ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಸಂದಿರುವ ಹಿನ್ನಲೆಯಲ್ಲಿ ಈ ಬಾರಿ ಅದ್ದೂರಿ ಅಮೃತ ಮಹೋತ್ಸವ ಆಚರಿಸಲು ಇಡೀ ದೇಶ ಸಜಾಗಿದೆ. ಹರ್ ಘರ್ ತಿರಂಗಾ ಯೋಜನೆಯಡಿ ಪ್ರತಿ ಮನೆ ಮನೆಗಳ ಮೇಲೂ ತ್ರಿವರ್ಣ ಧ್ವಜ ಹಾರಿಸಲು ತೀರ್ಮಾನಿಸಲಾಗಿದೆ. ಇಂತಹ ಸಂದರ್ಭದಲ್ಲೇ ಕೆಲವು ಕಿಡಿಗೇಡಿಗಳು ರಾಷ್ಟ್ರ ಧ್ವಜವನ್ನು ಬೀದಿಗೆ ಎಸೆಯುವ ಮೂಲಕ ಅಪಮಾನವೆಸಗಿದ್ದಾರೆ.
ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲೇ ಕಿಡೆಗೇಡಿಗಳು ಚಾಮರಾಜಪೇಟೆಯಲ್ಲಿ ರಾಷ್ಟ್ರ ಧ್ವಜವನ್ನು ಬೀದಿಗೆ ಎಸೆಯುವ ಮೂಲಕ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಈಗಾಗಲೇ ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದ ಭುಗಿಲೆದ್ದಿರುವ ಸಮಯದಲ್ಲೇ ಕಸದ ರಾಶಿಯಲ್ಲಿ ನಾಡಿನ ಹೆಮ್ಮೆಯ ಸಂಕೇತವಾದ ರಾಷ್ಟ್ರ ಧ್ವಜ ಬೀದಿಯಲ್ಲಿ ಬಿದ್ದಿರುವುದು ರಾಷ್ಟ್ರ ಪ್ರೇಮಿಗಳನ್ನು ಆತಂಕಕ್ಕೀಡು ಮಾಡಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಹರ್ ಘರ್ ತಿರಂಗಾ ಯೋಜನೆಯನ್ನು ಜಾರಿಗೆ ತಂದು ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಾಳೆಯಿಂದ ಆ.15ರವರೆಗೆ ದೇಶದ ಎಲ್ಲಾ ಮನೆಗಳ ಮೇಲೂ ರಾಷ್ಟ್ರ ಧ್ವಜ ಹಾರಿಸುವಂತೆ ಕರೆ ನೀಡಿದ್ದಾರೆ.
ಈಗಾಗಲೇ ಕೆಲವು ದೇಶಭಕ್ತರು ತಮ್ಮ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಿ ಗಮನ ಸೆಳೆದಿದ್ದಾರೆ. ಬಹುತೇಕ ಮಂದಿ ನಾಳೆಯಿಂದ ತಮ್ಮ ಮನೆಗಳ ಮೇಲೆ ಧ್ವಜ ಹಾರಿಸಲು ಸಿದ್ದರಾಗಿದ್ದಾರೆ.
ಇಡೀ ದೇಶ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಗೆ ಸಿದ್ದರಾಗಿರುವ ಸಂದರ್ಭದಲ್ಲೇ ಕೆಲವು ಕಿಡಿಗೇಡಿಗಳು ಧ್ವಜವನ್ನು ಬೀದಿಗೆ ಎಸೆದಿರುವುದರಿಂದ ಹರ್ ಘರ್ ತಿರಂಗಾ ಯೋಜನೆ ಘೋಷಣೆಗೂ ಅಪಮಾನ ಮಾಡಿದಂತಿದೆ.
ಹರ್ ಘರ್ ತಿರಂಗಾ ಯೋಜನೆಯಡಿ ಮನೆ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಲು ಸಹಕಾರಿಯಾಗುವಂತೆ ಬಿಬಿಎಂಪಿ ಅಕಾರಿಗಳು ಜನರಿಗೆ ಕೇವಲ 22 ಹಾಗೂ 10 ರೂ.ಗಳಿಗೆ ದೊಡ್ಡ ಮತ್ತು ಸಣ್ಣ ಗಾತ್ರದ ರಾಷ್ಟ್ರ ಧ್ವಜ ಮಾರಾಟ ಮಾಡುತ್ತಿದೆ.
ಬಿಬಿಎಂಪಿ ಮಾರಾಟ ಮಾಡಿರುವ ಕೆಲವು ಧ್ವಜಗಳಲ್ಲಿ ಲೋಪ ಕಂಡು ಬಂದಿದ್ದು, ಅಂತಹ ಧ್ವಜಗಳನ್ನು ವಾಪಸ್ ಪಡೆಯಲು ತೀರ್ಮಾನಿಸಿ ಸೂಕ್ತ ಧ್ವಜಗಳ ಮಾರಾಟ ಮಾಡುತ್ತಿರುವ ಸನ್ನಿವೇಶದಲ್ಲೇ ಬೀದಿಯಲ್ಲಿ ಧ್ವಜ ಕಂಡು ಬಂದಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy