ಬೆಂಗಳೂರು/ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಬೈಲಾವನ್ನು ರದ್ದುಪಡಿಸಿ ಅಧ್ಯಕ್ಷರು ಮತ್ತಿತರ ಸದಸ್ಯರನ್ನು ನೇಮಿಸಲು ಶೋಧನಾ ಸಮಿತಿಯನ್ನು ರಚಿಸಿ ಹೊಸದಾಗಿ ಪ್ರತಿಷ್ಠಾನವನ್ನು ಪುನರ್ ಸ್ಥಾಪಿಸಲು ನೈಜ್ಯ ಹೋರಾಟಗಾರರ ವೇದಿಕೆ ಬೆಂಗಳೂರು ಒತ್ತಾಯಿಸಿದ್ದು, ಈ ಸಂಬಂಧ ಸಿಎಂ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಕರ್ನಾಟಕ ಸರ್ಕಾರ ಮುಖ್ಯ ಕಾರ್ಯದರ್ಶಿ ಗಳು, ಕಾರ್ಯದರ್ಶಿ ಕುವೆಂಪು ಪ್ರತಿಷ್ಠಾನ ಮತ್ತು ಜಿಲ್ಲಾಧಿಕಾರಿ ಶಿವಮೊಗ್ಗ, ಪ್ರಧಾನ ಕಾರ್ಯದರ್ಶಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರಿಗೆ ಇ—ಮೇಲ್ ಮೂಲಕ ಮನವಿ ಸಲ್ಲಿಸಿದೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಕುಪ್ಪಳಿ ರಾಷ್ಟ್ರಕವಿ ಕುವೆಂಪು ಹೆಸರು ಹೇಳಿದ ತಕ್ಷಣ ಸಾಹಿತ್ಯ ಕ್ಷೇತ್ರ ಮಾತ್ರವಲ್ಲ ಕನ್ನಡಿಗರ ಮೈ ನವಿರೇಳಿಸುವ ಮತ್ತು ಕನ್ನಡ ಅಭಿಮಾನಿಗಳ ದೇಹದಲ್ಲಿ ವಿದ್ಯುತ್ ಸಂಚಾರವನ್ನುಂಟು ಮಾಡುವ ಅದ್ಭುತ ಶಕ್ತಿಯನ್ನು ಹೊಂದಿರುವ ನೆಚ್ಚಿನ ಕುವೆಂಪುರವರ ಹೆಸರಿನಲ್ಲಿ ಸ್ಥಾಪನೆಗೊಂಡ ಕುವೆಂಪು ಪ್ರತಿಷ್ಠಾನವು ಸಾಕಷ್ಟು ಒಳ್ಳೆಯ ಕೆಲಸಗಳನ್ನು ನಿರ್ವಹಿಸುತ್ತಿರುವುದು ಶ್ಲಾಘನೀಯ.
ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರತಿಷ್ಠಾನವು ಸರ್ವ ಜನಾಂಗ ಪ್ರತಿನಿಧಿಸುವ ಪ್ರತಿಷ್ಠಾನವಾಗದೆ ಒಂದು ಜಾತಿಗೆ ಹಾಗೂ ಕೆಲವೇ ಕೆಲವು ಕುಟುಂಬಗಳಿಗೆ ಸೀಮಿತವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಮುಖ್ಯವಾಗಿ ರಾಷ್ಟ್ರಕವಿ ಕುವೆಂಪುರವರ ಸಮಕಾಲಿನ ಚಿಂತನೆಗಳು, ವೈಚಾರಿಕತೆ, ಜಾತಿ ತಾರತಮ್ಯ, ಜಾತಿ ಶೋಷಣೆ, ಮನುಜ ಮತ ಜೊತೆಗೆ ಸರಳ ವಿವಾಹಕ್ಕೆ ಹೆಚ್ಚು ಒತ್ತುಕೊಟ್ಟು ಮಂತ್ರ ಮಾಂಗಲ್ಯ ವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದರು. ಇಂತಹ ಮಹಾನ್ ಕವಿಯ ಆಶಯಗಳಿಗೆ ಧಕ್ಕೆ ಉಂಟು ಮಾಡುತ್ತಿರುವ ಪ್ರತಿಷ್ಠಾನದ ಆಡಳಿತ ಚುಕ್ಕಾಣಿ ಹಿಡಿದಿರುವ ಕುವೆಂಪು ಪ್ರತಿಷ್ಠಾನ ಇತ್ತೀಚಿಗೆ ರೆಸಾರ್ಟ್ ಮಾದರಿಯಲ್ಲಿ ಮಂತ್ರ ಮಾಂಗಲ್ಯಮಾಡಿ ಕುವೆಂಪು ಆಶಯಗಳಿಗೆ ಕೊಳ್ಳಿಯನ್ನು ಇಟ್ಟಿದ್ದಾರೆ. ಈ ಹಿಂದೆ ಕುವೆಂಪುರವರು ತಮ್ಮ ಆಶಯದಂತೆ ಸರಳ ವಿವಾಹ ಮಂತ್ರ ಮಾಂಗಲ್ಯದಲ್ಲಿ ಐವತ್ತಕ್ಕೂ ಹೆಚ್ಚು ಜನರು ಭಾಗವಹಿಸಬಾರದು ಎಂದು ಹೇಳಿದ್ದರು.