ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ಕೊರಟಗೆರೆ: ಲೋಕಸಭಾ ಸಂಸತ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತಾ ಶಾ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ತಾಲ್ಲೂಕು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಕಚೇರಿ ಆವರಣದಲ್ಲಿ ಕೇಂದ್ರ ಗೃಹ ಸಚಿವರನ್ನು ದೇಶದಿಂದ ಗಡಿಪಾರು ಮಾಡುವಂತೆ ಪ್ರತಿಭಟನೆ ಮೂಲಕ ಆಗ್ರಹಿಸಿ ಗ್ರೇಡ್–2 ತಹಶೀಲ್ದಾರ್ ರಾಮ್ ಪ್ರಸಾದ್ ಮುಖೇನಾ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ದಲಿತ ಮುಖಂಡ ದಾಡಿ ವೆಂಕಟೇಶ್ ಮಾತನಾಡಿ, ಭಾರತದ ಸಂವಿಧಾನ ಶಿಲ್ಪಿ, ವಿಶ್ವಜ್ಞಾನಿ ಡಾ.ಬಿ.ಆರ್ ಅಂಬೇಡ್ಕರ್ ಬಗ್ಗೆ ಲೋಕಸಭಾ ಸಂಸತ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಯನ್ನು ದೇಶದ ಎಲ್ಲಾ ದಲಿತ ಸಂಘ-ಸಂಸ್ಥೆಗಳು ಖಂಡಿಸುತ್ತೇವೆ. ದಲಿತರು ಶೋಷಣೆಗೆ ಒಳಗಾಗಿದ್ದಾಗ ಯಾವ ದೇವರು ಸಹ ನಮ್ಮನ್ನು ಕಾಪಾಡಲಿಲ್ಲ ಸಂವಿಧಾನವೊಂದೇ ದಲಿತರಿಗೆ ರಕ್ಷಣೆ ನೀಡಿ ಸಮಾನತೆ ಕಲ್ಪಿಸಿರುವುದು ಎಂದು ಆಕ್ರೋಶ ಹೊರಹಾಕಿದರು.
ಸರ್ವ ಜನಾಂಗದವರು ಸಮಾನತೆ, ಸಹಬಾಳ್ವೆಯಿಂದ ಜೀವನ ನಡೆಸಲಿ ಪ್ರತಿಯೊಬ್ಬರಿಗೂ ನ್ಯಾಯ ಸಿಗಲಿ ಎಂದು ವಿಶ್ವಜ್ಞಾನಿ ಅಂಬೇಡ್ಕರ್ರವರು ದೇಶಕ್ಕೆ ಸಂವಿಧಾನದ ಮೂಲಕ ಸ್ವತಂತ್ರವಾಗಿ ಜೀವಿಸುವಂತಹ ಹಕ್ಕನ್ನು ಕಲ್ಪಿಸಿದ್ದಾರೆ. ಕೂಡಲೇ ಕೇಂದ್ರ ಗೃಹ ಸಚಿವರು ನೀಡಿದ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ಬಾಬಾ ಸಾಹೇಬರಿಗೆ ಗೌರವ ಸಲ್ಲಿಸಿ ಗೃಹ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ದೇಶದಾದ್ಯಂತ ದಲಿತ ಪರ ಸಂಘಟನೆಗಳಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಜೆಟ್ಟಿ ಅಗ್ರಹಾರ ನಾಗರಾಜು ಮಾತನಾಡಿ. ದಲಿತ ವಿರೋಧಿ ಬಿಜೆಪಿಯು ದೇಶಕ್ಕೆ ಅಂಬೇಡ್ಕರ್ ರವರು ನೀಡಿರುವ ಸಂವಿಧಾನ ಮಹಾಗ್ರಂಥಕ್ಕೆ ಅಪಮಾನ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೇ ಸಂಸತ್ತಿನ ಸದನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ದೇಶದಲ್ಲಿ ಕೋಮು ಗಲಭೆಗೆ ಕಾರಣವಾಗಿದೆ ಎಂದು ಕಿಡಿಕಾರಿದರು.
ಡಾ.ಬಿ.ಆರ್ ಅಂಬೇಡ್ಕರ್ರವರು ಸಾಮಾಜಿಕ ಚಿಂತನೆಯನ್ನು ಒಳಗೊಂಡು ಹಲವು ರಾಷ್ಟ್ರಗಳ ಸಂವಿಧಾನ ಅಧ್ಯಯನ ನಡೆಸಿ ದೇಶಕ್ಕೆ ಸಂವಿಧಾನ ನೀಡಿದ್ದಾರೆ. ಅವರು ನೀಡಿರುವ ಸಂವಿಧಾನದ ಅಡಿಯಲ್ಲಿಯೇ ಕಾನೂನು ಸುವ್ಯವಸ್ಥೆ ನಿರ್ಮಾಣವಾಗಿರುವುದು.
