ಹೆಚ್.ಡಿ.ಕೋಟೆ: ಪಟ್ಟಣದ ಪುರಸಭೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಸರ್ಕಾರದ ತೆರಿಗೆ ಹಣ ದುರುಪಯೋಗವಾಗಿದೆ, ಅಕ್ರಮ ಖಾತೆ ಮಾಡಿದ್ದಾರೆ, ಅಧಿಕಾರಿಗಳು ಅಕ್ರಮದಲ್ಲಿ ತೊಡಗಿದ್ದಾರೆ ಎಂದು ಪೌರ ಆಡಳಿತ ಸಚಿವಾಲಯಕ್ಕೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಕಳೆದ ಒಂಬತ್ತು ತಿಂಗಳ ಹಿಂದೆ ದೂರು ನೀಡಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದರು ಕೂಡ ಯಾವುದೇ ಕ್ರಮ ಆಗಿಲ್ಲ ಎಂದು ಆರೋಪಿಸಿ ಪುರಸಭಾ ಸದಸ್ಯ ಮಿಲ್ ನಾಗರಾಜು ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದಾರೆ.
ಪುರಸಭಾ ಮುಂಭಾಗ ಏಕಾಂಗಿಯಾಗಿ ಉಪವಾಸ ಆರಂಭಿಸಿರುವ ಅವರು, ಸದಸ್ಯರು, ಅಧಿಕಾರಿಗಳ ಮೇಲೆ ಕ್ರಮ ಆಗುವವರೆಗೂ ಸ್ಥಳದಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದಿದ್ದು, ಇವರಿಗೆ ಹಲವು ಪ್ರಗತಿಪರ ಸಂಘಟನೆಯ ಮುಖಂಡರು ಬೆಂಬಲ ವ್ಯಕ್ತಪಡಿಸಿದರು.
ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿದ ಸದಸ್ಯ ಮಿಲ್ ನಾಗರಾಜು, ಕಳೆದ ನಾಲ್ಕು ವರ್ಷದ ಹಿಂದೆ ಪುರಸಭೆಗೆ ಚುನಾಯಿತರಾದ ನಂತರ ಸಾರ್ವಜನಿಕವಾಗಿ ಪುರಸಭೆ ವತಿಯಿಂದ ಅಭಿವೃದ್ಧಿ ಕೆಲಸ ಕಾರ್ಯ ಮಾಡಿಕೊಡಲು ನಮ್ಮಿಂದ ಸಾಧ್ಯವಾಗಿಲ್ಲ, ಕಾರಣ ಅಧಿಕಾರಿಗಳು ನಮಗೆ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದರು.
ಸಾಮಾನ್ಯ ಸಭೆಯಲ್ಲಿ ಆಡಳಿತ ಮಂಡಳಿ ತೀರ್ಮಾನ ಮಾಡಿದ ಒಂದು ನಿರ್ಣಯವನ್ನು ಕೂಡ ಅಧಿಕಾರಿಗಳು ಕಾರ್ಯಗತಗೊಳಿಸಲು ಮುಂದಾಗದೆ ಅಕ್ರಮದಲ್ಲಿ ತೊಡಗಿ ಪುರಸಭೆ ಅಭಿವೃದ್ಧಿಗೆ ಮಾರಕವಾಗಿದ್ದಾರೆ ಎಂದು ದೂರಿದರು.
ಪುರಸಭಾ ವ್ಯಾಪ್ತಿಯಲ್ಲಿ ಇರುವ ಸರ್ಕಾರಿ ಜಾಗಗಳನ್ನು ಅಕ್ರಮವಾಗಿ ಹಣ ಉಳ್ಳವರಿಗೆ ಖಾತೆ ಮಾಡಿ ಕೊಟ್ಟಿದ್ದಾರೆ. ಈ ವಿಚಾರವಾಗಿ ಸಂಬಂಧಪಟ್ಟ ಪೌರಾಡಳಿತ ನಿರ್ದೇಶಕರ ಕಚೇರಿಗೆ ದೂರು ನೀಡಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿ 9 ತಿಂಗಳು ಕಳೆದರು ಕೂಡ, ಯಾವುದೇ ತನಿಖೆ ಮಾಡದೆ ದೂರನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂದು ದೂರಿದರು.
ರೆವಿನ್ಯು ಜಾಗಗಳನ್ನು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಖಾತೆ ಹಾಗೂ ಇ-ಸ್ವತ್ತುಮಾಡಿದ್ದಾರೆ. 2016-17 ನೇ ಸಾಲಿನಲ್ಲಿ ಇಲ್ಲಿವರೆಗೂ ಇಲ್ಲಿವರೆಗೂ ವಿತರಣೆಯಾದ ಆಶ್ರಯ ಮನೆಗಳ ಬಿಲ್ ಪಾವತಿ ಮಾಡುವುದರಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಕಂದಾಯ ಹೊಸ ಲಾತಿಯಲ್ಲಿ ಅವ್ಯವಹಾರ ನಡೆಸಿ ದಾಖಲಾತಿಗಳನ್ನು ಮರೆಮಾಚಿದ್ದಾರೆ ಎಂದು ಆರೋಪಿಸಿದರು.
ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಿರುವ ತೀರ್ಮಾನಗಳನ್ನು ಅನುಷ್ಠಾನಗೊಳಿಸುವುದರಲ್ಲಿ ವಿಫಲರಾಗಿದ್ದಾರೆ. ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ಅವ್ಯವಹಾರದ ಬಗ್ಗೆ ಶಾಸಕ ಅನಿಲ್ ಚಿಕ್ಕಮಾದು ಅವರು ಠರಾವು ಪುಸ್ತಕದಲ್ಲಿ ನಮೂದಿಸಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿಂದೆ ಅಧಿಕಾರ ನಡೆಸಿದ ಅಧ್ಯಕ್ಷರು, ಸ್ಥಾಯಿ ಸಮಿತಿಯ ಅಧ್ಯಕ್ಷರು, ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನಗೊಳಿಸದೆ ವಿಫಲರಾಗಿದ್ದಾರೆ. ಕಂದಾಯ ಅಧಿಕಾರಿಗಳು ನಿಯೋಜನೆಗೊಂಡು ಮೂರು 3 ತಿಂಗಳಾದರೂ ಇಂದಿನ ಅಧಿಕಾರಿ ಚಾರ್ಜ್ ಕೊಡದೆ ವಿಳಂಬ ಧೋರಣೆ ಅನುಸರಿಸುತ್ತಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ, ಈ ಸಮಸ್ಯೆ ಬಗೆಹರಿಸುವವರೆಗೂ ಅನಿರ್ದಿಷ್ಟವಾಗಿ ಮೂರು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ಪುರಸಭಾ ಸದಸ್ಯ ಮಿಲ್ ನಾಗರಾಜ್ ಅವರನ್ನು ಪುರಸಭಾ ಅಧ್ಯಕ್ಷೆ ಅನಿತಾ ನಿಂಗನಾಯಕ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯಾ ವೆಂಕಟೇಶ್ ಹಿಂಪಡೆಯುವಂತೆ ಮನವೊಲಿಸಲು ಪ್ರಯತ್ನ ಮಾಡಿದರು. ಆದರೆ ಅದಕ್ಕೆ ಜಗ್ಗದ ಮಿಲ್ ನಾಗರಾಜು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬಂದು ತನಿಖೆಗೆ ಆದೇಶಿಸಿದ ನಂತರ ಸತ್ಯಾಗ್ರಹವನ್ನು ಕೈಬಿಡುವುದಾಗಿ ತಿಳಿಸಿದರು. ನಂತರ ಅಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ಸ್ಥಳದಿಂದ ತೆರಳಿದರು. ನಂತರ ಸತ್ಯಾಗ್ರಹ ಮುಂದುವರಿದಿದೆ.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz