ಹುಳಿಯಾರು : ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೆರೆಯಲಾಗಿರುವ ರಾಗಿ ಖರೀದಿ ಕೇಂದ್ರದಲ್ಲಿ ಪ್ರತಿ ಚೀಲಕ್ಕೂ ಸರ್ಕಾರ ನಿಗದಿಪಡಿಸಿದ ತೂಕದಷ್ಟು ಮಾತ್ರವೇ ರಾಗಿ ತೂಕ ಮಾಡಬೇಕೆಂದು ಹಾಗೂ ಖರೀದಿ ಕೇಂದ್ರಗಳಲ್ಲಿ ಯಾವುದೇ ಅಕ್ರಮಗಳಿಗೂ ಅವಕಾಶ ಕೊಡದಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ಜರುಗಿತು.
ಹುಳಿಯಾರು ರಾಗಿಖರೀದಿ ಕೇಂದ್ರಕ್ಕೆ ಆಗಮಿಸಿದ ಸುಮಾರು 25ಕ್ಕೂ ಹೆಚ್ಚಿನ ರೈತ ಸಂಘದ ಪದಾಧಿಕಾರಿಗಳು ಖರೀದಿ ಕೇಂದ್ರದಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಧ್ವನಿ ಎತ್ತಿದರು.
ರಾಜ್ಯ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರ ತೆಗೆದು ರಾಗಿ ಖರೀದಿಸುತ್ತಿರುವುದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಿಂದ ಖರೀದಿಸಲು ಮುಂದಾಗುತ್ತಿರುವುದು ಸರಿಯಷ್ಟೇ. ಪ್ರತಿ ಗೋಣಿಚೀಲದಲ್ಲಿ 50 ಕೆ.ಜಿ. ರಾಗಿ ಹಾಗೂ ಚೀಲದ ತೂಕ 650 ಗ್ರಾಂ ಸೇರಿ ಅಷ್ಟು ರಾಗಿಯನ್ನು ಮಾತ್ರವೇ ಹೆಚ್ಚುವರಿ ಪಡೆಯಲು ಪ್ರಕಟಣೆಯಲ್ಲಿ ತಿಳಿಸಿದ್ದರೂ ಸಹ ಇಲ್ಲಿನ ಸಿಬ್ಬಂದಿ 52 ಕೆ.ಜಿ. ರಾಗಿ ತರಬೇಕು ಎಂದು ರೈತರಿಗೆ ತಾಕೀತು ಮಾಡುತ್ತಿದ್ದು ಹೆಚ್ಚುವರಿಯಾಗಿ ವಸೂಲಿ ಮಾಡಲು ಹೊರಟಿರುವ ಸಿಬ್ಬಂದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ಅಲ್ಲದೆ ಚೀಲವೊಂದಕ್ಕೆ ಹಮಾಲಿ ಖರ್ಚು ಎಂದು ಮೂವತ್ತರಿಂದ ನಲವತ್ತು ರೂಪಾಯಿ ಪಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಇದನ್ನು ರೈತರಿಂದ ಪಡೆಯಬಾರದು. ಖರೀದಿ ಕೇಂದ್ರದಲ್ಲಿ ಹಮಾಲಿಗಳನ್ನು ನೇಮಿಸಿಕೊಳ್ಳುವುದು ಆಹಾರ ಮತ್ತು ನಾಗರಿಕ ಸರಬರಾಜು ನಿಗಮವಾಗಿದ್ದು ಇದಕ್ಕೆ ರೈತರಿಂದ ಹಣ ವಸೂಲಿ ಮಾಡುವುದು ಏಕೆಂದು ತಿಳಿಯುತ್ತಿಲ್ಲ ಎಂದರು. ರೈತರು ಹಮಾಲಿ ಖರ್ಚು ಎಂದು ಒಂದು ರೂಪಾಯಿ ಕೂಡ ಕೊಡಬಾರದು ಎಂದರು.
ರಾಗಿಚೀಲವನ್ನು ಎತ್ತಿ ಇಳಿಸಲು ಕಬ್ಬಿಣದ ಹುಕ್ ಬಳಸುತ್ತಿದ್ದು ಇದರಿಂದ ಚೀಲ ತೂತಾಗಿ ರಾಗಿ ಸುರಿಯಲು ಅವಕಾಶವಾಗುತ್ತದೆ. ಒಂದು ಚೀಲ ಎತ್ತಿ ಇಳಿಸಿ ತೂಕ ಮಾಡುವಷ್ಟರಲ್ಲಿ ಸುಮಾರು ರಾಗಿ ವ್ಯರ್ಥವಾಗಿ ಚೆಲ್ಲುತ್ತಿದ್ದು ಚೀಲ ಎತ್ತಲು ಹುಕ್ ಬಳಸಬಾರದು ಎಂದರು.
ರಾಗಿ ಹಾಕಲು ಬಂದ ರೈತರಿಗೆ ಸೂಕ್ತ ನೀರು-ನೆರಳಿನ ವ್ಯವಸ್ಥೆ ಮಾಡಬೇಕಿದ್ದರೂ ಸಹ ಹುಳಿಯಾರು ಎಪಿಎಂಸಿಯವರು ಇದಕ್ಕೂ ನಮಗೂ ಸಂಬಂಧವಿಲ್ಲ, ಖರೀದಿ ಕೇಂದ್ರಕ್ಕೆ ಜಾಗ ಕೊಡುವುದಷ್ಟೇ ನಮ್ಮ ಕೆಲಸ ಎನ್ನುತ್ತಾರೆ. ಬಂದ ನೂರಾರು ರೈತರಿಗೆ ಶೌಚಾಲಯದ ವ್ಯವಸ್ಥೆ ಸೇರಿದಂತೆ ನೀರು ನೆರಳು ವ್ಯವಸ್ಥೆ ಕಡ್ಡಾಯವಾಗಿ ಮಾಡಬೇಕು. ಇಲ್ಲಿರುವ ಶೌಚಾಲಯ ಗಿಡಗಂಟೆಯಿಂದ ಸುತ್ತುವರೆದಿದ್ದು ಈ ಬಗ್ಗೆ ಎಪಿಎಂಸಿ ಕಾರ್ಯದರ್ಶಿ ಗಮನ ಹರಿಸದಿರುವುದು ದುರಂತ ಎಂದರು.
ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ರೈತ ಸಂಘದ ಅಧ್ಯಕ್ಷ ಧನಂಜಯರಾಧ್ಯ, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಕಾರ್ಯದರ್ಶಿ ತೋಂಟಾರಾಧ್ಯ , ತುರುವೇಕೆರೆ ತಾಲೂಕು ಅಧ್ಯಕ್ಷ ಗಂಗಾಧರಯ್ಯ, ಸೀತಾರಾಮಯ್ಯ, ಬಾಳೇಗೌಡ್ರು , ಅರಳಿಕೆರೆ ಪ್ರಕಾಶ್, ಮರಳಪ್ಪ, ಜೈಪ್ರಕಾಶ್, ಚೇತನ್, ಬನಶಂಕ್ರಯ್ಯ, ಲೋಕೇಶ್, ಗಿರೀಶ್, ರಾಜಣ್ಣ, ಉಮೇಶ್, ಜುಂಜಣ್ಣ ಮತ್ತಿತರರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4