಾಮಿ ದೇವಾಲಯ ಜಮೀನು ಗ್ರಾಮಸ್ಥರ ಗಮನಕ್ಕೆ ಬಾರದೇ ನೆಲಮಂಗಲದ ಮಹಿಳೆ ಹಾಗೂ ಇತರೆ ವ್ಯಕ್ತಿ ಹೆಸರಿಗೆ ಕ್ರಯವಾಗಿದೆ ಎಂದು ಗ್ರಾಮಸ್ಥರು ಆರೋಪ ಮಾಡಿ ಮನವಿ ಮಾಡಿದ್ದಾರೆ, ಪರಿಶೀಲನೆ ನಡೆಸಿ ಶೀಘ್ರದಲ್ಲಿ ಅಗತ್ಯಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಮಂಜುನಾಥ್ ಮನವಿ ಸ್ವೀಕರಿಸಿ ಭರವಸೆ ನೀಡಿದರು.
ಸರ್ಕಾರ ನೂರಾರು ವರ್ಷಗಳ ಹಿಂದೆ ಚೆಲುವ ಚೆನ್ನಿಗರಾಯ ದೇವಾಲಯಕ್ಕೆಂದು ತೊಗರಿಘಟ್ಟ ಗ್ರಾಮದಲ್ಲಿ ಜಮೀನು ಮಂಜೂರು ಮಾಡಿತ್ತು. ಉಚ್ಚ ನ್ಯಾಯಾಲಯದಲ್ಲಿ ಮತ್ತು ಕೊರಟಗೆರೆ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅರ್ಚಕರ ಹೆಸರಿನಲ್ಲಿದ್ದ ಖಾತೆ ಮತ್ತು ಪಹಣಿ ವಜಾಗೊಳಿಸಿ ದೇವಾಲಯದ ಹೆಸರಿಗೆ ವರ್ಗಾವಣೆ ಮಾಡಲಾಗಿತ್ತು. 2024 ರವೆರೆಗೂ ಕಲಂ 11ರಲ್ಲಿ ಕೇಸ್ ನಂಬರ್ ನೋಂದಣಿಯಾಗಿತ್ತು. 2025ರ ನಂತರ ಕುಣಿಗಲ್ ಉಪ ನೋಂದಾಣಾಧಿಕಾರಿಗಳ ಪರಿಶೀಲಿಸಿದೆ ನೆಲಮಂಗಲದ ಭಾಗ್ಯಮ್ಮ ಎಂಬುವವರಿಗೆ ಕ್ರಯ ಮಾಡಿದ್ದಾರೆ. ಎಂ.ಆರ್ ವಜಾಗೊಳಿಸುವಂತೆ ತಹಶೀಲ್ದಾರ್‌ಗೆ ಮನವಿ ಮಾಡಲಾಗಿದೆ.
— ಕೋದಂಡರಾಮಯ್ಯ, ತೊಗರಿಗಟ್ಟ ಗ್ರಾಮಸ್ಥರು.
ಶ್ರೀ ಚೆಲುವ ಚೆನ್ನಿಗರಾಯ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಅರ್ಚಕರು ತಮ್ಮ ಪೂಜೆಯ ಜೊತೆಗೆ ಜಮೀನಿನಲ್ಲಿ ಉಳುಮೆ ಮಾಡಲು ಗ್ರಾಮಸ್ಥರು ಅವಕಾಶ ಕಲ್ಪಿಸಿದ್ದರು. ಈ ಅವಕಾಶದಿಂದ ಜಮೀನನ್ನು ತಮ್ಮಂತೆ ಮಾಡಿಕೊಳ್ಳಲು ಅರ್ಚಕರ ಕುಟುಂಬ ಮುಂದಾದ ವೇಳೆ ಗ್ರಾಮಸ್ಥರು ನ್ಯಾಯಾಲಯ ಮೊರೆ ಹೋಗಿದ್ದು, ನ್ಯಾಯಾಲಯ ದೇವಾಲಯಕ್ಕೆ ಸೀಮಿತ ಜಮೀನೆಂದು ಆದೇಶ ಮಾಡಿದೆ. ಆದರೆ ಅರ್ಚಕರ ಮರಣದ ನಂತರ ಕುಟುಂಬದ ಮಕ್ಕಳು ನೆಲಮಂಗಲದ ಭಾಗ್ಯಮ್ಮ ಎಂಬುವವರಿಗೆ ಕ್ರಯ ಮಾಡಿರುವುದು ಕಂಡು ಬಂದಿದೆ.
— ನಾರಾಯಣಪ್ಪ. ಗ್ರಾಮದ ಮುಖಂಡರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW