ಪಾವಗಡ: ತಾಲೂಕಿನ ನಾಗಲಮಡಿಕೆ ಹೋಬಳಿಗೆ ಸೇರಿದ ಪಳವಳ್ಳಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಿಂದ ಓಡಿ ಹೋಗಿದ್ದ 3 ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ.
ಶಿಕ್ಷಕರ ಕಿರುಕುಳ ಮತ್ತು ಹಲ್ಲೆಯಿಂದ ಬೇಸತ್ತ ಎಸ್.ಎಸ್.ಎಲ್.ಸಿ. ಓದುತ್ತಿದ್ದ ಈ ಮೂವರು ಮಕ್ಕಳು ಶಾಲೆಯಿಂದ ತಪ್ಪಿಸಿಕೊಂಡಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ. ವಸತಿ ನಿಲಯದಲ್ಲಿದ್ದ ಭೂಸೂರು ತಾಂಡದ ವಿರುಪಾಕ್ಷ, ಅಪ್ಪಾಜಿಹಳ್ಳಿಯ ವಿಷ್ಣುವರ್ಧನ ಹಾಗೂ ಪಾವುಗಡ ಪಟ್ಟಣದ ಹರ್ಷವರ್ಧನ ಎಂಬುವರು ಮಂಗಳವಾರ ಬೆಳಗ್ಗೆ ಉಪಹಾರ ಸೇವಿಸಿದ ಬಳಿಕ ಪ್ರಾರ್ಥನೆಗೆ ಹಾಜರಾಗದೆ ವಸತಿ ನಿಲಯದಲ್ಲೇ ಉಳಿದುಕೊಂಡಿದ್ದರು. ನಂತರ ಶಾಲೆಯಿಂದ ಹೊರಹೋಗಿ ನಾಪತ್ತೆಯಾಗಿದ್ದರು. ವಿದ್ಯಾರ್ಥಿಗಳ ಸ್ನೇಹಿತರು ನೀಡಿರುವ ಮಾಹಿತಿ ಪ್ರಕಾರ ವಸತಿ ಶಾಲೆಯ ಪ್ರಾಂಶುಪಾಲರಾದ ಲತಾ ಅವರು ಸಂಜೆ ವ್ಯಾಸಂಗದ ವೇಳೆಯಲ್ಲಿ ಎಲ್ಲಾ ಮಕ್ಕಳೂ ನೈಟ್ ಡ್ರೆಸ್ ಕಡ್ಡಾಯವಾಗಿ ಧರಿಸಬೇಕೆಂದು ಸೂಚಿಸಿದ್ದರು. ಕೆಲ ಮಕ್ಕಳ ಬಳಿ ನೈಟ್ ಡ್ರೆಸ್ ಇಲ್ಲದ ಕಾರಣ ಧರಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಕೋಪಗೊಂಡ ಪ್ರಾಂಶುಪಾಲರಾದ ಲತಾ ಅವರು ಸೋಮವಾರ ರಾತ್ರಿ ಡ್ರೈಪ್ ಪೈಪ್ ನಿಂದ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯಿಂದ ಭಯಭೀತಾರಾದ ಈ ಮೂವರು ವಿದ್ಯಾರ್ಥಿಗಳು ಶಾಲೆಯಿಂದ ಓಡಿ ಹೋಗಿದ್ದರು ಎಂದು ಆರೋಪಿಸಲಾಗಿದೆ.
ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಇದುವರೆವಿಗೂ ಒಂದೇ ಒಂದು ಸಿಸಿ ಟಿವಿ ಕ್ಯಾಮೆರಾ ಕೂಡ ಅಳವಡಿಸಿಲ್ಲ ಎಂದು ಅನೇಕ ಮಂದಿ ವಿದ್ಯಾರ್ಥಿಗಳ ಪೋಷಕರು ದೂರುತ್ತಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಪೋಷಕರ ಸಭೆ ಕರೆದು ಸಿಸಿ ಟಿವಿ ಅಳವಡಿಕೆಗೆ 300 ರಿಂದ 500 ರೂ.ಗಳ ಹಣ ಸಂಗ್ರಹ ಮಾಡಲಾಗಿತ್ತು. ಆದರೆ ಇದುವರೆವಿಗೂ ಒಂದೇ ಒಂದು ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಿಲ್ಲ ಎನ್ನಲಾಗಿದೆ. ವಿಷಯ ತಿಳಿದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ಮೂವರು ಮಕ್ಕಳ ಪತ್ತೆ ಹಚ್ಚಿದ್ದಾರೆ. ಈ ವಿದ್ಯಾರ್ಥಿಗಳು ತುಮಕೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದರು ಎನ್ನಲಾಗಿದ್ದು, ಕ್ಯಾತ್ಸಂದ್ರದಲ್ಲಿ ಅವರನ್ನು ಹುಡುಕಿ ಕರೆದುಕೊಂಡು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ ಪೋಷಕರು ಶಾಲಾ ಆಡಳಿತ ವ್ಯವಸ್ಥೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದು, ವಸತಿ ಶಾಲೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ವಸತಿ ಶಾಲೆಯ ಸಂಘಗಳ ಮುಖ್ಯಸ್ಥರನ್ನು ಒತ್ತಾಯಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