ಸಂವಿಧಾನದಿಂದಲೇ ಅಮಿತ್ ಶಾ ಜವಬ್ದಾರಿಯುತ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು, ಸಂವಿಧಾನ ವಿರೋಧಿ ಅಮಿತ್ ಶಾ ಅವರನ್ನು ದೇಶದಿಂದ ಗಡಿಪಾರು ಮಾಡುವಂತೆ ಎಂದು ಅಗ್ರಹ ಮಾಡಿದರು.
ಈ ವೇಳೆ ಪ.ಪಂ ಸದಸ್ಯ ಕೆ.ಎನ್. ನಟರಾಜ್, ದಲಿತ ಮುಖಂಡರಾದ ಚಿಕ್ಕರಂಗಯ್ಯ, ಕಾಮರಾಜನಹಳ್ಳಿ ದೊಡ್ಡಯ್ಯ, ದಾಸರಹಳ್ಳಿ ಶಿವರಾಮ್, ಗುಂಡಿನಪಾಳ್ಯ ನರಸಿಂಹಮೂರ್ತಿ, ಮಾಜಿ ಸೈನಿಕ ನರಸಿಂಹಮೂರ್ತಿ, ಹೊಳವನಹಳ್ಳಿ ನರಸಿಂಹಮೂರ್ತಿ, ಗಂಗಣ್ಣ, ವಿಭೂತಿ ಸಿದ್ದಪ್ಪ, ಹರೀಶ್, ನಾಗರಾಜು, ನಾಗೇಶ್, ವೀರಕ್ಯಾತಯ್ಯ ಸೇರಿದಂತೆ ರೈತ ಪರ ಮತ್ತು ಪ್ರಗತಿಪರ ಚಿಂತಕರು ಹಾಜರಿದ್ದರು.
ಸಂಘಟನೆಗಳಿಂದ ಉಗ್ರ ಹೋರಾಟದ ಎಚ್ಚರಿಕೆ:
ಇತ್ತೀಚಿಗೆ ದೆಹಲಿಯ ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತಾ ಶಾ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಬಗ್ಗೆಯೇ ಅವಹೇಳನಕಾರಿ ಮಾತನಾಡಿದ್ದು, ಸಚಿವ ಅಮಿತ್ ಶಾ ಕೂಡಲೇ ಕ್ಷಮೆಯಾಚಿಸಿ, ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಂವಿಧಾನ ವಿರೋಧಿಯಾದ ಇವರನ್ನು ದೇಶದಿಂದಲೇ ಗಡಿಪಾರು ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದಲಿತ ಪರ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ದ ದೇಶದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ದಲಿತ ಮುಖಂಡರು ಪ್ರತಿಭಟನೆಯಲ್ಲಿ ಎಚ್ಚರಿಕೆಯನ್ನು ನೀಡಿದರು.
ಅಂಬೇಡ್ಕರ್ ಪೂರ್ವ ಘಟ್ಟದಲ್ಲಿ ದಲಿತರು ಶೋಷಣೆಗೆ ಒಳಪಟ್ಟಾಗ ಯಾವುದೇ ಧರ್ಮವಾಗಲಿ, ಯಾವುದೇ ದೇವರಾಗಲಿ ಕಾಪಾಡಲಿಲ್ಲ. ನಮ್ಮ ರಕ್ಷಣೆಗೆ ನಿಂತಿದ್ದು ಅಂಬೇಡ್ಕರ್ರವರು ರಚಿಸಿದ ಭಾರತದ ಸಂವಿಧಾನ ಒಂದೇ. ಸಂವಿಧಾನ ಕೊಡುಗೆ ನೀಡಿದವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಕೂಡಲೇ ಅಮಿತ್ ಶಾ ಅಂಬೇಡ್ಕರ್ ಭಾವಚಿತ್ರ ಹಿಡಿದು ಸಾರ್ವಜನಿಕವಾಗಿ ಕ್ಷಮೇಯಾಚಿಸಿ, ತಮ್ಮ ಗೃಹ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
–ಜೆಟ್ಟಿ ಅಗ್ರಹಾರ ನಾಗರಾಜು
ರಾಜ್ಯ ಸಂಚಾಲಕ, ದಲಿತ ಸಂಘರ್ಷ ಸಮಿತಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx