ನಮ್ಮ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು ಜನರಿಗೇ ಇಷ್ಟವಾಗಿಲ್ಲ , ಅವುಗಳನ್ನು ಬಂದ್ ಮಾಡುವುದೇ ಒಳ್ಳೆಯದು ಎಂದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ, ನಾಯಕ ಎಂ ಲಕ್ಷ್ಮಣ್ ಅವರು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಸೋತ ಬಳಿಕ ಮೊದಲ ಸಲ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ನಿಲ್ಲಿಸುವುದೇ ಒಳ್ಳೆಯದು. ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಇಷ್ಟ ಆಗಿಲ್ಲ. ಬಿಜೆಪಿಗರು ಗ್ಯಾರಂಟಿ ವಿರುದ್ಧ ಮಾತಾಡ್ತಿದ್ರೂ ಜನ ಬೆಂಬಲಿಸಿದ್ದಾರೆ. ಹಾಗಾಗಿ ಜನರಿಗೆ ನಮ್ಮ ಗ್ಯಾರಂಟಿ ಇಷ್ಟ ಆಗಿಲ್ಲ ಅಂತಾನೇ ಅಲ್ವಾ? ಹೀಗಾಗಿ ಗ್ಯಾರಂಟಿ ಇಷ್ಟವಿಲ್ಲವೆಂದು ಫಲಿತಾಂಶ ಮೂಲಕ ತೋರಿಸಿದ್ದಾರೆ. ಆದ್ದರಿಂದ ಗ್ಯಾರಂಟಿ ಯೋಜನೆ ಬಗ್ಗೆ ಸಿಎಂ ಮರು ಪರಿಶೀಲನೆ ಮಾಡಿ ಅವುಗಳನ್ನು ಬಂದ್ ಮಾಡಬೇಕು ಎಂದು ಹೇಳಿಕೆ ನೀಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ(Parliament election) ಕನಿಷ್ಠ 14 ಕ್ಷೇತ್ರಗಳಲ್ಲಿ ಗೆಲುವು ನಿರೀಕ್ಷಿಸಿದ್ದ ಹಾಗೂ ಗ್ಯಾರಂಟಿ ಯೋಜನೆಗಳನ್ನು ಜನ ಮೆಚ್ಚಿದ್ದರೆ ಈ ಸಂಖ್ಯೆ 20 ಮುಟ್ಟಬಹುದು ಎಂದು ಭಾವಿಸಿದ್ದ ಕಾಂಗ್ರೆಸ್ಸಿಗರಿಗೆ 9 ಕ್ಷೇತ್ರಗಳಲ್ಲಿ ಗೆದ್ದಿರುವುದು ಸಮಾಧಾನ ತಂದಿಲ್ಲ. ಅದರಲ್ಲೂ ಮಹಿಳೆಯರಿಗೆ ನೇರವಾಗಿ ಮುಟ್ಟುವಂತಹ ಭಾಗ್ಯಲಕ್ಷ್ಮೀ ಹಾಗೂ ಶಕ್ತಿ ಯೋಜನೆಗಳಿಂದಾಗಿ ಈ ಚುನಾವಣೆಯಲ್ಲಿ ಪುರುಷರಲ್ಲದಿದ್ದರೂ ಮಹಿಳೆಯರು ಪಕ್ಷದ ಪರ ನಿಲ್ಲುತ್ತಾರೆ ಎಂದು ಬಲವಾಗಿ ಕಾಂಗ್ರೆಸ್ ನಂಬಿತ್ತು. ಆದರೆ ಲೆಕ್ಕಾಚಾರ ತಲೆಕೆಳಗಾಗಿದೆ. ಗ್ಯಾರಂಟಿ ಬದಲಿಗೆ ಜಾತಿ ಕೈ ಹಿಡಿದಿದೆ. ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆ ಸಾಧ್ಯವಾಗಿಲ್ಲ ಎಂದರೆ ಗ್ಯಾರಂಟಿ ಯೋಜನೆಗಳು ಜನರ ಮನಸ್ಸು ಗೆದ್ದಿಲ್ಲ. ಹೀಗಾಗಿ ಈ ಯೋಜನೆಗಳ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕು ಎಂದು ಶಾಸಕರು ಒತ್ತಡ ಹೇರಿದ್ದಾರೆ.
ಇಷ್ಟೇ ಅಲ್ಲದೆ ಕಾಂಗ್ರೆಸ್ ನ ಕೆಲ ನಾಯಕರು ಅನೌಪಚಾರಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಈ ವೇಳೆ ಗ್ಯಾರಂಟಿ ಯೋಜನೆ ಬಗ್ಗೆ ಪುನರ್ ಪರಿಶೀಲನೆ ನಡೆಯಬೇಕು ಎಂಬ ಅಭಿಪ್ರಾಯವನ್ನು ಬಹುತೇಕ ಶಾಸಕರು ಹೊಂದಿದ್ದಾರೆ ಎಂದು ಮುಖ್ಯಮಂತ್ರಿಯವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


