ಇನ್ನು ಮುಂದೆ ಕೆಎಸ್ ಆರ್ ಟಿಸಿಯು ದೂರದ ಮಾರ್ಗಗಳಲ್ಲಿ ಸಂಚಾರ ನಡೆಸುವ ಬಸ್ ಗಳನ್ನು ಪ್ರಯಾಣಿಕರ ಅವಶ್ಯಕತೆಗಾಗಿ ವಿರಾಮ ನಿಲುಗಡೆ ಮಾಡಲು ಮಾರ್ಗಸೂಚಿ ಪ್ರಕಾರ ದರ ಪಟ್ಟಿಗಳು ಅನ್ವಯವಾಗಲಿದೆ. ಮುಖ್ಯವಾಗಿ ಫಲಹಾರ ಮಂದಿರದ ಮಾಲೀಕರು ವಾಹನ ನಿಲುಗಡೆ ಶುಲ್ಕ ಹೆಚ್ಚಳವಾದ ಹಿನ್ನೆಲೆಯಲ್ಲಿ ತಿಂಡಿ–ತಿನಿಸುಗಳಿಗೆ ಹೆಚ್ಚಿನ ದರ ವಿಧಿಸುವುದನ್ನು ತಡೆಯಲು ವಾಹನ ನಿಲುಗಡೆ ಶುಲ್ಕವನ್ನು ಕೆಎಸ್ ಆರ್ ಟಿಸಿ (KSRTC) ಪರಿಷ್ಕರಣೆ ಮಾಡಿದೆ.
ಸದ್ಯ ದೂರ ಸಂಚಾರದ ಬಸ್ ಗಳನ್ನು ಅನುಕೂಲಕರ ಸ್ಥಳದಲ್ಲಿ ನಿಲ್ಲಿಸಲು ಉತ್ತಮ ಸೌಲಭ್ಯ ಹೊಂದಿರುವ ಫಲಹಾರ ಮಂದಿರಗಳನ್ನು ಆಯ್ಕೆ ಮಾಡಲಾಗುತ್ತದೆ. ಹೌದು, ಬಸ್ಸುಗಳನ್ನು ಫಲಹಾರ ಮಂದಿರದ ಬಳಿ 10 ರಿಂದ 15 ನಿಮಿಷಗಳ ಕಾಲ ಮಾತ್ರ ನಿಲುಗಡೆ ನೀಡುವುದು. ಪ್ರತಿ ಫಲಹಾರ ಮಂದಿರದ ಮುಂದೆ ನಿಲ್ಲುವ ಅನುಸೂಚಿಗಳ ಸಮಯದ ಬಗ್ಗೆ ವೇಳಾಪಟ್ಟಿಯಲ್ಲಿ ದಾಖಲಿಸಿ, ಪರಿಷ್ಕೃತ ವೇಳಾಪಟ್ಟಿಯನ್ನು ಹೊರಡಿಸಲು ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳು ಕ್ರಮ ಕೈಗೊಳ್ಳುವುದು.
ದರ ಪರಿಷ್ಕರಣೆ ಪ್ರಕಾರ ಸಾಮಾನ್ಯ, ವೇಗದೂತ ಮತ್ತು ತಡೆರಹಿತ ಕರ್ನಾಟಕ ಸಾರಿಗೆ ವಾಹನಗಳ ಪರಿಷ್ಕೃತ ದರ 60 ರೂ.ಗಳು. ಕರ್ನಾಟಕ ವೈಭವ, ರಾಜಹಂಸ ಮತ್ತು ನಾನ್ ಎಸಿ ಸ್ಲೀಪರ್ ವಾಹನಗಳ ಪರಿಷ್ಕೃತ ಶುಲ್ಕ 75 ರೂ. ಮತ್ತು ಐರಾವತ, ಐರಾವರ ಕ್ಲಬ್ ಕ್ಲಾಸ್, ಐರಾವತ ಡೈಮಂಡ್ ಕ್ಲಾಸ್, ಎಸಿ ಸ್ಲೀಪರ್, ಅಂಬಾರಿ ಮತ್ತು ಇತರೆ ಪ್ರತಿಷ್ಠಿತ ಸಾರಿಗೆಗಳು 100 ರೂ.ಗಳು. ನಿಲುಗಡೆ ಶುಲ್ಕದ ಮೇಲೆ ಶೇ.15ರಷ್ಟು ಜಿಎಸ್ ಟಿ ಅನ್ವಯವಾಗುತ್ತದೆ.
