ತುಮಕೂರು: ಜಮೀನುಗಳ ಖಾತೆ ಮತ್ತು ಪಹಣಿಗಳನ್ನು ತಂದೆಯ ಹೆಸರಿನಿಂದ ಮಗನ ಹೆಸರಿಗೆ ವರ್ಗಾವಣೆ ಮಾಡಿಕೊಡಲು 10 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದ ಸಿ.ಎಸ್.ಪುರ ಹೋಬಳಿ ರಾಜಸ್ವ ನಿರೀಕ್ಷಕ ಕೆ.ನರಸಿಂಹಮೂರ್ತಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕು, ಸಿ. ಎಸ್.ಪುರ ಹೋಬಳಿ, ಉಂಗ್ರ ಮಜರೆ, ಗದ್ದೆಹಳ್ಳಿ ನಾಗರಾಜು ಅವರ ತಂದೆ ಚಿಕ್ಕಯಲ್ಲಯ್ಯ ಅವರ ಹೆಸರಿನಲ್ಲಿದ್ದ ಉಂಗ್ರ ಗ್ರಾಮದ ಸರ್ವೆ ನಂಬರ್:201/1 ಮತ್ತು ಹುಲ್ಲೇಕೆರೆ ಗ್ರಾಮದ ಸರ್ವೆ ನಂಬರ್:32ರ ಜಮೀನುಗಳನ್ನು ಅವರ ಮಗನಾದ ನಾಗರಾಜು ಅವರಿಗೆ ಗುಬ್ಬಿ ತಾಲೂಕು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹಕ್ಕು ಖುಲಾಸೆ ಪತ್ರ ಮುಖೇನ ನೋಂದಣಿ ಮಾಡಿಕೊಡಲಾಗಿದೆ.
ಸದರಿ ಜಮೀನುಗಳ ಖಾತೆ ಮತ್ತು ಪಹಣಿಗಳನ್ನು ತಂದೆಯ ಹೆಸರಿನಿಂದ ಮಗನಾದ ದೂರುದಾರ ನಾಗರಾಜು ಹೆಸರಿಗೆ ವರ್ಗಾವಣೆ ಮಾಡಿಕೊಡಲು ಸಿ.ಎಸ್. ಪುರ ಹೋಬಳಿ ರಾಜಸ ನಿರೀಕ್ಷಕರಾದ ಕೆ.ನರಸಿಂಹಮೂರ್ತಿ ಹಣದ ಬೇಡಿಕೆ ಇಟ್ಟಿದ್ದು, 10 ಸಾವಿರ ರೂ. ಲಂಚ ಸ್ವೀಕರಿಸುವ ಮೂಲಕ ಆರೋಪಿ ಕೆ.ನರಸಿಂಹಮೂರ್ತಿ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಆರೋಪಿ ಕೆ. ನರಸಿಂಹಮೂರ್ತಿ ಈ ಹಿಂದೆ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ರಾಜಸ್ವ ನಿರೀಕ್ಷಕನಾಗಿ ಕರ್ತವ್ಯ ನಿರ್ವಹಿಸುವಾಗ ತುಮಕೂರು ನಗರದ ವಾರ್ಡ್ ನಂಬರ್ 10ರಲ್ಲಿನ ನಿವೇಶನವನ್ನು ಫಯಾಜ್ ಅವರ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡಲು 15 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟು, ಜು.7, 2023ರಂದು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.
ಕಾರ್ಯಾಚರಣೆಯಲ್ಲಿ ತುಮಕೂರು ಲೋಕಾಯುಕ್ತ ಕಚೇರಿಯ ಪೊಲೀಸ್ ಅಧೀಕ್ಷಕ ವಲಿಬಾಷಾ, ಪೊಲೀಸ್ ಉಪಾಧೀಕ್ಷಕ ಬಿ. ಉಮಾಶಂಕರ್, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಸುರೇಶ್ ಕೆ., ಬಿ. ಮೊಹಮ್ಮದ್ ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296