ತುಮಕೂರು: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ತಾವು ಬೆಳೆಯುವ ಬೆಳೆಗಳನ್ನು ವಿಮಾ ಸೌಲಭ್ಯಕ್ಕೊಳಪಡಿಸಲಿಚ್ಛಿಸುವ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಜಂಟಿ ಕೃಷಿ ನಿರ್ದೇಶಕ ರಮೇಶ್ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಬೆಳೆ ವಿಮಾ ಯೋಜನೆಯನ್ನು ಅನುಷ್ಟಾನ ಮಾಡಲು ಓರಿಯಂಟಲ್ ಜನರಲ್ ಇನ್ಯೂರೆನ್ಸ್ ಕಂಪನಿಯನ್ನು ನಿಗದಿ ಮಾಡಲಾಗಿದೆ.
ಅನಿಶ್ಚಿತ ಕೃಷಿಯಲ್ಲಿ ನಿಶ್ಚಿತ ಆದಾಯ ತರುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರವು 2024–25ನೇ ಸಾಲಿನ ಹಿಂಗಾರು ಹಂಗಾಮಿಗಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಮಳೆ ಅಥವಾ ಇತರ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಧಿಸೂಚಿತ ಘಟಕದಲ್ಲಿ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಠ ಶೇ.25ರಷ್ಟು ಬೆಳೆ ವಿಮೆ ನಷ್ಟ ಹಾಗೂ ಸ್ಥಳ ನಿರ್ಧಿಷ್ಠ ಪ್ರಕೃತಿ ವಿಕೋಪಗಳಿಂದ ಉಂಟಾಗುವ ನಷ್ಟವನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರ ನೀಡಲಾಗುವುದು.
ಸ್ಥಳ ನಿರ್ಧಿಷ್ಟ ಪ್ರಕೃತಿ ವಿಕೋಪಗಳಿಂದ ಉಂಟಾಗುವ ನಷ್ಟವನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲು ಈ ಯೋಜನೆಯಲ್ಲಿ ಅವಕಾಶವಿದೆ. ಅಧಿಸೂಚಿತ ವಿಮಾ ಘಟಕದಲ್ಲಿ ಬಿತ್ತನೆಯಾದ ನಂತರ ಕಟಾವಿಗೆ ಮೊದಲು ನಿರೀಕ್ಷಿತ ಇಳುವರಿಯು ಪ್ರಾರಂಭಿಕ ಇಳುವರಿಗಿಂತ ಶೇಕಡಾ 50ಕ್ಕಿಂತ ಕಡಿಮೆ ಇದ್ದರೆ, ವಿಮೆ ಮಾಡಿಸಿದ ರೈತರಿಗೆ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇಕಡಾ 25ರಷ್ಟು ಹಣವನ್ನು ವಿಮಾ ಸಂಸ್ಥೆಯು ಮುಂಚಿತವಾಗಿ ನೀಡುತ್ತದೆ.
ಈ ಯೋಜನೆಯಡಿ ಬೆಳೆಯನ್ನು ಜಮೀನಿನಲ್ಲೇ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಕಟಾವು ಮಾಡಿದ ಎರಡು ವಾರದೊಳಗೆ(ಹದಿನಾಲ್ಕು ದಿನಗಳು) ಪ್ರಕೃತಿ ವಿಕೋಪದಿಂದ ಬೆಳೆ ನಾಶವಾದರೆ ವೈಯಕ್ತಿಕವಾಗಿ ವಿಮಾ ಪರಿಹಾರ ನೀಡಲಾಗುವುದು. ರೈತರು ಬೆಳೆ ಹಾನಿಗೆ ಕಾರಣಗಳನ್ನು 72 ಗಂಟೆಗಳೊಳಗಾಗಿ ತಿಳಿಸತಕ್ಕದ್ದು.
ಜಿಲ್ಲೆಯ ಗುಬ್ಬಿ ತಾಲ್ಲೂಕು ಕಡಬ, ಕಸಬಾ, ಚೇಳೂರು ಹೋಬಳಿ; ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ; ಶಿರಾ ತಾಲ್ಲೂಕು ಕಸಬಾ, ಗೌಡಗೆರೆ, ಹುಲಿಕುಂಟೆ; ತುಮಕೂರು ತಾಲ್ಲೂಕಿನ ಕಸಬಾ(ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ), ಗೂಳೂರು; ತುರುವೇಕೆರೆ ತಾಲ್ಲೂಕು ಕಸಬಾ, ದಬ್ಬೇಘಟ್ಟ, ದಂಡಿನಶಿವರ, ಮಾಯಸಂದ್ರ; ಪಾವಗಡ ತಾಲ್ಲೂಕು ನಾಗಲಮಡಿಕೆ, ಕಸಬಾ; ಶಿರಾ ತಾಲ್ಲೂಕು ಬುಕ್ಕಾಪಟ್ಟಣ ಹೋಬಳಿ ಮಟ್ಟದಲ್ಲಿ ಹುರುಳಿ(ಮಳೆ ಆಶ್ರಿತ) ಬೆಳೆಯನ್ನು ಅಧಿಸೂಚಿಸಲಾಗಿದೆ.
ಮಧುಗಿರಿ ತಾಲ್ಲೂಕು ಐ.ಡಿ.ಹಳ್ಳಿ, ಪುರವರ; ಪಾವಗಡ ತಾಲ್ಲೂಕು ನಾಗಲಮಡಿಕೆ ಹೋಬಳಿಗಳಲ್ಲಿ ಮುಸುಕಿನ ಜೋಳ(ನೀರಾವರಿ)ಬೆಳೆ ಹಾಗೂ ಪಾವಗಡ ತಾಲ್ಲೂಕು ನಾಗಲಮಡಿಕೆ, ಕಸಬಾ; ಶಿರಾ ತಾಲ್ಲೂಕು ಬುಕ್ಕಾಪಟ್ಟಣ ಹೋಬಳಿಗಳಲ್ಲಿ ಕಡಲೆ(ಮಳೆ ಆಶ್ರಿತ) ಬೆಳೆಯನ್ನು ಅಧಿಸೂಚಿಸಲಾಗಿದೆ.
ವಿಮೆ ಕಂತು ಪಾವತಿಸಲು ಹುರುಳಿ(ಮಳೆ ಆಶ್ರಿತ) ಬೆಳೆಗೆ ನವೆಂಬರ್ 15, ಕಡಲೆ(ಮಳೆ ಆಶ್ರಿತ) ಬೆಳೆಗೆ ನವೆಂಬರ್ 30 ಹಾಗೂ ಮುಸುಕಿನ ಜೋಳ(ನೀರಾವರಿ) ಬೆಳೆಗೆ ಡಿಸೆಂಬರ್ 16 ಕಡೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q