ಆದರೆ ಪರಿಸ್ಥಿತಿಗೆ ಅನುಗುಣವಾಗಿ ಮಾರ್ಪಾಡು ಮಾಡಿ 100-150 ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿ ಮಂತ್ರ ಮಾಂಗಲ್ಯ ವಿವಾಹ ನೆರವೇರಿಸಬೇಕಾಗಿತ್ತು. ಆದರೆ ಈ ಹಿಂದೆ ಶಾಸಕರ ಪುತ್ರನ ಮಂತ್ರ ಮಾಂಗಲ್ಯ ವಿವಾಹದಲ್ಲಿ 1500 ಜನಕ್ಕೂ ಹೆಚ್ಚು ಆಹ್ವಾನಿತರಾಗಿದ್ದು ಒಂದು ರೀತಿಯಲ್ಲಿ ಕುಪ್ಪಳ್ಳಿಯ ಕವಿ ಮನೆಯು ಮದುವೆ ಛತ್ರದಂತೆ ಭಾಸವಾಗುತ್ತಿತ್ತು. ನಂತರದ ದಿನಗಳಲ್ಲಿ ಇದು ಮುಂದುವರೆದುಕೊಂಡು ಹೋಗುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಜೊತೆಗೆ ಕವಿ ಮನೆಯನ್ನು ರಾಜಕೀಯ ಪಕ್ಷದ ಸಹ ಸಂಘಟನೆಗಳ ಕಾರ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುತ್ತಿರುವ ಬಗ್ಗೆಯೂ ಆರೋಪವಿದೆ.
ಪ್ರತಿಷ್ಠಾನದ ಕೆಲಸದಸ್ಯರು (ಸರ್ಕಾರ, ಮತ್ತು ಸರ್ಕಾರಿ ಸೌಮ್ಯದ ನೇಮಿಸುವ ಸದಸ್ಯರನ್ನು ಹೊರತುಪಡಿಸಿ) ತಮ್ಮ ಸ್ವಂತ ಕೃಷಿ ಜಮೀನಿನ ಜೊತೆ ಅರಣ್ಯ ಒತ್ತುವರಿಯನ್ನು ಮಾಡಿಕೊಂಡಿರುವ ಆರೋಪಗಳು ಕೇಳಿ ಬರುತ್ತಿವೆ. ಹಾಗೂ ಕೆಲ ಸದಸ್ಯರ ವಿರುದ್ಧ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪವಿದೆ. ಮತ್ತು ಕೆಲವು ಸದಸ್ಯರು ಕುಪ್ಪಳ್ಳಿಯ ಸುತ್ತಮುತ್ತ ರೆಸಾರ್ಟ್ , ಹೋಂ ಸ್ಟೇ ಗಳನ್ನು ಮಾಡಿಕೊಂಡು ಕುಪ್ಪಳ್ಳಿಗೆ ಬರುವ ಕುವೆಂಪು ಅಭಿಮಾನಿಗಳಿಗೆ ಉಳಿದುಕೊಳ್ಳಲು ಈ ಪ್ರತಿಷ್ಠಾನವನ್ನು ವ್ಯಾಪಾರಿಕರಣ ಗೊಳಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರ ಬಾಯಿಗೆ ಆಹಾರವಾಗಿದೆ.
ಆದುದರಿಂದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಬೈಲಾವನ್ನು ಸಂಪೂರ್ಣವಾಗಿ ರದ್ದುಪಡಿಸಿ ಕುವೆಂಪು ಆಶಯಕ್ಕೆ ತಕ್ಕಂತೆ ಹೊಸ ನಿಯಮಾವಳಿಗಳನ್ನು ರೂಪಿಸುವ ಅಗತ್ಯವಿದೆ. ಪ್ರತಿಷ್ಠಾನಕ್ಕೆ ಟ್ರಸ್ಟಿಗಳನ್ನು ನೇಮಿಸುವ ವಿಚಾರದಲ್ಲಿ ಶೋಧನಾ ಸಮಿತಿಯನ್ನು ರಚಿಸಿ ಅರ್ಹರನ್ನು ಸದಸ್ಯರನ್ನಾಗಿ ನೇಮಿಸುವ ಗುರುತರ ಜವಾಬ್ದಾರಿಯನ್ನು ಈಗ ಸರ್ಕಾರ ವಹಿಸಿಕೊಳ್ಳಬೇಕಾಗಿದೆ. ಹಾಗೂ ಪ್ರತಿಷ್ಠಾನದಲ್ಲಿ ಕುವೆಂಪು ರವರ ರಕ್ತ ಸಂಬಂಧಿಗಳಲ್ಲಿ ಅರ್ಹ ವ್ಯಕ್ತಿಯೊಬ್ಬರನ್ನು ಸದಸ್ಯರನ್ನಾಗಿ ಆಯ್ಕೆ ಮಾಡುವುದು ಕಡ್ಡಾಯ ಮಾಡಬೇಕಾಗಿದೆ.
ಕೆಲವೇ ಕೆಲವು ಸದಸ್ಯರು ಕುವೆಂಪು ಪ್ರತಿಷ್ಠಾನದಲ್ಲಿ 15 20 ವರ್ಷಗಳಿಂದ ತಳವೂರಿ ಇತರ ಅರ್ಹರು ಪ್ರತಿಷ್ಠಾನದ ಒಳಗೆ ಬಾರದಂತೆ ಮನಸೋ ಇಚ್ಛೆ ಆಡಳಿತ ನಡೆಸುತ್ತಿದ್ದು ಇದರಿಂದ ಮುಂದಿನ ದಿನಮಾನಗಳಲ್ಲಿ ರಾಷ್ಟ್ರಕವಿ ಕುವೆಂಪುರವರ ಹೆಸರು ನಶಿಸಿ ಹೋಗುವ ಸಂಭವವಿದೆ.
ಆದುದರಿಂದ ಕುವೆಂಪು ಪ್ರತಿಷ್ಠಾನವನ್ನು ಪುನರ್ ಸ್ಥಾಪಿಸಿ, ಬೈಲಾ ಗಳನ್ನು ತಿದ್ದುಪಡಿ ಮಾಡಿ ರಾಷ್ಟ್ರಕವಿ ಕುವೆಂಪು ಅವರ ದೊಡ್ಡ ಅಭಿಮಾನಿ ವಲಯದಿಂದ ಹೊಸ ಮುಖಗಳನ್ನು ಪರಿಚಯಿಸಲು ಟ್ರಸ್ಟಿಗಳ ಆಯ್ಕೆಯಲ್ಲಿ ಸರ್ಕಾರವು ವಿಶ್ವವಿದ್ಯಾನಿಲಯಗಳ ಕುಲಪತಿ ಆಯ್ಕೆ ಪ್ರಕ್ರಿಯೆಯಲ್ಲಿ ಶೋಧನ ಸಮಿತಿಯನ್ನು ರಚಿಸಿದಂತೆ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಸದಸ್ಯರುಗಳ ಆಯ್ಕೆಯಲ್ಲಿ ಕೂಡ ಶೋಧನಾ ಸಮಿತಿಯನ್ನು ರಚಿಸಿ ಅಧ್ಯಕ್ಷರು ಸದಸ್ಯರುಗಳಿಗೆ ಒಂದು ಕಾಲಮಿತಿಯಲ್ಲಿ ಕಾರ್ಯನಿರ್ವಹಿಸುವಂತೆ ಪ್ರತಿಷ್ಠಾನವನ್ನು ಪುನರ್ ಸ್ಥಾಪಿಸಬೇಕಾಗಿದೆ.
ಗೌರವಾನ್ವಿತ ಮುಖ್ಯಮಂತ್ರಿಗಳಾದ ತಾವು ಕುವೆಂಪು ಪ್ರತಿಷ್ಠಾನ ಉಳಿಸಿ ರಾಷ್ಟ್ರಮಟ್ಟ ದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲೂ ಕೂಡ ಕುವೆಂಪು ಅವರ ಹೆಸರು ಅಜರಾಮರವಾಗಿ ಉಳಿಯುವಂತೆ ಕುವೆಂಪು ಪ್ರತಿಷ್ಠಾನಕ್ಕೆ ನವ ಚೈತನ್ಯವನ್ನು ತರುವ ಗುರುತರ ಜವಾಬ್ದಾರಿಯನ್ನು ವಹಿಸಬೇಕೆಂದು ನೈಜ್ಯ ಹೋರಾಟಗಾರರ ವೇದಿಕೆಯು ತಮ್ಮೆಲ್ಲರಲ್ಲಿ ಸವಿನಯ ಪೂರ್ವಕವಾಗಿ ಪ್ರಾರ್ಥಿಸುತ್ತಿದೆ ಎಂದು ನೈಜ್ಯ ಹೋರಾಟಗಾರರ ವೇದಿಕೆಯ ಹಿರಿಯ ಸಾಮಾಜಿಕ ಹೋರಾಟಗಾರರಾದ ಹೆಚ್.ಎಂ.ವೆಂಕಟೇಶ್ ಹಾಗೂ ಕೃಷಿಕರು ಮತ್ತು ಸಾಮಾಜಿಕ ಹೋರಾಟಗಾರರಾದ ಕೆ.ಜೆ.ಸುಭೋದ್ ಕುಪ್ಪಳಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4