ಹೊಸದಾಗಿ ವಾಹನಗಳ ನಿಲುಗಡೆ ಕೋರಿ ಅರ್ಜಿ ಸಲ್ಲಿಸುವ ಫಲಹಾರ ಮಂದಿರದ ಮಾಲೀಕರಿಂದ ಅರ್ಜಿ ಶುಲ್ಕ (ಮರುಪಾವತಿಯಾಗದ ಶುಲ್ಕ) ಪಾವತಿಸಿಕೊಂಡು ನಂತರ ಪರಿವೀಕ್ಷಣಾ ಕಾರ್ಯ ಕೈಗೊಳ್ಳಬೇಕು. ಒಂದು ತಿಂಗಳ ನಿಲುಗಡೆ ಶುಲ್ಕವನ್ನು ಭದ್ರತಾ ಠೇವಣಿಯನ್ನಾಗಿ ಫಲಹಾರ ಮಂದಿರದ ಮಾಲೀಕರಿಂದ ಪಾವತಿಸಿಕೊಳ್ಳುವುದು.
ಪ್ರತಿ ತಿಂಗಳು ನಿಗದಿಗೊಳಿಸಿದ ಮೊತ್ತವನ್ನು ಮುಂಗಡವಾಗಿ (ಆಯಾ ತಿಂಗಳ 5ನೇ ತಾರೀಖಿನೊಳಗಾಗಿ) ಪಾವತಿಸಿಕೊಳ್ಳಬೇಕು. ಫಲಹಾರ ಮಂದಿರದ ಬಳ ನಿಲುಗಡೆಗೊಳಿಸುವ ಬಸ್ಸುಗಳ ಸಂಖ್ಯೆಯನ್ನು ನಿಗದಿಗೊಳಿಸಿ ಫಲಹಾರ ಮಂದಿರದ ಮಾಲೀಕರಿಗೆ ತಿಳಿಸಬೇಕು. ಫಲಹಾರ ಮಂದಿರದಿಂದ ಬರುವ ಆದಾಯವನ್ನು ವಿಭಾಗ/ ಘಟಕಗಳಲ್ಲಿ ಪ್ರತ್ಯೇಕವಾದ ಲೆಕ್ಕಶೀರ್ಷಿಕೆ ಅಡಿಯಲ್ಲಿ ಕಾಯ್ದಿರಿಸುವುದು.
ಬೇರೆ ವಿಭಾಗಗಳ ವಾಹನಗಳ ಸಂಬಂಧ ಕರಾರು ಒಪ್ಪಂದ ಮಾಡಿಕೊಂಡ. ಆಯಾ ವಿಭಾಗದ ಆದಾಯವನ್ನು ಸಂಬಂಧಿಸಿದ ವಿಭಾಗಕ್ಕೆ ವರ್ಗಾಯಿಸುವುದು. ರಾತ್ರಿ 11 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನಗಳನ್ನು ನಿಲುಗಡೆ ಮಾಡಿದಲ್ಲಿ ಯಾವುದೇ ದರವನ್ನು ವಿಧಿಸುವಂತಿಲ್ಲ. ಮಾರ್ಗದ ಬದಿಯ ಫಲಹಾರ ಮಂದಿರಗಳನ್ನು ಒಂದು ವರ್ಷದ ಅವಧಿಗೆ ಮಾತ್ರ ಕರಾರು ಒಪ್ಪಂದ ಮಾಡಿಕೊಳ್ಳುವುದು.
ಫಲಹಾರ ಮಂದಿರದ ಮಾಲೀಕರು ನಿಗದಿಗೊಳಿಸಿದ ದಿನಾಂಕದೊಳಗಾಗಿ ನಿಲುಗಡೆ ಶುಲ್ಕವನ್ನು ಪಾವತಿಸದಿದ್ದಲ್ಲಿ , ಫಲಹಾರ ಮಂದಿರವಿರುವ ವ್ಯಾಪ್ತಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸದರಿ ಫಲಹಾರ ಮಂದಿರದಲ್ಲಿ ನಿಲುಗಡೆಗೊಳ್ಳದಿರುವಂತೆ ಕ್ರಮ ವಹಿಸುವುದು.
