ಬೇಲೂರು: ಸತತ ಮೂರು ದಿನಗಳ ಕಾರ್ಯಚರಣೆಯ ನಂತರ ಸಂಜೆ ಬಾಳಗುಲಿ ಸುಪದ ಹುಲ್ಲೆಮಕ್ಕಿ ಗ್ರಾಮದ ತೋಟದಲ್ಲಿ ವಿಕ್ರಾಂತ್ ಹೆಸರಿನ ಪುಂಡಾನೆಯನ್ನು ಯಶಸ್ವಿಯಾಗಿ ಹಿಡಿಯಲಾಗಿದೆ.
ತಾಲೂಕಿನ ಅರೇಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಬೀಡು ಬಿಟ್ಟು ಬೆಳೆ ನಾಶದೊಂದಿಗೆ ಪ್ರಾಣ ಹಾನಿಗೆ ಮುಂದಾಗುತ್ತಿದ್ದ ಮೂರು ಪುಂಡಾನೆಗಳನ್ನು ಹಿಡಿಯಲು ಕಳೆದ ಭಾನುವಾರದಿಂದಲೇ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿ ಮೊದಲ ದಿನವೇ ಯಶಸ್ವಿ ಕಾರ್ಯಚರಣೆ ನಡೆಸಿ ಒಂದು ಕಾಡಾನೆಯನ್ನು ಸೆರೆ ಹಿಡಿದು ಅಭಯಾರಣ್ಯಕ್ಕೆ ಬಿಟ್ಟು ಬಂದ ನಂತರ ಎರಡನೇ ಪುಂಡಾನೆ ವಿಕ್ರಾಂತ್ ಆನೆ ಹಿಡಿಯಲು ಸಕಲಸಿದ್ದತೆಗಳೊಂದಿಗೆ ಅಧಿಕಾರಿಗಳ ತಂಡ 7 ಸಾಕಾನೆಗಳ ತಂಡದೊಂದಿಗೆ ಮುಂದಾದರು.
ಸತತವಾಗಿ ಎರಡೂ ದಿನಗಳೂ 6 ಗಂಟೆಗಳ ಕಾಲ ಕಾರ್ಯಚರಣೆ ನಡೆಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಿಕ್ರಾಂತ್ ಆನೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡಿದ್ದ. ನ್ನೆ ಬೆಳಗ್ಗೆಯೇ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಥರ್ಮಲ್ ಡೋನ್ ಬಳಸಿ ಕಾಡೊಳಗಿದ್ದ ವಿಕ್ರಾಂತ್ ಆನೆಯ ಸುಳಿವು ಪಡೆದು ಸಾಕಾನೆಗಳೊಂದಿಗೆ ಕಾರ್ಯಾಚರಣೆಗಿಳಿದಿದ್ದರು.
ಇನ್ನೇನು ವಿಕ್ರಾಂತ್ ಆನೆ ಒಂಟಿಯಾಯಿತು ಎನ್ನುವಷ್ಟರಲ್ಲಿ ವಿಕ್ರಾಂತ್ ಆನೆಯ ಜತೆಗೆ ದೈತ್ಯಾಕಾರದ ಭೀಮಾ ಆನೆಯೂ ಸೇರಿಕೊಂಡಿತ್ತು. ಹೀಗಾಗಿ ಭೀಮಾ ಆನೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ ರೇಡಿಯೋ ಕಾಲರ್ ಅಳವಡಿಸಲು ಅಧಿಕಾರಿಗಳು ಮುಂದಾದರು. ಆದರೆ ಭೀಮಾ ಎಚ್ಚರ ತಪ್ಪದೇ ಇದ್ದುದರಿಂದಾಗಿ ರೇಡಿಯೋ ಕಾಲರ್ ಅಳವಡಿಕೆ ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ವಿಕ್ರಾಂತ್ ಪುಂಡಾನೆಯನ್ನು ಸೆರೆ ಹಿಡಿಯಲೇಬೇಕೆಂದು ಪಣ ತೊಟ್ಟ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಹರ ಸಾಹಸಪಟ್ಟು ಅರಿವಳಿಕೆ ಚುಚ್ಚುಮದ್ದು ನೀಡಿದರು. ಬಳಿಕ ಕರ್ನಾಟಕ ಭೀಮಾ, ಧನಂಜಯ, ಕಂಜನ್, ಏಕಲವ್ಯ, ಹರ್ಷ ಹಾಗೂ ಮಹೇಂದ್ರ ಆನೆಗಳ ಸಹಕಾರದೊಂದಿಗೆ ಯಶಸ್ವಿಯಾಗಿ ವಿಕ್ರಾಂತ್ ಆನೆಯನ್ನು ಸೆರೆ ಹಿಡಿಯಲಾಯಿತು.
ಕಾರ್ಯಚರಣೆಯಲ್ಲಿ ಸಿಸಿಎಫ್ ಐಡು ಕೊಂಡಲ, ಡಿಎಫ್‌ಒ ಸೌರಭ್ ಕುಮಾರ್, ಎಸಿಎಫ್ ಮೋಹನ್ ಕುಮಾರ್, ಖಲಂದರ್, ಮಧುಸೂದನ್, ವಲಯ ಅರಣ್ಯಾಧಿಕಾರಿಗಳಾದ ಯತೀಶ್, ಹೇಮಂತ್, ಇಟಿಎಫ್ ಆರ್.ಎಫ್‌ಒ ಸುನೀಲ್ ಸೇರಿದಂತೆ ಪಶು ಇಲಾಖೆ ಅಧಿಕಾರಿಗಳು ಮತ್ತು ಮಾವುತರು, ಪೊಲೀಸರು ಸೇರಿದಂತೆ ಸಿಬ್ಬಂದಿ ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4