ದೂರ ಸಂಚಾರದ ಅನುಸೂಚಿಗಳನ್ನು (ಕನಿಷ್ಟ 100 ಕಿ. ಮೀ.ಗಳ ಮಾರ್ಗ) ಮಾತ್ರ ಮಾರ್ಗ ಬದಿಯ ಫಲಹಾರ ಮಂದಿರಗಳ ಮುಂದೆ ನಿಲ್ಲಿಸಲು ಕ್ರಮ ಕೈಗೊಳ್ಳುವುದು. ಉಳಿದ ಅನುಸೂಚಿಗಳಿಗೆ ಈ ಸೌಲಭ್ಯ ನೀಡುವಂತಿಲ್ಲ. ನಿಗಮವು ಗುರುತಿಸಿರುವ ಫಲಹಾರ ಮಂದಿರಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಕಡಿಮೆ/ ಸ್ಪರ್ಧಾತ್ಮಕ ದರದಲ್ಲಿ ಪ್ರಯಾಣಿಕರಿಗೆ ನೀಡುವುದು ಮತ್ತು ತಿಂಡಿ ತಿನಿಸುಗಳ ದರಪಟ್ಟಿಯನ್ನು ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಬೇಕು. ದೂರು/ ಸಲಹೆ ಪುಸ್ತಕವನ್ನು ಪ್ರಯಾಣಿಕರಿಗೆ ಕಾಣುವಂತೆ ಇಟ್ಟಿರಬೇಕು.
ಚಾಲನಾ ಸಿಬ್ಬಂದಿಗಳು ಫಲಹಾರ ಮಂದಿರದಲ್ಲಿ ವಾಹನ ನಿಲುಗಡೆಗೊಳಿಸಿರುವ ಬಗ್ಗೆ ಮಾರ್ಗಪತ್ರದಲ್ಲಿ ಹೋಟೆಲ್‌ನ ಮಾಲೀಕರಿಂದ ಸಹಿ ಮತ್ತು ಮೊಹರು ಪಡೆಯಬೇಕು. ಫಲಹಾರ ಮಂದಿರದ ಮಾಲೀಕರು ಬಸ್ಸುಗಳ ಆಗಮನ ನಿರ್ಗಮನದ ವಿವರಗಳನ್ನು ಪ್ರತ್ಯೇಕ ರಿಜಿಸ್ಟರ್‌ನಲ್ಲಿ ದಾಖಲಿಸಿ, ಚಾಲನಾ ಸಿಬ್ಬಂದಿಗಳ ಸಹಿಯನ್ನು ಪಡೆಯುವುದು.
ಫಲಹಾರ ಮಂದಿರದಲ್ಲಿನ ತಿಂಡಿ-ತಿನಿಸು, ಶುಚಿತ್ವ ಹಾಗೂ ಮೂಲಭೂತ ಸೌಲಭ್ಯಗಳ ಕುರಿತು ನ್ಯೂನ್ಯತೆಗಳು ಕಂಡು ಬಂದಲ್ಲಿ, ಸಂಪರ್ಕಿಸಬೇಕಾದ ಅಧಿಕಾರಿಯ ವಿವರ ಮತ್ತು ದೂರವಾಣಿ ಸಂಖ್ಯೆಯ ಫಲಕ ಪ್ರದರ್ಶಿಸಬೇಕು.
ಮಂದಿರದ ತಿಂಡಿ/ ತಿನಿಸುಗಳ ಗುಣಮಟ್ಟ/ ದರಗಳು ಶೌಚಾಲಯದ ಶುಚಿತ್ವ, ಮೂಲಭೂತ ಸೌಕರ್ಯ ಮತ್ತು ನಿಗದಿತ ದರಕ್ಕಿಂತ (MRP) ಹೆಚ್ಚಿನ ದರಗಳಲ್ಲಿ ಮಾರಾಟ ಮಾಡುವುದು ಹಾಗೂ ಫಲಹಾರ ಮಂದಿರದ ಸಿಬ್ಬಂದಿ ದುವರ್ತನೆ ಬಗ್ಗೆ ದೂರುಗಳು ಬಂದಲ್ಲಿ , ದೂರುಗಳನ್ನು ಪರಿಶೀಲಿಸಿ ಪ್ರತಿ ದೂರಿಗೆ ರೂ.500 ರಂತೆ ದಂಡ ವಿಧಿಸುವುದು. ಒಂದು ತಿಂಗಳನಲ್ಲಿ ಮೂರಕ್ಕಿಂತ ಹೆಚ್ಚಿನ ದೂರುಗಳು ಬಂದಲ್ಲಿ ಫಲಹಾರ ಮಂದಿರದ ಮಾಲೀಕರಿಗೆ 7 ದಿನಗಳ ನೋಟಿಸ್ ನೀಡಿ ಒಪ್ಪಂದವನ್ನು ರದ್ದುಗೊಳಿಸುವುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


